ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ನಾಳೆಯಿಂದ ಏಳು ದಿನ ಕಾಲುವೆಗೆ ನೀರು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 16:19 IST
Last Updated 29 ನವೆಂಬರ್ 2022, 16:19 IST
ಆಲಮಟ್ಟಿ ಜಲಾಶಯ
ಆಲಮಟ್ಟಿ ಜಲಾಶಯ   

ಆಲಮಟ್ಟಿ: ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತಿರುವ ದ್ವಿಋತು ಬೆಳೆಗಳ ಸಂರಕ್ಷಿಸಲು ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನ.30 ರಿಂದ ಡಿ.5 ರ ವರೆಗೆ ನೀರು ಪೂರೈಸಲಾಗುವುದು ಎಂದು ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಭೀಮರಾಯನಗುಡಿ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್ ತಿಳಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರು, ನಾನಾ ರೈತ ಸಂಘಟನೆಗಳು, ಜನಪ್ರತಿನಿಗಳ ಹಾಗೂ ಸಮಿತಿಯ ಮುಖಂಡರುಗಳ ಕೋರಿಕೆಗೆ ಸ್ಪಂದಿಸಿ ರೈತರಿಗೆ ಅನುಕೂಲ ಮಾಡುವ ಹಿತದೃಷ್ಟಿಯಿಂದ ಐಸಿಸಿ ಅಧ್ಯಕ್ಷರಾದ ಸಚಿವ ಸಿ.ಸಿ.ಪಾಟೀಲ ಅವರೊಂದಿಗೆ ಚರ್ಚಿಸಿ ಮುಂಗಾರು ಹಂಗಾಮಿನಲ್ಲಿ ಹಾಲಿ ಬೆಳೆದು ನಿಂತಿರುವ ದ್ವಿ-ಋತು ಬೆಳೆಗಳನ್ನು ಸಂರಕ್ಷಿಸಲು ಆರು ದಿನಗಳವರೆಗೆ ನೀರನ್ನು ಪೂರೈಸಲಾಗುವುದು, ಈ ನೀರನ್ನು ಕೇವಲ ಬೆಳೆದು ನಿಂತಿರುವ ದ್ವಿ-ಋತು ಬೆಳೆಗಳಿಗೆ ಮಾತ್ರ ಉಪಯೋಗಿಸಬೇಕು ಎಂದು ಹೇಳಿದ್ದಾರೆ.

ಈ ಅವಧಿಯಲ್ಲಿ ಯಾವುದೇ ಹಿಂಗಾರು ಹಂಗಾಮಿನ ಬೆಳೆಗಳ ತಯಾರಿಗೆ ಈ ನೀರನ್ನು ಉಪಯೋಗಿಸಬಾರದು. ನ.23ರಂದು ನಡೆದ ಐಸಿಸಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಡಿ.12ರಿಂದ ಕಾಲುವೆಗಳಿಗೆ ನೀರನ್ನು ಹರಿಸಲಾಗುವುದು. ರೈತರು ನೀರನ್ನು ಮಿತವಾಗಿ ಬಳಸಿ, ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ನ.23 ರಿಂದ ಮುಂಗಾರು ಹಂಗಾಮು ಪೂರ್ಣಗೊಂಡು ಕಾಲುವೆಗೆ ನೀರು ಹರಿಯುವುದನ್ನು ನಿಲ್ಲಿಸಲಾಗಿತ್ತು. ನ.23 ರಂದು ನಡೆದ ನೀರಾವರಿ ಸಲಹಾ ಸಮಿತಿಯಲ್ಲಿ ಡಿ.12 ರಂದು ಹಿಂಗಾರು ಹಂಗಾಮಿಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಈ ಮುಂಗಾರು ಹಿಂಗಾರು ಮಧ್ಯೆ 18 ದಿನ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದರಿಂದ ದ್ವಿಋತು ಬೆಳೆಗಳಾಗಿ ಬೆಳೆದಿದ್ದ ಈರುಳ್ಳಿ ಹಾಗೂ ಮೆಕ್ಕೆಜೋಳದ ಬೆಳೆಗಳಿಗೆ ಸಮಸ್ಯೆಯಾಗಿತ್ತು. ಈ ಬಗ್ಗೆ ರೈತರ ಈ ಸಮಸ್ಯೆಯ ಕುರಿತು ನ.24 ರಂದು '18 ದಿನ ಕಾಲುವೆಗಿಲ್ಲ ನೀರು' ಎಂಬ ವಿಶೇಷ ವರದಿ ‘ಪ್ರಜಾವಾಣಿ’ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.