ವಿಜಯಪುರ: ‘ಶರಣ ಸಾಹಿತ್ಯದ ಆಚಾರ–ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪಾಲಿಸಿದಾಗ ಮಾತ್ರ ಶರಣರ ಚಿಂತನೆಗಳಿಗೆ ಅರ್ಥ ಬರಲು ಸಾಧ್ಯ’ ಎಂದು ಅಕ್ಕಮಹಾದೇವಿ ಮಹಿಳಾ ವಿವಿಯ ಶಿಕ್ಷಣ ವಿಭಾಗದ ಮುಖ್ಯಸ್ಥ ವಿಷ್ಣು ಶಿಂಧೆ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಶರಣ ಸಾಹಿತ್ಯ ಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡಿದರು.
‘ಶರಣರು ತಮ್ಮ ಬದುಕನ್ನು ಸಮಾಜದ ಒಳಿತಿಗೆ ಮೀಸಲಾಗಿಟ್ಟಿದ್ದರು. ಶರಣರ ಚಿಂತನೆಗಳು ಸಮಾಜ ಪರಿವರ್ತನೆಗೆ ಸನ್ಮಾರ್ಗವಿದ್ದಂತೆ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ’ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ, ‘ಮಾನವನಲ್ಲಿ ನಿರ್ಮಲ ಹೃದಯವಂತಿಕೆ ಇರಬೇಕು ಎಂದು ಪ್ರತಿಪಾದಿಸಿದ ಬಸವಾದಿ ಶರಣರ ವಿಚಾರಗಳನ್ನು ನವ ಯುಗದ ಸಮಾಜ ಮೈಗೂಡಿಸಿಕೊಳ್ಳಬೇಕಿದೆ’ ಎಂದರು.
‘ವಚನಗಳಲ್ಲಿ ಸಾಮಾಜಿಕ ಸಾಮರಸ್ಯ’ ವಿಷಯದ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಮಹಮ್ಮದ್‌ಗೌಸ್ ಹವಾಲ್ದಾರ್ ಉಪನ್ಯಾಸ ನೀಡಿದರು.
‘ಮಹಿಳಾ ಸಂವೇದನೆ ವಚನಗಳು’ ವಿಷಯದ ಕುರಿತು ಸಾಹಿತಿ ಶೋಭಾ ಮೆಡೆಗಾರ ಉಪನ್ಯಾಸ ನೀಡಿದರು.
‘ಜಿಲ್ಲೆಯ ಶರಣ ಶರಣೆಯರು’ ವಿಷಯದ ಕುರಿತು ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಹಂಜಿ ಉಪನ್ಯಾಸ ನೀಡಿದರು.
ಗೋಷ್ಠಿಯಲ್ಲಿ ಬಸವನ ಬಾಗೇವಾಡಿ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಬಿ ಮತ್ತೂರ, ಜಗದೀಶ ಬೋಳಸೂರ, ಅಶೋಕ ಆಸಂಗಿ, ಸಂಗಮೇಶ ಕೆಂಭಾವಿ, ಸಂತೋಷ ಅಮರಗೊಂಡ, ಸಾವಿತ್ರಿ ಬಾಗಲಕೋಟ, ನೀಲಾ ಆಲೂರ, ಅಮೋಘಸಿದ್ಧ ಪೂಜಾರಿ, ಮಮತಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.