ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ (ಮೂಲನಂದೀಶ್ವರ) ಜಾತ್ರೋತ್ಸವದ ಮೂರನೇ ದಿನವಾದ ಬುಧವಾರ ಪಟ್ಟಣದ ಸಿಬಿಎಸ್ಇ ಶಾಲಾವರಣದಲ್ಲಿ ಜರುಗಿದ ಕಸರತ್ತಿನ ಪ್ರದರ್ಶನ ಹಾಗೂ ಭಾರ ಎತ್ತುವ ಸ್ಪರ್ಧೆಗಳಲ್ಲಿ ನಾನಾ ಭಾಗದ ಜಗಜಟ್ಟಿಗಳು, ಹಳ್ಳಿಹೈದರು ಶಕ್ತಿ ಪ್ರದರ್ಶಿಸಿ ಜನಮನ ಗೆದ್ದರು.
ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆ: ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆಯಲ್ಲಿ ಜತ್ತ ತಾಲೂಕಿನ ಆಸಂಗಿಯ ಅಫಜಲ್ ಮುಜಾವರ ಬಸವೇಶ್ವರ ಜಾತ್ರೆಯ ಭಾರ ಎತ್ತುವ ಸ್ಪರ್ಧೆಯಲ್ಲಿ 11 ವರ್ಷಗಳಿಂದ ಭಾಗವಹಿಸುತ್ತಿದ್ದು ಸತತ 10ನೇ ಬಾರಿ ಪ್ರಥಮ ಸ್ಥಾನ ಪಡೆದಿದ್ದಾನೆ. ಬೀಳಗಿ ತಾಲೂಕಿನ ಬಿಸನಾಳದ ಕಿರಣ ಅರಕೇರಿ ಕಿರಿಯವನಾದರೂ ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಹಾಗೂ ರಿಯಾಜ ಜಮಾದಾರ ತೃತೀಯ ಸ್ಥಾನ ಪಡೆದರು.
ಸಂಗ್ರಾಣಿ ಕಲ್ಲು ಒತ್ತಿ ಎತ್ತುವ ಸ್ಪರ್ಧೆ : ಸಂಗ್ರಾಣಿ ಕಲ್ಲು ಒತ್ತಿ ಎತ್ತುವ ಸ್ಪರ್ಧೆಯಲ್ಲಿ ಗುಳೇದಗುಡ್ಡದ ವಿಠ್ಠಲ ಮುತ್ತಪ್ಪ ಮನಿಕಟ್ಟಿ ಪ್ರಥಮ, ಗೋಕಾಕ ತಾಲೂಕಿನ ಮಳ್ಳವಂಕಿ ಗ್ರಾಮದ ಶಿವಾನಂದ ಜಾಡನವರ ದ್ವಿತೀಯ ಹಾಗೂ ಬಸವನಬಾಗೇವಾಡಿ ತಾಲ್ಲೂಕಿನ ನಾಗೂರ ಗ್ರಾಮದ ಮುತ್ತಪ್ಪ ಶರಣಪ್ಪ ಕಡ್ಲಿಮಟ್ಟಿ ತೃತೀಯ ಸ್ಥಾನ ಪಡೆದರು.
ಗುಂಡು ಎತ್ತುವ ಸ್ಪರ್ಧೆ: ಗುಂಡು ಎತ್ತುವ ಸ್ಪರ್ಧೆಯಲ್ಲಿ ನಾಗಠಾಣದ ಬೀರಪ್ಪ ಗೂಳಪ್ಪ ಪೂಜಾರಿ ಪ್ರಥಮ, ಗುನ್ನಾಪೂರದ ಶಿವಲಿಂಗಪ್ಪ ಶಿವೂರ ದ್ವಿತೀಯ, ಯಾಳವಾರದ ಮಾಳಿಂಗರಾಯ ಕೊಂಡಗುಳಿ ಹಾಗೂ ಅಂಬರೀಶ ಬಮ್ಮನಜೋಗಿ ಸಮಬಲ ಪ್ರದರ್ಶಿಸಿ ತೃತೀಯ ಸ್ಥಾನ ಪಡೆದುಕೊಂಡರು.
ವಿವಿಧ ಕಸರತ್ತು ಪ್ರದರ್ಶನಗಳು: ಹಲ್ಲಿನಿಂದ ಹಾರಿ ಒಗೆಯವ ಸ್ಪರ್ಧೆಯಲ್ಲಿ ದೇವರಹಿಪ್ಪರಗಿ ತಾಲೂಕಿನ ಮಡ್ಡಿಮಣ್ಣೂರಿನ ಸದ್ದಾಮ ಹಸನಸಾಬ ಮಾಡಬಾಳ ಪ್ರಥಮ, ಇಂಗಳಗಿ ಗ್ರಾಮದ ಮಾಳಪ್ಪ ಸೋಮಲಿಂಗ ಪೂಜಾರಿ ದ್ವಿತೀಯ ಸ್ಥಾನ ಪಡೆದುಕೊಂಡರು. ತೆಲಗಿಯ ಕಾಂತಪ್ಪ ಈರಗಾರ ಅವರು ಹಲ್ಲಿನಿಂದ 80 ಕೆಜಿಯ ಸಂಗ್ರಾಣಿ ಕಲ್ಲನ್ನು ಮತ್ತು ಮುತ್ತಗಿ ಗ್ರಾಮದ ಪರಶುರಾಮ ಹೂಗಾರ, ಸಿದ್ಧನಾಥದ 80 ವರ್ಷದ ದಿಗಂಬರ ಕೊಳಮಲಿ ಅವರು 20 ಕೆಜಿ ಕಲ್ಲನ್ನು ತಮ್ಮ ಮೀಸೆಗೆ ಕಟ್ಟಿಕೊಂಡು ಎತ್ತಿದರು. ಗುನ್ನಾಪೂರಿನ ಬೀರಪ್ಪ ಶಿವಪ್ಪ ಲೋಗಾವಿ ಅವರು ಮೇಟನಾಲಿಗೆ ಮೇಲಿಂದ ಅಕ್ಕಿ ಚೀಲವನ್ನು ತಮ್ಮ ಬೆನ್ನ ಮೇಲೆ ಇಟ್ಟುಕೊಂಡು ತಮ್ಮ ಕಸರತ್ತು ಪ್ರದರ್ಶಿಸಿದರು. ವಗನೂರಿನ ಹಣಮಂತ ತಿಪ್ಪಣ್ಣ ವಡ್ಡರ ಅವರು ಕೈ ಸಹಾಯವಿಲ್ಲದೆ ಕಾಲಿನಿಂದ ಉಸುಕು ತುಂಬಿದ ದೊಡ್ಡ ಕೊಡ ಎತ್ತಿ ಮೆಚ್ಚುಗೆಗೆ ಪಾತ್ರರಾದರು. ಹಲವಾರು ಹಳ್ಳಿಹೈದರು 2 ಕ್ವಿಂಟಾಲ್ ಜೋಳದ ಚೀಲವನ್ನು ತೆಕ್ಕಿ ಬಡಿದುಕೊಂಡು ಎತ್ತಿದರೆ, ಉಸುಕಿನ ಚೀಲ ತಮ್ಮ ಬೆನ್ನು ಮೇಲೆ ಇಟ್ಟುಕೊಂಡು ಐದಾರು ಬಾರಿ ಬಸ್ಕಿ ಹೊಡೆದು ನೆರದವರನ್ನು ಮಂತ್ರಮುಗ್ಧಗೊಳಿಸಿದರು.
ಗೆದ್ದ ಜಟ್ಟಿಗಳಿಗೆ ಜಾತ್ರಾ ಸಮಿತಿಯಿಂದ ಬೆಳ್ಳಿ ಕಡೆ, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ವಿವಿಧ ಕಸರತ್ತುಗಳಲ್ಲಿ ಅದ್ಭುತ ಶಕ್ತಿ ಪ್ರದರ್ಶನ ತೋರಿದ ಎಲ್ಲಾ ಹಳ್ಳಿಹೈದರಿಗೆ ಜಾತ್ರಾ ಕಮಿಟಿಯಿಂದ ನಗದು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮೀಜಿ, ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ರಾಠೋಡ, ಹಿರಿಯರಾದ ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ರವಿ ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ಮುಖಂಡರಾದ ಸಂಗಣ್ಣ ಕಲ್ಲೂರ, ಎಂ.ಜಿ.ಆದಿಗೊಂಡ, ಅನಿಲ ಅಗರವಾಲ, ಸಂಗಮೇಶ ಓಲೇಕಾರ, ಸುರೇಶಗೌಡ ಪಾಟೀಲ, ಶಂಕರಗೌಡ ಬಿರಾದಾರ, ಮೀರಾಸಾಬ ಕೊರಬು, ಸಂಗಯ್ಯ ಒಡೆಯರ, ಜಟ್ಟಿಂಗರಾಯ ಮಾಲಗಾರ, ಮಹಾಂತೇಶ ಹಂಜಗಿ, ಮುತ್ತು ಗುಂಡಳ್ಳಿ, ಮಲ್ಲಿಕಾರ್ಜುನ ಗುಂದಗಿ, ದಯಾನಂದ ಜಾಲಗೇರಿ, ವಿಶ್ವನಾಥ ಹಾರಿವಾಳ, ಮಹೇಶ ಹಿರೇಕುರಬರ ಸೇರಿದಂತೆ ಇತರರಿದ್ದರು.
ಒಳಬಿಡಲು ನಿರಾಕರಿಸಿದ ಪೊಲೀಸರಿಂದಲೇ ಪ್ರಶಸ್ತಿ ಪಡೆದ ಭೂಪ
ನೋಡಲು ತೆಳ್ಳಗಿನ ಮೈಕಟ್ಟು, ಕುಡುಕನಂತೆ ಕಂಡ ಕೊಲ್ಹಾರ ತಾಲ್ಲೂಕಿನ ತೆಲಗಿ ಗ್ರಾಮದ ಕಾಂತಪ್ಪ ಈರಗಾರ ಕಸರತ್ತು ಪ್ರದರ್ಶನಕ್ಕೆ ಜನಜಂಗುಳಿ ಮಧ್ಯೆ ಅಖಾಡಕ್ಕೆ ಬರುತ್ತಿದ್ದಂತೆ ಪೊಲೀಸರು ಆತನನ್ನು ಒಳಗೆ ಬಿಡಲಿಲ್ಲ.
’ನಾನು ಕಸರತ್ತು ಪ್ರದರ್ಶಿಸುತ್ತೇನೆ’ ಎಂದರೂ ನಂಬದ ಪೊಲೀಸರು ದೂರ ಹೋಗುವಂತೆ ಬೆದರಿಸಿ ಸರಿಸಿದರು. ಆಗ ಕಮಿಟಿಯವರು ಒಳಗೆ ಬಿಡಿಸಿಕೊಂಡು ಅವಕಾಶ ನೀಡಿದಾಗ ಕಾಂತಪ್ಪ ತನ್ನ ಹಲ್ಲಿನಿಂದ 80 ಕೆಜಿ ತೂಕದ ಸಂಗ್ರಾಣಿ ಕಲ್ಲು ಎಳೆದು ಸಮಿತಿಯಿಂದ ಶಬ್ಬಾಶ್ ಎನಿಸಿಕೊಂಡು ನೆರದವರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.
ಆತನ ಶಕ್ತಿ ಪ್ರದರ್ಶನ ಮೆಚ್ಚಿ ಪೊಲೀಸರೇ ಆತನಿಗೆ ವೇದಿಕೆ ಮೇಲೆ ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಿ ಬೆನ್ನು ತಟ್ಟಿದ ಅಪರೂಪದ ಪ್ರಸಂಗ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.