ADVERTISEMENT

ಮುದ್ದೇಬಿಹಾಳ | ವರ್ಷ ಕಳೆದರೂ ಬೆಳಗದ ಬೀದಿದೀಪ

ಕತ್ತಲೆಯಲ್ಲಿದೆ ಆಲಮಟ್ಟಿ ರಸ್ತೆ: ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 6:10 IST
Last Updated 4 ಜುಲೈ 2025, 6:10 IST
ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ಮೂಲಕ ಮುದ್ದೇಬಿಹಾಳಕ್ಕೆ ಬರುವ ರಸ್ತೆಯಲ್ಲಿ ನಿರ್ಮಿಸಿರುವ ರಸ್ತೆ ವಿಭಜಕದ ಮಧ್ಯೆ ಸ್ಥಾಪಿಸಿರುವ ವಿದ್ಯುತ್ ಕಂಬಗಳಲ್ಲಿ ಲೈಟು ಹತ್ತದೇ ಕತ್ತಲೆ ಆವರಿಸಿರುವುದು
ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ಮೂಲಕ ಮುದ್ದೇಬಿಹಾಳಕ್ಕೆ ಬರುವ ರಸ್ತೆಯಲ್ಲಿ ನಿರ್ಮಿಸಿರುವ ರಸ್ತೆ ವಿಭಜಕದ ಮಧ್ಯೆ ಸ್ಥಾಪಿಸಿರುವ ವಿದ್ಯುತ್ ಕಂಬಗಳಲ್ಲಿ ಲೈಟು ಹತ್ತದೇ ಕತ್ತಲೆ ಆವರಿಸಿರುವುದು   

ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳಲ್ಲಿ ಎರಡು ವರ್ಷವಾದರೂ ಬೆಳಕು ಕಂಡಿಲ್ಲ.

ಪಟ್ಟಣದ ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಬೆರಳಣಿಕೆಯಷ್ಟು ವಿದ್ಯುತ್ ಕಂಬದಲ್ಲಿರುವ ದೀಪಗಳು ಮಾತ್ರ ಬೆಳಗುತ್ತಿದ್ದು ಶೇ 95ರಷ್ಟು ಬೀದಿ ದೀಪಗಳು ಉರಿಯುತ್ತಿಲ್ಲ. ಇದರಿಂದ ಇಡೀ ರಸ್ತೆ ಕಗ್ಗತ್ತಲಲ್ಲಿ ಇರುವಂತಾಗಿದ್ದು ಈ ರಸ್ತೆಗೆ ಹೊಂದಿಕೊಂಡು ಇರುವ ನಿವಾಸಿಗಳು ರಾತ್ರಿಯಾದರೆ ಸಾಕು ಪಾದಚಾರಿ ಮಾರ್ಗದಲ್ಲಿ ಸಂಚರಿಸಲು ಭಯಪಡುವಂತಾಗಿದೆ.

ಹಿಂದಿನ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿದ್ದಾಗ ಹೈಟೆಕ್ ವಿದ್ಯುತ್ ದೀಪಗಳನ್ನು ಅಳವಡಿಸುವ ಯೋಜನೆಯನ್ನು ಪಿಡಬ್ಲ್ಯುಡಿ ಇಲಾಖೆ ಮೂಲಕ ಅನುಷ್ಠಾನಗೊಳಿಸಿದ್ದರು.

ADVERTISEMENT

ಆಲಮಟ್ಟಿ ರಸ್ತೆಯ ಬೀದಿ ದೀಪ ಅಳವಡಿಸಿ ಚಾಲನೆ ಮಾಡಿಕೊಡುವ ಕಾರ್ಯವನ್ನು ಗುತ್ತಿಗೆದಾರ ಎಸ್.ಎಸ್.ಆಲೂರ ಕಂಪನಿಯವರು ವಹಿಸಿಕೊಂಡಿದ್ದರು. ಆದರೆ, ಗುತ್ತಿಗೆದಾರರಾಗಲಿ, ಪಟ್ಟಣ ಪಂಚಾಯ್ತಿಯವರಾಗಲಿ ಇಲ್ಲಿನ ಬೀದಿ ದೀಪಗಳನ್ನು ಬೆಳಗಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ.

ಬೀದಿ ದೀಪ ಉರಿಯದೇ ಇರುವುದನ್ನು ಗಮನಿಸಿದ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಸ್ವತಃ ಪಿಡಬ್ಲ್ಯುಡಿ ಇಲಾಖೆಯವರಿಗೆ ಪತ್ರ ಬರೆದು ಶೀಘ್ರ ಬೆಳಗಿಸಲು ಕ್ರಮ ಜರುಗಿಸಬೇಕು ಎಂದು ವಿನಂತಿಸಿದರೂ ಸಮಸ್ಯೆ ಬಗೆಹರಿದಿಲ್ಲ

ಹಿಂದಿನ ಶಾಸಕ ನಡಹಳ್ಳಿಯವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ಅಲಂಕಾರಿಕ ದೀಪಗಳನ್ನು ಅಳವಡಿಸುವುದು ಒಂದಾಗಿದ್ದು, ಆ ಕಂಬಗಳಲ್ಲಿ ಈವರೆಗೂ ಬೀದಿ ದೀಪ ಬೆಳಗಿಸುವಂತೆ ಅಧಿಕಾರಿಗಳಿಗೆ ಶಾಸಕ ನಾಡಗೌಡರು ಸೂಚಿಸುವುದಕ್ಕೆ ಆಗುತ್ತಿಲ್ಲವೇ ? ಎಂದು ಬಿಜೆಪಿ ನಾಯಕರು ಪ್ರಶ್ನಿಸುತ್ತಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಿಂದ ಆಲಮಟ್ಟಿ ರಸ್ತೆಯ ಕಡೆಗೆ ತೆರಳುವ ಬೀದಿ ದೀಪ ಹತ್ತದೇ ಇರುವುದು
ಪುರಸಭೆಗೆ ಇನ್ನೂವರೆಗೂ ಬೀದಿ ದೀಪಗಳ ಜವಾಬ್ದಾರಿಯನ್ನು ಹಸ್ತಾಂತರಿಸಿಲ್ಲ. ನಾವೇ ಕೆಲವೊಂದು ಪರ್ಯಾಯ ವ್ಯವಸ್ಥೆ ಕೈಗೊಂಡು ಒಂದಿಷ್ಟು ದೀಪಗಳನ್ನು ಬೆಳಗಿಸಲು ಕ್ರಮ ಕೈಗೊಂಡಿದ್ದೇವು
-ಮಲ್ಲನಗೌಡ ಬಿರಾದಾರ ಪುರಸಭೆ ಮುಖ್ಯಾಧಿಕಾರಿ
ಆಲಮಟ್ಟಿ ರಸ್ತೆಯ ಡಿವೈಡರ್‌ನಲ್ಲಿ ಅರಣ್ಯ ಇಲಾಖೆಯವರು ಸಸಿ ನೆಡುವ ಸಮಯದಲ್ಲಿ ಕಂಬಗಳಿಗೆ ಜೋಡಿಸಿದ್ದ ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದ್ದು ಅದನ್ನು ಸರಿಪಡಿಸಿ ಬೀದಿ ದೀಪ ಬೆಳಗಿಸಲು ಗುತ್ತಿಗೆದಾರರಿಗೆ ಸೂಚಿಸಿ ಕ್ರಮ ಕೈಗೊಳ್ಳುತ್ತೇವೆ.
ಎಸ್.ಜಿ.ಶಿವನಗುತ್ತಿಪಿಡಬ್ಲ್ಯುಡಿ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.