ವಿಜಯಪುರ: ಒಳಮೀಸಲಾತಿ ಜಾರಿಗೆ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾದಿಗ ಸಮುದಾಯಗಳ ಸಂಘಟನೆಗಳ ಒಕ್ಕೂಟದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ರ‍್ಯಾಲಿ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು. ಒಕ್ಕೂಟದ ನೂರಾರು ಮುಖಂಡರು, ಯುವಕರು ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬೇಡಿಕೆ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು.
ಯುವ ಮುಖಂಡ ಉಮೇಶ ಕಾರಜೋಳ ಮಾತನಾಡಿ, ‘ಒಳಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಆದರೆ, ರಾಜ್ಯದಲ್ಲಿರುವ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಾತ್ರ ಇದಕ್ಕೆ ಬೆಲೆ ನೀಡುತ್ತಿಲ್ಲ. ಮಾದಿಗ ಸಮುದಾಯಕ್ಕೆ ದೊಡ್ಡ ಅನ್ಯಾಯ ಮಾಡುತ್ತಿದೆ’ ಎಂದು ಆರೋಪಿಸಿದರು.
‘ಒಳಮೀಸಲಾತಿ ಎನ್ನುವುದು ಸಂವಿಧಾನ ಕರುಣಿಸಿರುವ ಹಕ್ಕು, ಶೋಷಿತ ಸಮುದಾಯಗಳಲ್ಲಿಯೇ ಅತಿ ಹಿಂದುಳಿದಿರುವ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ಕಳೆದ ವರ್ಷ ಐತಿಹಾಸಿಕ ತೀರ್ಪು ನೀಡಿದೆ’ ಎಂದರು.
‘ಮೊದಲ ಸಚಿವ ಸಂಪುಟದಲ್ಲಿಯೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಮಾತು ನೀಡಿದ್ದರು, ಪ್ರಣಾಳಿಕೆಯಲ್ಲೂ ಘೋಷಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ ನಂತರ ಮಾತು ತಪ್ಪಿ ಕಾಲಹರಣಕ್ಕಾಗಿ ನ್ಯಾ.ನಾಗಮೋಹನ್‌ದಾಸ್ ಆಯೋಗ ರಚಿಸಿತು. ನಂತರ 40 ದಿನಗಳಲ್ಲಿ ವರದಿ ಪಡೆಯುವುದಾಗಿ ಹೇಳಿತು. ಆದರೆ, ಆರು ತಿಂಗಳು ಉರುಳಿವೆ’ ಎಂದು ಟೀಕಿಸಿದರು.
‘ಈಗಾಗಲೇ ತೆಲಂಗಾಣ, ಆಂಧ್ರ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯಾಗಿದೆ. ಅಹಿಂದ ನಾಯಕರು ಎಂದು ತಮ್ಮ ಬೆನ್ನು ತಟ್ಟಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿ ಏಕೆ ಮಾಡುತ್ತಿಲ್ಲ? ಯಾವ ಶಕ್ತಿಗಳ ಒತ್ತಡಕ್ಕೆ ಮಣಿದಿದ್ದಾರೆ’ ಎಂದು ಅವರು ಪ್ರಶ್ನಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಎಸ್.ಎಸ್. ಲೋಟಗೇರಿ, ಭೀಮು ಮೇಲಿನಮನಿ, ಸಿದ್ದು ಪೂಜಾರಿ, ಯಲ್ಲು ಇಂಗಳಗಿ, ಅಶೋಕ ಕರೆಕಲ್, ಸಂತೋಷ ತಳಕೇರಿ, ಸಾಯಬಣ್ಣ ಪುರದಾಳ, ಶಿವು ಬಗಲಿ, ಆಕಾಶ ಮನಗೂಳಿ, ಶ್ರೀನಾಥ ಬೈರವಾಡಗಿ, ಸುರೇಶ ಗಚ್ಚಿನಮನಿ, ಎಂ.ಆರ್. ದೊಡಮನಿ, ಪರಶುರಾಮ ರೋಣಿಹಾಳ, ವಿಠ್ಠಲ ಆಸಂಗಿ, ದತ್ತು ಬಂಡೆನ್ನವರ, ಸದಾನಂದ ಗುನ್ನಾಪುರ, ವಿಠ್ಠಲ ನಡುವಿನಕೇರಿ ಪಾಲ್ಗೊಂಡಿದ್ದರು.
ಮುಂಬರುವ ಅಧಿವೇಶನದ ಒಳಗಾಗಿ ಒಳಮೀಸಲಾತಿ ಜಾರಿಗೊಳಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸದಿದ್ದರೆ ಹೋರಾಟದ ಸ್ವರೂಪ ತೀವ್ರಗೊಳಿಸಲಾಗುವುದು
–ಉಮೇಶ ಕಾರಜೋಳ ಯುವ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.