ವಿಜಯಪುರ: ದೇಶದ ಭದ್ರತೆ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ ಇಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಗಳನ್ನು ಗುರಿಯಾಗಿಸಿ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಮುಸ್ಲಿಂ ಉಗ್ರರು ದಾಳಿ ನಡೆಸಿದ್ದರೂ ಕಾಂಗ್ರೆಸ್ ಮುಖಂಡರು ಧರ್ಮ ಕೇಳಿ ಉಗ್ರರು ದಾಳಿ ನಡೆದಿಲ್ಲ ಎಂದು ಮುಸ್ಲಿಂ ಓಲೈಕೆ ರಾಜಕಾರಣ ನಡೆಸುತ್ತಿರುವುದು ಖಂಡನೀಯ ಎಂದು ಹೇಳಿದರು.
‘ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದಿಂದ ದಾಳಿ ನಡೆದಿದೆ, ಸೂಕ್ಷ್ಮ ಜಾಗದಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಿರಲಿಲ್ಲ, ಸರ್ವ ಪಕ್ಷ ಸಭೆಗೆ ಪ್ರಧಾನಿ ಬರಲಿಲ್ಲ’ ಎಂಬ ಕಾಂಗ್ರೆಸ್ ಆರೋಪ ಸರಿಯಲ್ಲ. ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮುಖಂಡರನ್ನು ಕೇಳಿ ಆಡಳಿತ ನಡೆಸುವ ಅಗತ್ಯ ಬಂದಿಲ್ಲ, ಅವರು ಆಡಳಿತ ನಡೆಸಲು ಸಮರ್ಥರಿದ್ದಾರೆ ಎಂದರು.
ಶಿಕ್ಷಣ ಇಲಾಖೆ ಅನಾಥ:
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಅನಾಥವಾಗಿದೆ. ಸಚಿವರು, ಶಾಸಕರಿಗೆ ಶಿಕ್ಷಣ ಇಲಾಖೆ ಆದ್ಯತೆಯಾಗಿ ಉಳಿದಿಲ್ಲ. ಕಾಯಂ ಡಿಡಿಪಿಐ, ಬಿಇಒಗಳಿಲ್ಲ, ಶಿಕ್ಷಣ ಇಲಾಖೆಯಲ್ಲಿ ಹಣಕ್ಕಾಗಿ ವರ್ಗಾವಣೆ ದಂಧೆ ನಡೆದಿರುವ ಪರಿಣಾಮ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಪಾತಾಳಕ್ಕೆ ಕುಸಿದಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸಚಿವರಿಬ್ಬರ ಒಳ ಜಗಳದಿಂದ ಹಾಗೂ ಸಚಿವರು, ಶಾಸಕರಿಗೆ ಲಂಚ ಕೊಡಲಾಗದೇ ಜಿಲ್ಲೆಯಗೆ ಹೊಸದಾಗಿ ಡಿಡಿಪಿಐ ಆಗಿ ಬರಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ದೂರಿದರು.
ಜಿಲ್ಲೆಯ ಡಿಡಿಪಿಐ ಹುದ್ದೆಗೆ ಮೂವರ ಹೆಸರು ಶಿಫಾರಸು ಆದರೂ ಇದುವರೆಗೆ ಯಾರನ್ನೂ ನೇಮಕ ಮಾಡಿಲ್ಲ. ಶಿಕ್ಷಣ ಇಲಾಖೆ ದುಸ್ಥಿತಿಗೆ ತಲುಪಿದೆ. ಆಡಳಿತ ಕುಸಿದು ಹೋಗಿದೆ ಎಂದರು.
ಮುಂಬರುವ ಶೈಕ್ಷಣಿಕ ಸಾಲಿನಲ್ಲಾದರೂ ಜಿಲ್ಲೆಯ ಎಸ್ ಎಸ್ ಎಲ್ ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಗೆ ಸಮರ್ಥ, ದಕ್ಷ ಹಾಗೂ ಪ್ರಾಮಾಣಿಕ ಡಿಡಿಪಿಐ, ಬಿಇಒಗಳನ್ನು ನಿಯೋಜಿಸಬೇಕು, ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ರಾಜಕೀಯ, ವರ್ಗಾವಣೆ ದಂದೆ ತಡೆಯಬೇಕು, ಫಲಿತಾಂಶ ಸುಧಾರಣೆಗೆ ಅಗತ್ಯ ಪ್ರೇರಣೆ, ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮುಖಂಡರಾದ ಉಮೇಶ ಕಾರಜೋಳ, ಚಂದ್ರಶೇಖರ ಕವಟಗಿ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಶರಣಬಸು ಕುಂಬಾರ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.