ADVERTISEMENT

ಇಂದು ಮುಸ್ಲಿಮರು, ಮುಂದೆ ದಲಿತರು ಸಂಘಪರಿವಾರದ ಗುರಿ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗಾವರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 14:18 IST
Last Updated 8 ಏಪ್ರಿಲ್ 2022, 14:18 IST
ಆಲಮಟ್ಟಿಯ ಕೆಬಿಜಿಎನ್‌ಎಲ್ ಸಮುದಾಯ ಭವನದಲ್ಲಿ ಶುಕ್ರವಾರದಿಂದ ಆರಂಭವಾದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪುರ, ಪ್ರೊ.ರಾಜು ಆಲಗೂರ, ಶಾಮರಾವ್ ಘಾಟ್ಗೆ, ಚಂದ್ರಕಾಂತ ಶಿಂಗೆ, ಕೆಂಪಣ್ಣ ಸಾಗ್ಯ, ಶರಣಪ್ಪ ಲೇಬಗೇರೆ, ಶೋಭಾ ಕಟ್ಟಿಮನಿ, ಪ್ರೇಮಾ ವಸಂತ, ಗೌರಮ್ಮ ದೊಡ್ಡಮನಿ, ಜೀವನಹಳ್ಳಿ ಆರ್. ವೆಂಕಟೇಶ ಇದ್ದಾರೆ –ಪ್ರಜಾವಾಣಿ ಚಿತ್ರ
ಆಲಮಟ್ಟಿಯ ಕೆಬಿಜಿಎನ್‌ಎಲ್ ಸಮುದಾಯ ಭವನದಲ್ಲಿ ಶುಕ್ರವಾರದಿಂದ ಆರಂಭವಾದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪುರ, ಪ್ರೊ.ರಾಜು ಆಲಗೂರ, ಶಾಮರಾವ್ ಘಾಟ್ಗೆ, ಚಂದ್ರಕಾಂತ ಶಿಂಗೆ, ಕೆಂಪಣ್ಣ ಸಾಗ್ಯ, ಶರಣಪ್ಪ ಲೇಬಗೇರೆ, ಶೋಭಾ ಕಟ್ಟಿಮನಿ, ಪ್ರೇಮಾ ವಸಂತ, ಗೌರಮ್ಮ ದೊಡ್ಡಮನಿ, ಜೀವನಹಳ್ಳಿ ಆರ್. ವೆಂಕಟೇಶ ಇದ್ದಾರೆ –ಪ್ರಜಾವಾಣಿ ಚಿತ್ರ   

ವಿಜಯಪುರ: ಹಿಜಾಬ್‌, ಹಲಾಲ್‌, ಆಜಾನ್‌ ಹೆಸರಲ್ಲಿ ಬಿಜೆಪಿ, ಸಂಘ ಪರಿವಾರದವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ನಡೆಸಿದ್ದಾರೆ. ಇಂದು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾರೆ. ಮುಂದೆ ದಲಿತರನ್ನು ಗುರಿಯಾಗಿಸಿಕೊಳ್ಳುತ್ತಾರೆ.ಈ ಹುನ್ನಾರಗಳಿಗೆ ಯಾರೂ ಬಲಿಯಾಗಬಾರದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಸಂಘಟನೆಗಳ ಜಂಟಿ ವೇದಿಕೆಯಿಂದ ಆಲಮಟ್ಟಿಯ ಕೆಬಿಜಿಎನ್‌ಎಲ್ ಸಮುದಾಯ ಭವನದಲ್ಲಿ ಶುಕ್ರವಾರದಿಂದ ಆರಂಭವಾದ ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೂ–ಮುಸ್ಲಿಮರನ್ನು ಎತ್ತಿಕಟ್ಟಿ ಚುನಾವಣೆ ಎದುರಿಸಲು ಬಿಜೆಪಿ, ಸಂಘಪರಿವಾರದವರು ಮುಂದಾಗಿದ್ದಾರೆ.ದಲಿತರು, ಮುಸ್ಲಿಮರು ಚುನಾವಣೆಯಲ್ಲಿ ಒಂದಾಗಬೇಕು. ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವವರನ್ನು ಆಯ್ಕೆ ಮಾಡಬೇಕು ಎಂದರು.

ADVERTISEMENT

ಜನರನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಜನರು ಒಗ್ಗಟ್ಟು ಪ್ರದರ್ಶಿಸಬೇಕು. ಸರ್ಕಾರ ಇಂತಹ ದುಷ್ಟ ಶಕ್ತಿಗಳನ್ನು ಸದೆ ಬಡಿಯಬೇಕು ಎಂದು ಆಗ್ರಹಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಕೆಲಸ ದಿನೇ ದಿನೇ ಹೆಚ್ಚುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಆದಾಯ ಮಿತಿಯನ್ನು ₹10 ಲಕ್ಷಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.

ಬೊಮ್ಮಾಯಿ ಯೋಗ್ಯರಲ್ಲ:

ವಿಧಾನ ಪರಿಷತ್‌ ಸದಸ್ಯ ಆರ್‌.ಬಿ.ತಿಮ್ಮಾಪುರ, ಹಿಜಾಬ್‌, ಹಲಾಲ್‌, ಆಜಾನ್‌ ವಿವಾದ ಸೃಷ್ಟಿಯಾದರೂ ಅದನ್ನು ಸಮರ್ಥವಾಗಿ ನಿಭಾಯಿಸದೇ ಕೈಚೆಲ್ಲಿ ಕುಳಿತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ರಾಜ್ಯ ಆಳಲು ಯೋಗ್ಯರಲ್ಲ ಎಂದರು.

ಹಲಾಲ್‌ ಅತ್ಯಂತ ವೈಜ್ಞಾನಿ ಪದ್ಧತಿಯಾಗಿದ್ದು, ಇದಕ್ಕೆ ವಿರೋಧ ಸಲ್ಲ ಎಂದು ಹೇಳಿದರು.

ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ಭಿನ್ನಮತ, ವಿಚಾರ ವೈರುಧ್ಯಗಳಿಂದ ಬಣಗಳಾಗಿ ಒಡೆದುಹೋಗಿರುವ ದಲಿತ ಸಂಘರ್ಷ ಸಮಿತಿ ಮುಖಂಡರು ಹೊಸ ಚೈತನ್ಯ, ವಿಚಾರಧಾರೆಗಳೊಂದಿಗೆ ಒಗ್ಗೂಡಬೇಕು. ಆಗ ಮಾತ್ರ ರಾಜ್ಯದಲ್ಲಿ ಬಲಾಢ್ಯ ಶಕ್ತಿಯಾಗಲು ಸಾಧ್ಯ ಎಂದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಸಂವಿಧಾನದ ಆಶಯಗಳಿಗೆ ಕಂಟಕ ತರುವ ಪ್ರಯತ್ನಗಳು ನಡೆದಿದೆ. ಸಂವಿಧಾನದ ಮೂಲ ಆಶಯವಾದ ಜಾತ್ಯತೀತವಾದವನ್ನು ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.

ರಾಜ್ಯ ಸಂಚಾಲಕ ಶಾಮರಾವ್ ಘಾಟ್ಗೆ, ಜಿಲ್ಲಾ ಸಂಚಾಲಕ ಚಂದ್ರಕಾಂತ ಶಿಂಗೆ, ರಾಜ್ಯ ಖಜಾಂಚಿ ಕೆಂಪಣ್ಣ ಸಾಗ್ಯ, ಶರಣಪ್ಪ ಲೇಬಗೇರೆ, ಶೋಭಾ ಕಟ್ಟಿಮನಿ, ಪ್ರೇಮಾ ವಸಂತ, ಗೌರಮ್ಮ ದೊಡ್ಡಮನಿ, ಜೀವನಹಳ್ಳಿ ಆರ್. ವೆಂಕಟೇಶ, ಅನೀಲ ಹೊಸಮನಿ ಉಪಸ್ಥಿತರಿದ್ದರು.

ದಲಿತ ಸಂಘರ್ಷ ಸಮಿತಿಯ ಪದಾದಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಬಿಜೆಪಿಯರು ಒಡ್ಡುವ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬಾರದು.

–ಲಕ್ಷ್ಮಿ ನಾರಾಯಣ ನಾಗವಾರ

ರಾಜ್ಯ ಸಂಚಾಲಕ,ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.