ADVERTISEMENT

ವಿಜಯಪುರ: ನೀರಿನ ಕೊರತೆ; ಈಜಲು ಇಲ್ಲ ಅವಕಾಶ

ವಿಜಯಪುರದ ಕನಕದಾಸ ಬಡಾವಣೆಯಲ್ಲಿರುವ ಈಜುಗೊಳ

ಬಸವರಾಜ ಸಂಪಳ್ಳಿ
Published 24 ಏಪ್ರಿಲ್ 2025, 6:35 IST
Last Updated 24 ಏಪ್ರಿಲ್ 2025, 6:35 IST
ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಏಕೈಕ ಈಜುಗೊಳ 
ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಏಕೈಕ ಈಜುಗೊಳ    

ವಿಜಯಪುರ: ಇಲ್ಲಿನ ಕನಕದಾಸ ಬಡಾವಣೆಯಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಏಕೈಕ ಈಜುಗೊಳಕ್ಕೆ ನೀರಿನ ಕೊರತೆ ಎದುರಾಗಿದೆ. ಪರಿಣಾಮ ಬೇಸಿಗೆಯ ಈ ದಿನಗಳಲ್ಲಿ ಬಿಸಿಲಿನ ತಾಪದಿಂದ ಪಾರಾಗಲು ಒಂದಷ್ಟು ದಿನ ಈಜಬೇಕು, ಮಕ್ಕಳಿಗೆ ಈಜು ಕಲಿಸಬೇಕು ಎಂಬುವವರಿಗೆ ನಿರಾಶೆ ಮೂಡಿಸಿದೆ. 

ಬೇಸಿಗೆಯ ಈ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಈಜುಗೊಳಕ್ಕೆ ಅಗತ್ಯ ಇರುವಷ್ಟು ನೀರು ಪೂರೈಸಲು ಮಹಾನಗರ ಪಾಲಿಕೆ ಮತ್ತು ಜಲಮಂಡಳಿ ನಿರಾಕರಿಸಿವೆ. ಹೀಗಾಗಿ ಈ ಬೇಸಿಗೆಯಲ್ಲಿ ಹೊಸಬರಿಗೆ ಈಜುಗೊಳಕ್ಕೆ ಅವಕಾಶ ಲಭಿಸುತ್ತಿಲ್ಲ. ಆದರೆ, ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವವರಿಗೆ ಮಾತ್ರ ಈಜುಗೊಳಕ್ಕೆ ಪ್ರವೇಶ ಮುಕ್ತವಾಗಿದೆ. 

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ರಾಜಶೇಖರ ದೈವಾಡಿ, ‘ಈಜುಗೊಳಕ್ಕೆ ಸದ್ಯ ಮೂರು ನಳಗಳ ಸಂಪರ್ಕ ಇದೆ. ಈ ನಳಗಳಿಂದ 2.5ಯಿಂದ 3 ಇಂಚು ನೀರು ಬರುತ್ತದೆ. ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವ 230 ಜನರಿಗೆ ಯಾವುದೇ ತೊಂದರೆ ಇಲ್ಲ. ಅವರಿಗೆ ಅಗತ್ಯ ಇರುವಷ್ಟು ನೀರು ಸಾಕಾಗುತ್ತಿದೆ. ಆದರೆ, ಹೊಸದಾಗಿ ಬರುವವರಿಗೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ’ ಎಂದರು.

ADVERTISEMENT

‘ಈಜುಗೊಳವನ್ನು ಪ್ರತಿದಿನ ಬ್ಯಾಕ್‌ ವಾಶ್‌ ಮಾಡಬೇಕಾಗುತ್ತದೆ. ಇದಕ್ಕೆ ನೀರು ಹೆಚ್ಚು ಬಳಕೆಯಾಗುತ್ತದೆ. ಆದರೆ, ಪಾಲಿಕೆಯಿಂದ ಅಷ್ಟು ನೀರು ಪೂರೈಕೆಯಾಗುತ್ತಿಲ್ಲ. ಇದಕ್ಕಾಗಿ ಹೊಸದಾಗಿ 4 ಇಂಚಿನ ಪೈಪ್‌ ಅಳವಡಿಸಲು ಯೋಜನೆ ಸಿದ್ಧವಾಗುತ್ತಿದೆ. ಇದಕ್ಕೆ ಜಲಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿಗಳು ಒಪ್ಪಿದ್ದಾರೆ. ಇದು ಸಾಧ್ಯವಾದರೆ ಈಗಿನ ಸಮಸ್ಯೆ ನಿವಾರಣೆಯಾಗಲಿದೆ' ಎಂದರು.

‘ಟ್ಯಾಂಕರ್‌ ನೀರು ಅಥವಾ ಕೊಳವೆಬಾವಿ ನೀರು ಬಳಸಿದರೆ ಈಜುಗೊಳದ ಫಿಲ್ಟರ್ ಸಿಸ್ಟಂಗೆ ಈ ಗಡಸು ನೀರಿನಿಂದ ತೊಂದರೆಯಾಗುತ್ತದೆ. ಕೊಳದಲ್ಲಿ ಪಾಚಿಕಟ್ಟುವುದು, ಗ್ಯಾಲರಿ, ಜಾಲರಿಗೆ ತುಕ್ಕು ಹಿಡಿಯುತ್ತದೆ. 10 ವರ್ಷ ಬಾಳಿಕೆ ಬರಬಹುದಾದ ಈಜುಗೊಳ ಕೇವಲ ಒಂದು ವರ್ಷದಲ್ಲೇ ಹಾಳಾಗುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

‘ಈಜುಗೊಳದ ನೀರು ಶುದ್ಧೀಕರಿಸಲು ಆಲಂ ಜಲ್‌, ಫೌಡರ್‌ ಹೆಚ್ಚು ಹಾಕಿದರೆ ಈಜುಗಾರರಿಗೆ ಕಣ್ಣು ಉರಿ ಬರುತ್ತದೆ, ಮಕ್ಕಳಿಗೆ ಅಲರ್ಜಿ ಆಗುತ್ತದೆ. ಹೀಗಾಗಿ ಹೊಸದಾಗಿ ಅವಕಾಶ ನೀಡುವುದನ್ನು ಬಂದ್‌ ಮಾಡಿದ್ದೇವೆ’ ಎಂದು ಹೇಳಿದರು.

‘ಈಜುಗೊಳ 6 ಲಕ್ಷ ಲೀಟರ್‌ ನೀರಿನ ಸಾಮರ್ಥ್ಯ ಹೊಂದಿದೆ. ದಿನವೊಂದಕ್ಕೆ 1 ಲಕ್ಷ ಲೀಟರ್‌ ನೀರು ಬೇಕಾಗುತ್ತದೆ. ಅಗತ್ಯ ಇರುವಷ್ಟು ನೀರು ಲಭಿಸಿದರೆ ಪ್ರತಿದಿನ 400 ಜನರಿಗೆ ಈಜಲು ಅವಕಾಶ ಕಲ್ಪಿಸಬಹುದು’ ಎಂದು ತಿಳಿಸಿದರು.

ಸದ್ಯದ ಸ್ಥಿತಿಯಲ್ಲಿ ಈಜುಗೊಳ ನಿರ್ವಹಿಸಬಹುದು . ಹೊಸದಾಗಿ 300 ಜನ ಈಜಲು ಅವಕಾಶ ಕೇಳುತ್ತಿದ್ದಾರೆ. ಅವರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ 
-ರಾಜಶೇಖರ ದೈವಾಡಿ ಉಪ ನಿರ್ದೇಶಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.