ವಿಜಯಪುರ: ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಒಂದು ಕೋಟಿಗಿಂತಲೂ ಜಾಸ್ತಿ ಇದೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲಿಂಗಾಯತರಲ್ಲಿ ಕೆಲವರು 2 ‘ಎ’ ಮೀಸಲಾತಿಗಾಗಿ ಹಿಂದೂ ಸಾದರ, ಹಿಂದೂ ಗಾಣಿಗ, ಹಿಂದೂ ಬಣಜಿಗ ಎಂದು ನಮೂದು ಮಾಡಿಸಿದ್ದಾರೆ. ಇವೆಲ್ಲ ಸಮುದಾಯಗಳು ಒಳಗೊಂಡರೆ ಲಿಂಗಾಯತ ಸಮಾಜದ ಸಂಖ್ಯೆ ಒಂದು ಕೋಟಿಗೂ ಅಧಿಕವಾಗಲಿದೆ. 2 ‘ಎ’ನಲ್ಲಿರುವ ಕೆಲ ಸಮುದಾಯಗಳು ಲಿಂಗಾಯತ, ವೀರಶೈವ ಲಿಂಗಾಯತ ಎಂದು ಬರೆಸಿಲ್ಲ. ಈ ಜನಸಂಖ್ಯೆಯು 25 ಲಕ್ಷವಾಗಲಿದೆ. ಜಾತಿ ಗಣತಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆಯಾಗಲು ಕಾಂತರಾಜ್ ಸೇರಿ ಯಾರದ್ದೂ ತಪ್ಪಲ್ಲ’ ಎಂದರು.
‘2 ‘ಎ’ನಲ್ಲಿ ಇದ್ದವರನ್ನು ಲಿಂಗಾಯತ ಎಂದು ಪರಿಗಣಿಸಬೇಕಾ? 3 ‘ಬಿ’ಗೆ ತರಬೇಕಾ ಅಥವಾ ಅದಕ್ಕೆ ಅವರು ಒಪ್ಪುತ್ತಾರಾ ಎಂಬುದನ್ನು ನೋಡಬೇಕು. ಆದರೆ, ಲಿಂಗಾಯತ ಸಾದರ, ಬಣಜಿಗ, ಗಾಣಿಗ ಎಂದು ಬರೆಸಿದರೆ ಮೀಸಲಾತಿ ಸಿಗಲ್ಲ. ಅದಕ್ಕೆ ಏನಾದರೂ ಪರ್ಯಾಯ ಮಾರ್ಗವಿದೆಯಾ ಎಂಬುದನ್ನು ನೋಡುತ್ತೇವೆ. ಎಲ್ಲರೂ ಸೇರಿ ಸಮಸ್ಯೆ ಪರಿಹಾರ ಮಾಡುತ್ತೇವೆ’ ಎಂದು ಹೇಳಿದರು.
‘ಜಾತಿ ಗಣತಿ ವರದಿಯ ಒಳಗಡೆ ಏನಿದೆ ಎಂಬುದು ನನಗೆ ಗೊತ್ತಿಲ್ಲ. ನೋಡಲಾರದೆ ನಾವು ಮಾತನಾಡುವುದು ತಪ್ಪು. ಮಾಧ್ಯಮಗಳಲ್ಲಿ ಬಂದಿದ್ದನ್ನು ನೋಡಿದ್ದೇನೆ, ಅದು ಎಷ್ಟರಮಟ್ಟಿಗೆ ಸತ್ಯ ಎಂಬುದು ಗೊತ್ತಿಲ್ಲ. ವರದಿ ಅಧ್ಯಯನ ಮಾಡಿ ನಾವು ಅರ್ಥ ಮಾಡಿಕೊಳ್ಳಬೇಕು. ಈ ವಿಚಾರವಾಗಿಯೇ ಏಪ್ರಿಲ್ 17ರಂದು ಸಚಿವ ಸಂಪುಟದ ವಿಶೇಷ ಸಭೆ ನಡೆಯಲಿದೆ. ಅಲ್ಲಿ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತೇವೆ’ ಎಂದು ಹೇಳಿದರು.
ಹೊಸದಾಗಿ ಜಾತಿ ಗಣತಿಗೆ ವಿವಿಧ ಸ್ವಾಮೀಜಿಗಳು ಬೇಡಿಕೆ ಇಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ‘ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು, ನಾನು ಜಾತಿಗಣತಿ ವರದಿಯ ಪ್ರತಿ ತರಿಸಿಕೊಂಡಿದ್ದೇನೆ. ವರದಿ ನೋಡಿ, ಓದಿ ಮಾತನಾಡುವೆ. ಈ ಕುರಿತು ಸಂಪುಟದಲ್ಲಿ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.