ADVERTISEMENT

‘ಮಾತೃವಂದನಾ’ ವಿಜಯಪುರದಲ್ಲಿ ಯಶಸ್ವಿ ಅನುಷ್ಠಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ.ಚವ್ಹಾಣ

ಬಸವರಾಜ ಸಂಪಳ್ಳಿ
Published 3 ಡಿಸೆಂಬರ್ 2022, 11:08 IST
Last Updated 3 ಡಿಸೆಂಬರ್ 2022, 11:08 IST
ಕೆ.ಕೆ.ಚವ್ಹಾಣ
ಕೆ.ಕೆ.ಚವ್ಹಾಣ   

ವಿಜಯಪುರ: ಬಾಣಂತಿ ಮತ್ತು ಗರ್ಭಿಣಿಯರ ಕ್ಷೇಮಾಭಿವೃದ್ಧಿಗಾಗಿ ಜಾರಿಯಲ್ಲಿರುವ ‘ಪ್ರಧಾನಮಂತ್ರಿ ಮಾತೃವಂದನಾ’ ಯೋಜನೆಯನ್ನುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಿಜಯಪುರ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ.

ಯೋಜನೆಯಡಿ ಇಲ್ಲಿಯವರೆಗೆ (2017ರಿಂದ) ಜಿಲ್ಲೆಯಲ್ಲಿ ಒಟ್ಟು 92,097 ಫಲಾನುಭವಿಗಳ ಅರ್ಜಿಗಳನ್ನು ಆನ್-ಲೈನ್‍ನಲ್ಲಿ ನೋಂದಣಿ ಮಾಡಿದ್ದು, ಈ ಫಲಾನುಭವಿಗಳಿಗೆ ಒಟ್ಟು ₹38,38,74,000 ಗಳನ್ನು ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.

2022-23 ನೇ ಸಾಲಿಗೆ 15,800 ವಾರ್ಷಿಕ ಗುರಿ ನಿಗದಿಪಡಿಸಿದ್ದು, ಏಪ್ರೀಲ್‌ನಿಂದ ನವೆಂಬರ್‌ ಅಂತ್ಯಕ್ಕೆ ಒಟ್ಟು 10,727 ಫಲಾನುಭವಿಗಳನ್ನು ಆನ್-ಲೈನ್‍ನಲ್ಲಿ ನೋಂದಣಿ ಮಾಡಿ, ಶೇ 102 ರಷ್ಟು ಸಾಧನೆ ಮಾಡಲಾಗಿದೆ ಎಂದು ಹೇಳಿದರು.

ADVERTISEMENT

ಫಲಾನುಭವಿಗಳಲ್ಲಿ ಕೆಲವರು ಸರಿಯಾದ ಮಾಹಿತಿ ನೀಡದ ಕಾರಣ ತಾಂತ್ರಿಕ ಅಡಚಣೆಯಿಂದ ಅವರ ಬ್ಯಾಂಕ್‌ ಅಕೌಂಟ್‌ಗೆ ಹಣ ಸಂದಾಯವಾಗುವುದು ವಿಳಂಬವಾಗುತ್ತಿರುವ ದೂರುಗಳು ಬಂದಿವೆ. ಅಂತ ದೂರುಗಳನ್ನು ಪರಿಶೀಲಿಸಿ ಹಣ ಬರುವಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ದೇಶದಲ್ಲಿ ಅಸಂಖ್ಯಾತ ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಪ್ರತಿ ಮೂರು ಜನ ಮಹಿಳೆಯರಲ್ಲಿ ಒಬ್ಬರು ಅಪೌಷ್ಠಿಕತೆಯಿಂದ ಹಾಗೂ ಪ್ರತಿ ಇಬ್ಬರಲ್ಲಿ ಒಬ್ಬರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಅದರಲ್ಲೂಆರ್ಥಿಕ ದುಸ್ಥಿತಿಯಲ್ಲಿರುವ ಗರ್ಭಿಣಿಯರು ಪ್ರಸವದ ಕೊನೆಯ ದಿನದ ವರೆಗೂ ದುಡಿಯುವ ಅನಿವಾರ್ಯತೆಗೆ ಒಳಗಾಗಿರುತ್ತಾರೆ. ಇಷ್ಟೇ ಅಲ್ಲದೆ, ಮಗುವಿಗೆ ಜನ್ಮ ನೀಡಿದ ನಂತರವೂ ಸಹ ಅವರು ಅನಿವಾರ್ಯವಾಗಿ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಬಾಣಂತಿ ಮತ್ತು ಗರ್ಭಿಣಿಯರ ಕ್ಷೇಮಾಭಿವೃದ್ಧಿಗಾಗಿ ‘ಪ್ರಧಾನಮಂತ್ರಿ ಮಾತೃವಂದನಾ’ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ಅಪೌಷ್ಠಿಕತೆ ಮತ್ತು ರಕ್ತ ಹೀನತೆಯಿಂದ ಬಳಲುವ ಮಹಿಳೆ ಸಹಜವಾಗಿ ಕಡಿಮೆ ತೂಕದ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿಮಾತೃವಂದನಾ ಯೋಜನೆ ಮೂಲಕ ಅವರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.

ಯಾರಿಗೆ ಸೌಲಭ್ಯ:

ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಎಲ್ಲಾ ಗರ್ಭಿಣಿ ಮತ್ತು ಬಾಣಂತಿಯರು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಸಹ ಸೌಲಭ್ಯವನ್ನು ಪಡೆಯಲು ಅರ್ಹರು ಮತ್ತುಈ ಯೋಜನೆಯ ಸೌಲಭ್ಯವು ಮೊದಲ ಹೆರಿಗೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ತಿಳಿಸಿದರು.

****

ಗರ್ಭಿಣಿ, ಬಾಣಂತಿಯರಿಗೆ ಸಹಾಯಧನ

ವಿಜಯಪುರ: ‘ಮಾತೃವಂದನಾ’ ಯೋಜನೆಯಡಿ ಗರ್ಭಿಣಿ, ಬಾಣಂತಿಯರಿಗೆ ₹ 5 ಸಾವಿರ ಸಹಾಯಧನವನ್ನು ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಯ ಖಾತೆಗೆ ವರ್ಗಾಯಿಸಲಾಗುವುದು ಎಂದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ತಿಳಿಸಿದರು.

ಮೊದಲನೇ ಕಂತನ್ನು ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿಯಾದಾಗ ₹1 ಸಾವಿರ, ಎರಡನೇಕಂತು ಕನಿಷ್ಠ ಒಂದು ಆರೋಗ್ಯ ತಪಾಸಣೆ (ಗರ್ಭಿಣಿಯಾಗಿ 6 ತಿಂಗಳ ನಂತರ) ₹2 ಸಾವಿರ ಹಾಗೂ ಮೂರನೇಕಂತು ಮಗು ಜನನ ನೋಂದಣಿ ಮತ್ತು ಮೊದಲನೇ ಹಂತದ ಚುಚ್ಚುಮದ್ದು ಪಡೆದಾಗ ₹ 2 ಸಾವಿರ ನೀಡಲಾಗುತ್ತದೆ ಎಂದು ಹೇಳಿದರು.

ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಯು ಹೆರಿಗೆಗಾಗಿ ₹ 1 ಸಾವಿರ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಹರಾಗಿತ್ತಾರೆ. ಈ ಪ್ರೋತ್ಸಾಹ ಧನವನ್ನು ಹೆರಿಗೆ ಸೌಲಭ್ಯದಲ್ಲಿ ಕೊಡಿಸಲಾಗವುದು. ಹೀಗಾಗಿ ಫಲಾನುಭವಿಗೆ ಒಟ್ಟು ₹ 6 ಸಾವಿರ ಹೆರಿಗೆ ಸೌಲಭ್ಯದ ರೂಪದಲ್ಲಿ ಪಡೆಯುತ್ತಾರೆ ಎಂದರು.

***

ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ ಗರ್ಭಿಣಿ, ಬಾಣಂತಿಯರಿಗೆ ಲಾಭದ ಕಾರ್ಯಕ್ರಮವಾಗಿದೆ. ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣಗಳನ್ನು ತಡೆಯಲು ಸಹಾಯಕವಾಗಿದೆ

–ಕೆ.ಕೆ.ಚವ್ಹಾಣ,ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.