ADVERTISEMENT

ಜ್ಞಾನ ತಣಿಸುವ ಪ್ರಯೋಗಾಲಯ

ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪನೆ; ವಿದ್ಯಾರ್ಥಿಗಳಲ್ಲಿ ಸಂಭ್ರಮ

ಸುಭಾಸ ಎಸ್.ಮಂಗಳೂರ
Published 20 ಜೂನ್ 2019, 11:33 IST
Last Updated 20 ಜೂನ್ 2019, 11:33 IST
ವಿಜಯಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಪ್ರಯೋಗಾಲಯದಲ್ಲಿ ಅಧ್ಯಯನದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರಗಳು/ ಸಂಜೀವ ಅಕ್ಕಿ
ವಿಜಯಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಪ್ರಯೋಗಾಲಯದಲ್ಲಿ ಅಧ್ಯಯನದಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರಗಳು/ ಸಂಜೀವ ಅಕ್ಕಿ   

ವಿಜಯಪುರ: ಪ್ರೌಢಶಾಲಾ ಮಕ್ಕಳಿಗೆ ಪ್ರಾಯೋಗಿಕ ವಿಜ್ಞಾನವನ್ನು ಬೋಧಿಸಲು ಅನುಕೂಲವಾಗುವಂತೆ ಇಲ್ಲಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಿರ್ಮಿಸಿರುವ ಅತ್ಯಾಧುನಿಕ, ಅತ್ಯಾಕರ್ಷಕ ಪ್ರಯೋಗಾಲಯ ಗಮನ ಸೆಳೆಯುತ್ತಿದೆ.

ನಗರದ ಹೃದಯ ಭಾಗದಲ್ಲಿರುವ ಈ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಸದ್ಯ 122 ವಿದ್ಯಾರ್ಥಿಗಳು ಓದುತ್ತಿದ್ದಾರೆ. ₹ 1.50 ಲಕ್ಷ ವೆಚ್ಚದಲ್ಲಿ ಕೊಠಡಿಯನ್ನು ನವೀಕರಣಗೊಳಿಸಿ, ಪ್ರಯೋಗಾಲಯ ಸಿದ್ಧಪಡಿಸಲಾಗಿದೆ. ಈ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಏನೆಲ್ಲ ಇವೆ?: ಪ್ರಯೋಗಾಲಯದಲ್ಲಿ 300ಕ್ಕೂ ಹೆಚ್ಚು ಬಗೆಯ ಜೀವ ನಮೂನೆಗಳು, ಅಪರೂಪದ ಸಮುದ್ರ ಕುದುರೆ, ಅಕ್ಟೋಪಸ್, ಕಶೇರುಕ, ಅಕಶೇರುಕಗಳು, ರೇಶ್ಮಿ ಹುಳುವಿನ ಜೀವನ ಚಕ್ರ, ಅದಿರುಗಳು, ಖನಿಜಗಳು, ವಿವಿಧ ಅಳತೆಯ ಮಾದರಿಗಳು, ಗಾಜಿನ ನಮೂನೆಗಳು, ಕಾಂತತ್ವ, ಶಕ್ತಿ, ಬೆಳಕು, ಎಲೆಕ್ಟ್ರಾನಿಕ್ಸ್‌, ಸೂಕ್ಷ್ಮದರ್ಶಕ ಯಂತ್ರಗಳು, ಪ್ರಾಜೆಕ್ಟೈಲ್ ಸೂಕ್ಷ್ಮದರ್ಶಕ ಯಂತ್ರ, ಮಾನವ ದೇಹದ ಅಂಗಗಳು, ಅಸ್ತಿ ಪಂಜರ, ಹೃದಯ, ಭೌತವಿಜ್ಞಾನ ಮತ್ತು ರಸಾಯನ ವಿಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳು, ರಸಾಯನಗಳು ಲಭ್ಯ ಇವೆ.

ADVERTISEMENT

‘8 ರಿಂದ 10ನೇ ತರಗತಿ ವಿಜ್ಞಾನ ಪಠ್ಯದಲ್ಲಿರುವ ಎಲ್ಲ ಪ್ರಯೋಗಗಳನ್ನು ನಮ್ಮ ಪ್ರಯೋಗಾಲಯದಲ್ಲಿ ಕೈಗೊಳ್ಳಲು ಅವಕಾಶವಿದೆ. ಎಲ್ಲ ಉಪಕರಣಗಳೂ ಲಭ್ಯ ಇವೆ. ಜಿಲ್ಲೆಯಲ್ಲಿ ಮಾದರಿ ಪ್ರಯೋಗಾಲಯವನ್ನು ನಿರ್ಮಿಸಬೇಕು ಎಂಬುದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕನಸಾಗಿತ್ತು. ಅದರಂತೆ ಇದನ್ನು ಸಿದ್ಧಪಡಿಸಲಾಗಿದೆ’ ಎಂದು ವಿಜ್ಞಾನ ಶಿಕ್ಷಕ ನಾರಾಯಣ ಬಾಬಾನಗರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯಮಟ್ಟದ ಇನ್‌ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ದಕ್ಷಿಣ ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನ, ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿಕೆಗೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಪ್ರಯೋಗಾಲಯ ಮಕ್ಕಳಿಗೆ ವರವಾಗಲಿದೆ’ ಎಂದು ಮಾಹಿತಿ ನೀಡಿದರು.

‘ವಿದ್ಯಾರ್ಥಿಗಳ ಕುತೂಹಲದ ಪ್ರಶ್ನೆಗಳಿಗೆ ಉತ್ತರ ನೀಡಲು ಡ್ರಾಪ್ ಬಾಕ್ಸ್ ಅಳವಡಿಸಿದ್ದೇವೆ. ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ತಮ್ಮಲ್ಲಿನ ಸಂದೇಹಗಳನ್ನು ಬರೆದು ಈ ಡಬ್ಬಿಯಲ್ಲಿ ಹಾಕಬೇಕು. ವಾರಕ್ಕೊಮ್ಮೆ ಅದನ್ನು ತೆಗೆದು ಅವರ ಸಂದೇಹಗಳಿಗೆ ಉತ್ತರ ನೀಡಲಾಗುತ್ತದೆ. ಆಯ್ದ ಅತ್ಯುತ್ತಮ ಪ್ರಶ್ನೆಗಳಿಗೆ ಬಹುಮಾನ ವಿತರಿಸಲಾಗುತ್ತದೆ. ಅದೇ ರೀತಿ ಪ್ರತಿ ತಿಂಗಳ ನಾಲ್ಕನೇ ಶನಿವಾರ ಸಾರ್ವಜನಿಕರಿಗಾಗಿ ವಿಜ್ಞಾನ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.