ತಾಂಬಾ: ಗ್ರಾಮದಲ್ಲಿ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ದೇವಿಯ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಸಂಜೆ ವ್ರತಾಧಾರಿಯು ದೇವಸ್ಥಾನದಿಂದ ದೇವಿ ಮುಖವಾಡ ಕಟ್ಟಿಕೊಂಡು, ಕೈಯಲ್ಲಿ ಖಡ್ಗ ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮಾರುತೇಶ್ವರ ದೇವಸ್ಥಾನದ ಹತ್ತಿರ ಚೌಡೇಶ್ವರ ದೇವಿ ಕುಣಿತ ಮತ್ತು ಕೋಲಾಟ ಗಮನ ಸೆಳೆಯಿತು.
ಬಾಳಬಟ್ಟಲ ಆಚರಣೆ: ‘ಸೋಮವಾರ ಬಾಳಬಟ್ಟಲ ಆಚರಣೆ ನಡೆಯಿತು. ಹಿರಿಯರು ಆಯ್ಕೆ ಮಾಡುವ ಕುಂಬಾರ ಸಮುದಾಯದ ವಿವಾಹಿತ ಪುರುಷನೊಬ್ಬ ಉಪವಾಸ ವ್ರತ ಆಚರಿಸುತ್ತಾರೆ. ತಲೆಗೆ ಎಣ್ಣೆ, ಕುಂಕುಮ, ಭಂಡಾರ ಲೇಪನ ಮಾಡಿಕೊಂಡು, ದೇವಿಯಂತೆ ಬಣ್ಣಬಣ್ಣದ ಉಡಿಗೆ ತೊಡುತ್ತಾರೆ. ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ಬೆಳ್ಳಿಯ ಬಾಳಬಟ್ಟಲ ಹಿಡಿದು ಗ್ರಾಮದೆಲ್ಲೆಡೆ ಸಂಚರಿಸುತ್ತಾರೆ. ಈ ವ್ರತಧಾರಿಗೆ ಗೋಚರಿಸುವ ಭೂತ, ಪ್ರೇತ, ಪಿಶಾಚಿಗಳ ಚೇಷ್ಟೆಯನ್ನು ಅಣಕು ಮಾಡುತ್ತ, ದೇವಿಯೇ ಸಂಹಾರ ಮಾಡುತ್ತಾಳೆಂಬ ಪ್ರತೀತಿ ಇದೆ’ ಎಂದು ಗ್ರಾಮಸ್ಥರು ತಿಳಿಸಿದರು.
ಚೌಡೇಶ್ವರಿ ದೇವಿಗೆ ಮಹಿಳೆಯರು ಉಡಿ ತುಂಬಿದರು. ಗ್ರಾಮದ ಸರ್ವ ಧರ್ಮದವರು ಭಾಗವಹಿಸಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.