ವಿಜಯಪುರ: ‘ಸಾಮಾನ್ಯ ಕಾರ್ಯಕರ್ತನಿಗೂ ಪಕ್ಷ ಟಿಕೆಟ್ ಕೊಟ್ಟಾಗ ಎಲ್ಲಾ ಕಾರ್ಯಕರ್ತರು ಗೆಲ್ಲಿಸಲು ಬೆನ್ನಿಗೆ ನಿಲ್ಲುತ್ತಾರೆ ಎನ್ನುವುದಕ್ಕೆ ನಾನೇ ಸಾಕ್ಷಿ’ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಲೋಕಸಭಾ ಚುನಾವಣೆ ಅಂಗವಾಗಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ಚುನಾವಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.
‘ರಾಜ್ಯ ಬೆಳಗಾವಿ, ರಾಯಚೂರು, ಬಳ್ಳಾರಿ, ಧಾರವಾಡ ಸೇರಿದಂತೆ ಬೇರೆ ವಿಭಾಗಗಳಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಮಾಡಿದಾಗಲೂ ವಿಜಯಪುರ ಜಿಲ್ಲೆಯ ಕಾರ್ಯಕರ್ತರು ಅತ್ಯಂತ ಪ್ರೀತಿ ವಿಶ್ವಾಸ ತೋರಿಸಿದ್ದಾರೆ’ ಎಂದು ತಿಳಿಸಿದರು.
‘ಚುನಾವಣೆ ಎದುರಿಸುವಾಗ ಅನೇಕ ಸುಲಭ ಹಾಗೂ ಕಠಿಣ ಕೆಲಸಗಳು ವಿಜಯಪುರ ಜಿಲ್ಲೆಯಿಂದಲೂ ಬಂದಿದ್ದವು. ಅದೆಲ್ಲವನ್ನು ಕಾರ್ಯಗತ ಮಾಡಿಕೊಂಡು ಹುಬ್ಬಳ್ಳಿ-ಧಾರವಾಡದಲ್ಲಿ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಕೊಡುತ್ತಾರೆಂಬುದು ಯಕ್ಷಪ್ರಶ್ನೆಯಾಗಿತ್ತು. ಆದರೆ, ಪಕ್ಷ ಕಠಿಣ ನಿರ್ಧಾರವನ್ನು ತೆಗೆದುಕೊಂಡು ಅತ್ಯಂತ ತುರುಸಿನ ಚುನಾವಣೆಯಾಗಿತ್ತು. ಅಂತಹ ಸಂದರ್ಭದಲ್ಲಿ ಇಬ್ಬರು ಮೂವರನ್ನು ಹೊರತುಪಡಿಸಿದರೆ ಬೇರೆ ಕಾರ್ಯಕರ್ತರು ಹೊರಗೆ ಹೋಗದಂತೆ ನೋಡಿಕೊಂಡಿದ್ದೆವು’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ‘ಲೋಕಸಭಾ ಚುನಾವಣೆಯನ್ನು ಅತ್ಯಂತ ಶಿಸ್ತುಬದ್ಧ ಹಾಗೂ ಯಶಸ್ವಿ ಚುನಾವಣೆ ಆಗಬೇಕು. ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಎಲ್ಲ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಚುನಾವಣೆಯನ್ನು ಎದುರಿಸಬೇಕು’ ಎಂದು ಹೇಳಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ಸಂಜೀವ ಐಹೊಳೆ, ಪ್ರಕಾಶ ಅಕ್ಕಲಕೋಟ, ಸಾಬು ಮಾಶ್ಯಾಳ, ಸ್ವಪ್ನಾ ಕಣಮುಚನಾಳ, ಚಂದ್ರಶೇಖರ ಕವಟಗಿ, ಈರಣ್ಣ ರಾವೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.