ADVERTISEMENT

ಹೃದಯದಿಂದ ಬರೆಯುವುದು ಕವನ: ಬಸವಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 16:26 IST
Last Updated 19 ಮಾರ್ಚ್ 2023, 16:26 IST
ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ನಡೆದ ಕವನ ಬರಹ ಕಾರ್ಯಕ್ರಮವನ್ನು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ  ಉದ್ಘಾಟಿಸಿದರು
ವಿಜಯಪುರ ನಗರದ ಜ್ಞಾನಯೋಗಾಶ್ರಮದಲ್ಲಿ ನಡೆದ ಕವನ ಬರಹ ಕಾರ್ಯಕ್ರಮವನ್ನು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ  ಉದ್ಘಾಟಿಸಿದರು   

ವಿಜಯಪುರ: ಹೃದಯದಿಂದ ಬರೆದದ್ದು ಕವನವಾಗುತ್ತದೆ. ಅದು ಜ್ಞಾನ ಸಂಪತ್ತು, ಭಕ್ತಿಯ ಸಂಪತ್ತಾಗಿ ಈ ದೇಶದಲ್ಲಿ ಒಂದು ಪರಂಪರೆಯನ್ನು ಬೆಳೆಸಬಲ್ಲದು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.

ಧಾರವಾಡದ ಕನ್ನಡ ಬುಕ್ ಆಫ್ ರಿಕಾರ್ಡ್ಸ್‌ ಮತ್ತು ಚನ್ಹೈನ ಯುನಿವರ್ಸಲ್ ಅಚಿವರ್ಸ್ ಬುಕ್ ಆಫ್ ರಿಕಾರ್ಡ್ಸ್‌ ಆಶ್ರಯದಲ್ಲಿ ನಗರದ ಜ್ಞಾನಯೋಗಾಶ್ರಮದಲ್ಲಿ ನಡೆದ ಕವನ ಬರಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರದ್ದಾನಂದ ಸ್ವಾಮೀಜಿ ಮಾತನಾಡಿ, ಈ ದೇಶ ಕಾವ್ಯಮಯವಾಗಬೇಕು, ಶಿವಮಯವಾಗಬೇಕು ಎಂದು ಸಿದ್ದೇಶ್ವರ ಶ್ರೀಗಳ ಅಪೇಕ್ಷೆಯಾಗಿತ್ತು ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಾಹಿತಿ ಶಂಕರ ಬೈಚಬಾಳ ಅವರು ‘ನಾನಿನ್ನು ನಿದ್ರಿಸುವೆ’ ಎಂಬ ಹೆಸರಿನ ಸಿದ್ದೇಶ್ವರ ಶ್ರೀಗಳ ಜೀವನ ಬರಹದ ಕವನವನ್ನು ಸಭೆಯಲ್ಲಿ ಬರೆದು ಬಸವಲಿಂಗ ಮಹಾಸ್ವಾಮಿಗಳಿಗೆ ಅರ್ಪಿಸಿದರು.

ವಿ.ಸಿ. ನಾಗಠಾಣ ಮಾತನಾಡಿ, ಬರೆದದ್ದಲ್ಲ ಕವನವಲ್ಲ ಭಾಷೆಯ ಮೇಲಿನ ಹಿಡಿತ ಕವನಕ್ಕೆ ಶಕ್ತಿಯನ್ನು ತರಬಲ್ಲದು ಎಂದು ಹೇಳಿದರು.

ಅಮೃತಾನಂದ ಸ್ವಾಮಿಗಳು ಮಾತನಾಡಿ, ಮಾನವರ ಮನದ ಮೈಲಿಗೆ ಕಳೆಯಲು ಕಾವ್ಯ ಸಹಕಾರಿಯಾಗಬಲ್ಲದು ಎಂದರು.

ವಿವಿಧೆಡೆಯಿಂದ ಬಂದಿದ್ದ 500ಕ್ಕೂ ಹೆಚ್ಚು ಕವಿಗಳು ತಮ್ಮ ಕವನವನ್ನು ಏಕಕಾಲಕ್ಕೆ ಬರೆಯುವ ಮುಖಾಂತರ ವಿಶಿಷ್ಟ ದಾಖಲೆ ನಿರ್ಮಿಸಿದರು. ಈರಣ್ಣ ಬೇಕಿನಾಳ, ಮಹಾಂತೇಶ ಸಂಗಮ, ಪ್ರಕಾಶ ಜಹಾಗೀರದಾರ, ಸಂಗಮೇಶ ಕರೆಪ್ಪಗೋಳ, ಗಿರಿಜಾ ಪಾಟೀಲ, ಡಾ. ಮಲ್ಲಿಕಾರ್ಜುನ ಮೇತ್ರಿ, ಶಿವಾಜಿ ಮೋರೆ ಮುಂತಾದ ಸಾಹಿತಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಭಾಗವಹಿಸಿದ ಕವಿಗಳಿಗೆ ಕೊನೆಯಲ್ಲಿ ಪ್ರಮಾಣ ಪತ್ರ ಹಾಗೂ ದಾಖಲೆಯ ಗೌರವ ಫಲಕ ನೀಡಲಾಯಿತು.

ಎಂ.ಎಸ್. ಚಾಂದಕವಟೆ, ವಿ.ಡಿ.ಐಹೊಳ್ಳಿ, ಎಸ್.ಎಂ. ಹಿರೇಮಠ, ಮಂಜುನಾಥ ಬಾರಗೇರ, ಸದಾನಂದ ಏಳಗಂಟಿ, ಎನ್.ಎಂ. ಬಿರಾದಾರ, ವಿ.ಜಿ. ಅಳ್ಳಗಿ, ಮಲ್ಲಿಕಾರ್ಜುನ ಮೇತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.