ADVERTISEMENT

ಶಾಲಾ ಆವರಣದಲ್ಲಿ ‘ವಿಜ್ಞಾನ ಪಾರ್ಕ್‌’

ಹಂದಿಗನೂರ ಸರ್ಕಾರಿ ಪ್ರೌಢಶಾಲೆ ಯಶೋಗಾಥೆ, 2005ರಲ್ಲಿ ಸ್ಥಳಾಂತರಗೊಂಡಿರುವ ಶಾಲೆ

ಶಾಂತೂ ಹಿರೇಮಠ
Published 9 ನವೆಂಬರ್ 2019, 9:57 IST
Last Updated 9 ನವೆಂಬರ್ 2019, 9:57 IST
ಹಂದಿಗನೂರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ಬಯಲು ವಿಜ್ಞಾನ ಪಾರ್ಕ್‌ನಲ್ಲಿ ಬೋಧನೆ ಮಾಡುತ್ತಿರುವುದು (ಎಡಚಿತ್ರ), ಪ್ರಯೋಗಾಲಯದಲ್ಲಿ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು
ಹಂದಿಗನೂರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿರುವ ಬಯಲು ವಿಜ್ಞಾನ ಪಾರ್ಕ್‌ನಲ್ಲಿ ಬೋಧನೆ ಮಾಡುತ್ತಿರುವುದು (ಎಡಚಿತ್ರ), ಪ್ರಯೋಗಾಲಯದಲ್ಲಿ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು   

ಸಿಂದಗಿ: ತಾಲ್ಲೂಕಿನ ಹಂದಿಗನೂರ ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ರಸ್ತೆಗೆ ಹೊಂದಿಕೊಂಡು, ಗಿಡ-ಮರಗಳ ಮಧ್ಯೆ ವಿಶಾಲವಾದ ಪರಿಸರದಲ್ಲಿರುವ ಸರ್ಕಾರಿ ಪ್ರೌಢಶಾಲೆ ಗಮನ ಸೆಳೆಯುತ್ತದೆ.

2005ರಲ್ಲಿ ಈ ಶಾಲೆ ಇಲ್ಲಿಗೆ ಸ್ಥಳಾಂತರವಾಗಿದ್ದು, ಇದಕ್ಕೂ ಮುನ್ನ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮತ್ತು ಮಠವೊಂದರಲ್ಲಿ ನಡೆಯುತ್ತಿತ್ತು.

ಈ ಶಾಲೆಯು ಉಳಿದ ಶಾಲೆಗಳಿಗಿಂತ ಭಿನ್ನವಾಗಿದೆ. ಈ ಶಾಲೆಯಲ್ಲಿ ಪ್ರಯೋಗಾತ್ಮಕ ಬೋಧನಾ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಪ್ರತಿ ಯೊಂದು ಬೋಧನಾ ಕೊಠಡಿಗೆ ಟಿ.ವಿ ಹಾಗೂ ಪ್ರೊಜೆಕ್ಟರ್ ಅಳವಡಿಸಲಾಗಿದೆ. ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ದೃಶ್ಯ ಮಾಧ್ಯಮ ಮೂಲಕ ವಿದ್ಯಾರ್ಥಿಗಳು ನೋಡಿ, ಕೇಳಿ, ಅರ್ಥೈಸಿಕೊಳ್ಳುವ ವಿಶೇಷ ಬೋಧನಾ ಶೈಲಿ ಗಮನ ಸೆಳೆಯುತ್ತದೆ.

ADVERTISEMENT

ಪ್ರೊಜೆಕ್ಟರ್ ಮೂಲಕ ಬೋಧನೆ ಮಾಡುವ ಈ ಶಾಲೆಯನ್ನು ಜಿಲ್ಲಾ  ಶಿಕ್ಷಣ ಮತ್ತು ತರಬೇತಿ ಸಂಸ್ಥೆ ‘ಟಾಲ್ಪಸ್ಕೂಲ್’ ಎಂದು ಪರಿಗಣಿಸಿದೆ.

ಬೋಧನಾ ಉಪಕರಣಗಳ ಅಳವಡಿಕೆಗೆ ಸೆಲ್ಕೊ ಅರ್ಧ ಹಣ ನೀಡಿದೆ. ಇನ್ನರ್ಧ ಹಣವನ್ನು ಶಾಸಕ ಅರುಣ ಶಹಾಪುರ ತಮ್ಮ ಅನುದಾನದಲ್ಲಿ ನೀಡಿದ್ದಾರೆ. ಆ ಮೂಲಕ ಶಾಲೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ.

ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರವು ಈ ಶಾಲೆಯ ಮೈದಾನದಲ್ಲಿರುವ ಬಯಲು ವಿಜ್ಞಾನ ಪಾರ್ಕ್ ಜಿಲ್ಲೆಯಲ್ಲಿಯೇ ಏಕಮೇವ ಪ್ರೌಢಶಾಲೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಎಲೆಕ್ಟ್ರಾನಿಕ್ ಮೈಕ್ರೋಸ್ಕೋಪ್‌ ಸೇರಿದಂತೆ ₹10 ಲಕ್ಷಕ್ಕೂ ಅಧಿಕ ಮೌಲ್ಯದ ವಿಜ್ಞಾನ ಪರಿಕರಗಳು ಇಲ್ಲಿವೆ. ಪ್ರಯೋ ಗಾಲಯಕ್ಕೆ ಡಾ.ಸಿ.ವಿ.ರಾಮನ್ ಪ್ರಯೋಗಾಲಯ ಎಂದು ಹೆಸರಿಡಲಾಗಿದೆ.

‘ಶಾಲೆಯ ವಿದ್ಯಾರ್ಥಿ ಸಂಗಮೇಶ ಬಡಿಗೇರ ‘ಸೌರಶಕ್ತಿ ಉಪ ಯೋಗ’ ಕುರಿತು ಚಿತ್ರಿಸಿದ ಚಿತ್ರಕಲೆಯು ಧಾರ ವಾಡದಲ್ಲಿ ನ.14ರಂದು ಪ್ರದರ್ಶನಗೊಳ್ಳಲಿದೆ’ ಎಂದು ಮುಖ್ಯ ಶಿಕ್ಷಕ ಉದಂಡಪ್ಪ ಹೇಳಿದರು.

ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ ಬೇಡ ಎಂಬ ವಿಶಾಲ ಮನೋಭಾವನೆ ಹೊಂದಿದ್ದಾರೆ. ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳ ಕಲಿಕೆಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ವಿಶೇಷ ಕರ್ತವ್ಯ ನಿರ್ವಹಿಸುವ ಸಿಪಾಯಿ (ಜವಾನ) ಕಲ್ಲಪ್ಪ ಕಲ್ಲೂರು ಶಾಲೆಯಲ್ಲಿಯೇ ವಾಸ್ತವ್ಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ಗ್ರಾಮ ಪಂಚಾಯಿತಿ ಶಾಲಾ ಅಭಿವೃದ್ಧಿಗಾಗಿ ಅನುದಾನ ಕಾಯ್ದಿರಿಸಿದೆ. ಆವರಣಕ್ಕೆ ಅರ್ಧದಷ್ಟು ರಕ್ಷಣಾ ಗೋಡೆ ನಿರ್ಮಾಣವಾಗಿದೆ. ಸಮುದಾಯದಿಂದ ಸಹಾಯ, ಸಹಕಾರವೂ ಇದೆ. ವಿದ್ಯುತ್ ತೊಂದರೆ ಇರುವುದರಿಂದ ಡಿಜಿಟಲ್ ಬೋಧನಾ ಕರ್ತವ್ಯಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ನಿರಂತರ ಜ್ಯೋತಿ ವಿದ್ಯುತ್ ಜೋಡಣೆ ಅಗತ್ಯವಾಗಿದೆ’ ಎಂದು ಶಾಲಾ ಸಿಬ್ಬಂದಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.