ADVERTISEMENT

ನಿಂದಿಸಿ, ನೋಯಿಸಿದರೂ ಸಹಿಸಿಕೊಳ್ಳುವ ಅನಿವಾರ್ಯತೆ: ಇಸ್ರತ್‌ ಬಾನು ಬಿರಾದಾರ

ಬಸವರಾಜ ಸಂಪಳ್ಳಿ
Published 12 ಮೇ 2021, 10:40 IST
Last Updated 12 ಮೇ 2021, 10:40 IST
ಇಸ್ರತ್‌ ಬಾನು ಬಿರಾದಾರ
ಇಸ್ರತ್‌ ಬಾನು ಬಿರಾದಾರ   

ವಿಜಯಪುರ:ಆರ್‌ಟಿಪಿಸಿಆರ್‌ ಸೆಂಟರ್‌ಗೆ ನಿತ್ಯ ನೂರಾರು ಮಂದಿ ಕೋವಿಡ್‌ ಪರೀಕ್ಷೆಗಾಗಿ ಸಾರ್ಜನಿಕರು ಬರುತ್ತಾರೆ. ಪ್ರತಿಯೊಬ್ಬರೂ ಗಡಿಬಿಡಿ, ಆತಂಕದಲ್ಲಿ ಇರುತ್ತಾರೆ. ಈ ಸಂದರ್ಭದಲ್ಲಿ ಅಂತರ ಕಾಪಾಡಿ, ಮಾಸ್ಕ್‌ ಧರಿಸಿಕೊಳ್ಳಿ, ಸ್ಯಾನಿಟೈಸ್‌ ಮಾಡಿಕೊಳ್ಳಿ ಎಂದು ಎಷ್ಟೇ ಮುನ್ನೆಚ್ಚರಿಕೆ ಮಾತು ಏಳಿದರೂ ಯಾರೂ ಕೇಳಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಮನಸ್ಸಿಗೆ ನೋವಾಗುವಂತೆ ತೀರಾ ಕೆಟ್ಟದಾಗಿ ನಮ್ಮನ್ನು ನಿಂದಿಸಿ ಮಾತನಾಡುತ್ತಾರೆ.ಆದರೂ ಬೇಸರಿಸಿಕೊಳ್ಳದೇ ನಮ್ಮಕೆಲಸಮಾಡುತ್ತೇವೆ.

ಹೀಗೆಂದವರು ವಿಜಯಪುರ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಚೇರಿಯಲ್ಲಿ ಲ್ಯಾಬ್‌ ಟೆಕ್ನಿಷಿಯನ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಕಲಕೇರಿಯ ಇಸ್ರತ್‌ ಬಾನು ಬಿರಾದಾರ.

ಒಂದು ವರ್ಷದಿಂದ ಕೋವಿಡ್‌ ಆರ್‌ಟಿಪಿಸಿಆರ್‌ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೊರೊನಾ ವಾರಿಯರ್ಸ್‌ ಆಗಿರುವುದರಿಂದ ಕಾರ್ಯದ ಒತ್ತಡದಲ್ಲಿ ರಜೆಯೂ ಸಿಗುತ್ತಿಲ್ಲ. ಒಂದು ವೇಳೆ ರಜೆ ಸಿಕ್ಕರೂ ಮನೆಗೆ ಹೋಗಲು ಭಯ, ನಮ್ಮಿಂದ ಮನೆಯರಿಗೆ ತೊಂದರೆಯಾಗಬಾರದು ಎಂಬ ಕಾಳಜಿ.

ADVERTISEMENT

ಕೆಲಸದ ನಡುವೆಯೂ ಸದ್ಯ ರಂಜಾನ್‌ ರೋಜಾ ಆಚರಿಸುತ್ತಿದ್ದೇನೆ. ರಜೆ ಸಿಕ್ಕರೆ ನಮ್ಮೂರಿಗೆ ಹೋಗಬೇಕು ಎಂದುಕೊಂಡಿರುವೆ. ವಿಜಯಪುರದಲ್ಲಿ ರೂಂ ಮಾಡಿಕೊಂಡು ಕೆಲಸಕ್ಕೆ ಪ್ರತಿದಿನ ಹೋಗಿ ಬರುತ್ತಿದ್ದೇನೆ. ಸದ್ಯ ಬಸ್‌, ಆಟೊಗಳ ಸಂಚಾರವೂ ಇಲ್ಲ. ಹೀಗಾಗಿ ನಾನು ಉಳಿದುಕೊಂಡಿರುವ ಕೊಠಡಿಯಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆಯ ವರೆಗೆ ಪ್ರತಿದಿನ ಮೂರು ಕಿ.ಮೀ.ದೂರ ನಡೆದೇ ಹೋಗಿ ಬರಬೇಕಾಗಿದೆ. ಕಚೇರಿಗೆ ಹೋಗಿ, ಬರಲು ವಾಹನದ ವ್ಯವಸ್ಥೆ ಇಲ್ಲ.

ಪ್ರಸ್ತುತ ಕೋವಿಡ್‌ನಿಂದ ಆತಂಕದ ಪರಿಸ್ಥಿತಿ ಎದುರಾಗಿದೆ. ಸದಾ ಮನೆ ಮತ್ತು ಕುಟುಂಬದವರ ನೆನಪಾಗುತ್ತಿರುತ್ತದೆ. ಎಷ್ಟೇ ಸುರಕ್ಷತಾ ಕ್ರಮಕೈಗೊಂಡರೂ ನಾವು ಕೆಲಸ ಮಾಡುವ ವಾತಾವರಣ ಕೋವಿಡ್‌ ಪೀಡಿತರಿಂದ ತುಂಬಿರುವುದರಿಂದ ಅವರ ನಡುವೇ ಕೆಲಸ ಮಾಡುವ ಅನಿವಾರ್ಯತೆ ಇದೆ. ಕೆಲಸದ ಬಗ್ಗೆ ಹೆಮ್ಮೆಯ ಜೊತೆ ಒಮ್ಮೊಮ್ಮೆ ಬೇಸರವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.