ನಾಲತವಾಡ: ಸಮೀಪದ ಬಸವಾಸಗರ ಜಲಾಶಯಕ್ಕೆ ಸೋಮವಾರ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ (ಕೆಬಿಜೆಎನ್‌ಎಲ್) ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಜಲಾಶಯದ ಕ್ರಸ್ಟ್‌ಗೇಟ್‌ಗಳ ಕಾರ್ಯಾಚರಣೆ, ನಿರ್ವಹಣೆ, ಬೂದಿಹಾಳ–ಪೀರಾಪುರ ಏತ ನೀರಾವರಿ, ಸ್ಕಾಡಾ ಗೇಟ್‌ಗಳು, ಎಡದಂಡೆ ಮುಖ್ಯಕಾಲುವೆ, ಉಪಕಾಲುವೆಗಳ ಕಾರ್ಯ ನಿರ್ವಹಣೆ ಕುರಿತು ಮುಖ್ಯ ಎಂಜಿನಿಯರ್ ಆರ್. ಮಂಜುನಾಥ ಹಾಗೂ ಇತರೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೆಲವು ವಿಷಯಗಳ ಕುರಿತು ಸಲಹೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಲುವೆ ಅಂಚಿನ ರೈತರಿಗೆ ನೀರು ತಲುಪಿಸುವುದು ಮಹತ್ವದ ಉದ್ದೇಶವಾಗಿದೆ. ಹೀಗಾಗಿ, ಕಾಲುವೆ ಜಾಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ’ ಎಂದರು.
‘ಕಾಮಗಾರಿಯು ಪೂರ್ಣಗೊಂಡಿದ್ದರ ಕುರಿತು ವರದಿ ಸಲ್ಲಿಸುವುದರ ಜೊತೆಗೆ ಜಲಾಶಯಕ್ಕೆ ಸಂಬಂಧಿಸಿದ ಕಾಮಗಾರಿಗಳು, ಉದ್ಯಾನ ನಿರ್ಮಿಸುವುದು ಮತ್ತು ಜಲಾಶಯದ ಭದ್ರತೆಗೆ ಧಕ್ಕೆ ಬಾರದಂತೆ ಪ್ರವಾಸೋದ್ಯಮ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ಅಣೆಕಟ್ಟು ಸುರಕ್ಷತೆಗೆ ಒತ್ತು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತುಕೊಳ್ಳಲಾಗುವುದು’ ಎಂದು ಹೇಳಿದರು.
ಅಧೀಕ್ಷಕ ಎಂಜಿನಿಯರ್ ರಮೇಶ ರಾಠೋಡ, ಕಾರ್ಯನಿರ್ವಾಹಕ ಎಂಜಿನಿಯರ್ ಹಣಮಂತ ಕೊಣ್ಣೂರು, ಎಇಇಗಳಾದ ವಿದ್ಯಾಧರ, ರಾಘವೇಂದ್ರ ಕುಲಕರ್ಣಿ, ಶಂಕರ ಹಡಲಗೇರಿ, ಮಹಾಲಿಂಗಪ್ಪ ಭಜಂತ್ರಿ, ವಿಜಯಕುಮಾರ ಅರಳಿ, ಬಾಲಸುಬ್ರಮಣ್ಯಂ, ಬಾಲಚಂದ್ರ, ವಿರೇಶ, ಆರ್‌ಎಫ್‌ಒ ಯಶವಂತ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.