ADVERTISEMENT

ಹಿಂಗಾರು ಹಂಗಾಮಿಗೆ ಮಾ. 31 ರವರೆಗೆ ಕಾಲುವೆಗೆ ನೀರು -ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 16:15 IST
Last Updated 13 ಮಾರ್ಚ್ 2021, 16:15 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ವಿಜಯಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಹಿಂಗಾರು ಹಂಗಾಮಿಗೆ ಮಾರ್ಚ್‌31 ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ನೀರಾವರಿ ಸಲಹಾ ಸಮಿತಿ(ಐಸಿಸಿ) ಅಧ್ಯಕ್ಷ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ನವೆಂಬರ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಮಾರ್ಚ್‌ 21 ರ ವರೆಗೆ ಕಾಲುವೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಆದರೆ, ವಿವಿಧೆಡೆ ಉಳಿಕೆ ನೀರಿನ ಕಾರಣ, ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ 10 ದಿನಗಳ ಕಾಲ ಹೆಚ್ಚುವರಿಯಾಗಿ ಕಾಲುವೆಗೆ ನೀರು ಹರಿಯಲಿದೆ ಎಂದು ಅವರು ತಿಳಿಸಿದರು.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿ ಕಳೆದ ಸಾಲಿಗೆ ಹೋಲಿಸಿದಾಗ ನೀರಿನ ಸಂಗ್ರಹಣೆಯಲ್ಲಿ 7.37 ಟಿಎಂಸಿ ಕೊರತೆಯಿತ್ತು. ಈ ವರ್ಷದಲ್ಲಿ ಮಿತವ್ಯಯವನ್ನು ಸಾಧಿಸಿ ಮಾರ್ಚ್‌ 12ಕ್ಕೆ ಈ ಕೊರತೆಯನ್ನು 2.80 ಟಿಎಂಸಿ ಅಡಿಗೆ ತಗ್ಗಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ವಿಧಾನಸಭೆ ಕಲಾಪಗಳು ಇರುವುದರಿಂದ, ಅಧಿಕಾರಿಗಳಿಂದ ಅಣೆಕಟ್ಟಿನ ನೀರಿನ ಸಂಗ್ರಹದ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮಾರ್ಚ್‌ 12 ರಂದು ಎರಡು ಜಲಾಶಯಗಳಲ್ಲಿ ಬಳಕೆಯೋಗ್ಯ 40.4 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, ಬಾಕಿ ಉಳಿದಿರುವ ನೀರಾವರಿ ದಿನಗಳಿಗೆ ಹಾಗೂ ಜೂನ್ 30 ರವರೆಗೆ ಕುಡಿಯುವ ನೀರು, ಕೆರೆ ಭರ್ತಿ ಸೇರಿದಂತೆ ಅಗತ್ಯ ಬಳಕೆಗೆ 24.105 ಟಿಎಂಸಿ ಅಡಿ ಸಂಗ್ರಹಣೆ ಇದೆ ಎಂದರು.

ಇದನ್ನು ಹೊರತು ಪಡಿಸಿ ಲಭ್ಯವಾಗುವ 15.895 ಟಿಎಂಸಿ ಅಡಿ ನೀರನ್ನು 10 ದಿನ ಹೆಚ್ಚುವರಿಯಾಗಿ ಕಾಲುವೆಗೆ ಹರಿಸಲು‌ ನಿರ್ಧರಿಸಲಾಗಿದೆ ಎಂದರು.

ಕಾಲುವೆಗಳ ದುರಸ್ತಿಯ ಕ್ಲೋಸರ್ ಕಾಮಗಾರಿಗಳನ್ನು ಏಪ್ರಿಲ್ 1 ರಿಂದ ಆರಂಭಿಸಿ ಜೂನ್ 15 ರೊಳಗೆ ಪೂರ್ಣ ಗೊಳಿಸಲು ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

2021-22ನೇ ಸಾಲಿನ ಮುಂಗಾರು ಹಂಗಾಮಿಗೆ ಅನುವುಗೊಳಿಸಲು ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.