ವಿಜಯಪುರ: ನಗರದ ಆರಾಧ್ಯ ದೈವ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ಅಂಗವಾಗಿ ಇಲ್ಲಿಯ ಎಸ್.ಎಸ್.ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ನಡೆದ ಜಂಗಿ ನಿಕಾಲಿ ಕುಸ್ತಿ ನೆರೆದ ಕುಸ್ತಿ ಪ್ರೇಮಿಗಳ ಗಮನ ಸೆಳೆಯಿತು.
ನೆರೆಯ ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ನಗರ ಮತ್ತು ಸುತ್ತ ಮುತ್ತಲಿನ ಗ್ರಾಮೀಣ ಭಾಗದ 96 ಜೋಡಿಗಳು ತಮ್ಮ ಕುಸ್ತಿ ಕಲೆಯನ್ನು ಪ್ರದರ್ಶನ ಮಾಡಿದರು.
ನಗರದ ಎಸ್.ಎಸ್ ಮೈದಾನದಲ್ಲಿ ಮಧ್ಯಾಹ್ನ 3.30ಕ್ಕೆ ಆರಂಭವಾದ ಜಂಗಿ ನಿಕಾಲಿ ಕುಸ್ತಿಗಳು ತಡರಾತ್ರಿ ವರೆಗೆ ಜರುಗಿದವು. ವಿವಿಧ ಭಾಗಗಳಿಂದ ಆಗಮಿಸಿದ್ದ ಜಗಜಟ್ಟಿ ಪೈಲ್ವಾನರ ಕಾಳಗ ಕಣ್ತುಂಬಿಕೊಂಡ ಜನರು ತಮ್ಮ ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸಿದರು.
ಒಂದೊಂದು ಸೆಣಸಾಟವೂ ರೋಚಕತೆಯಿಂದ ಕೂಡಿತ್ತು. ಯಾರು ಚಿತ್ ಮಾಡುತ್ತಾರೆ ಎಂಬುದನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಕೊನೆಯ ಮೂರು ಪ್ರಮುಖ ಕುಸ್ತಿ ಕಾಳಗ ನೋಡುಗರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು.
ಪ್ರಮುಖ ಮೂರು ಕುಸ್ತಿಯಲ್ಲಿ ವೀರೇಂದ್ರ ಹರಿಯಾಣ (ಪ್ರಥಮ), ಶಿವಯ್ಯ ಪೂಜಾರಿ (ಪ್ರಥಮ), ಸಂಗಮೇಶ ಬಿರಾದಾರ (ಪ್ರಥಮ) ತಮ್ಮ ಮುಂದಿನ ಪೈಲ್ವಾನರನ್ನು ಚಿತ್ ಮಾಡುವ ಮೂಲಕ ಗಮನ ಸೆಳೆದರು.
ಕುಸ್ತಿ ಕಾಳಗದಲ್ಲಿ ವಿಜೇತರಾದವರಿಗೆ ಜಾತ್ರಾ ಸಮಿತಿಯಿಂದ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಜಂಗಿ ನಿಕಾಲಿ ಕುಸ್ತಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಸಂಗು ಸಜ್ಜನ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಸಂಸ್ಥೆಯ ನಿರ್ದೇಶಕ ಸಾಯಿಬಣ್ಣ ಭೋವಿ, ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಶಿವಾನಂದ ನೀಲಾ, ಎನ್.ಎಂ. ಗೋಲಾಯಿ, ಎಸ್.ಎಸ್. ಗುಡ್ಡೋಡಗಿ, ಸುಧೀರ ಚಿಂಚಲಿ, ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.