ADVERTISEMENT

ವಿಜಯಪುರ | ದಶಕ ಕಳೆದರೂ ರಸ್ತೆಗೆ ದಕ್ಕಿಲ್ಲ ದುರಸ್ತಿ ಭಾಗ್ಯ

ಹದಗೆಟ್ಟ ಚಡಚಣ -ಲೋಣಿ ಮಾರ್ಗದ  ಹಲಸಂಗಿ ರಸ್ತೆ; ಶೀಘ್ರ ದುರಸ್ತಿಗೆ ಆಗ್ರಹ

ಅಲ್ಲಮಪ್ರಭು ಕರ್ಜಗಿ
Published 13 ಜೂನ್ 2023, 23:30 IST
Last Updated 13 ಜೂನ್ 2023, 23:30 IST
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಏಳಗಿ ಗ್ರಾಮದಿಂದ ಹಲಸಂಗಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಕಿತ್ತು ಹೋಗಿರುವುದು
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಏಳಗಿ ಗ್ರಾಮದಿಂದ ಹಲಸಂಗಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಕಿತ್ತು ಹೋಗಿರುವುದು   

ಚಡಚಣ: ತಾಲ್ಲೂಕಿನ ಏಳಗಿ(ಪಿ.ಎಚ್‌) ಗ್ರಾಮದಿಂದ ಹಲಸಂಗಿ ಗ್ರಾಮದವರೆಗಿನ ಸುಮಾರು 3 ಕಿ.ಮಿ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಎರಡೂ ಗ್ರಾಮಗಳ ಜನರು ಆಗ್ರಹಿಸಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ ಈಗಿನ ಶಾಸಕ ವಿಠ್ಠಲ ಕಟಕಧೊಂಡ ಅವರ ಅಧಿಕಾರವಧಿಯಲ್ಲಿ ವಿಶೇಷ ಮುತುವರ್ಜಿ ವಹಿಸಿ ಚಡಚಣದಿಂದ ಲೋಣಿ ಮಾರ್ಗವಾಗಿ ಏಳಗಿ, ಹಲಸಂಗಿ ವರೆಗಿನ 22 ಕಿ.ಮೀ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಮಾಡಲಾಗಿತ್ತು. ನಂತರ ಎರಡು ಸರ್ಕಾರಗಳೂ, ಇಬ್ಬರು ಶಾಸಕರು ಬಂದು ಹೋದರೂ ಈ ರಸ್ತೆ ದುರಸ್ತಿ ಬಗ್ಗೆ ಗಮನ ಹರಿಸಿಲ್ಲ.

ಲೋಣಿ(ಬಿ.ಕೆ) ಗ್ರಾಮದಿಂದ ಚಡಚಣವರೆಗಿನ ರಸ್ತೆಯನ್ನು ಲೋಣಿ ಗ್ರಾಮಸ್ಥರು 7 ಕೀ.ಮಿ.ಸುತ್ತಿ ಬಳಸಿ ಬರಡೋಲ ಮಾರ್ಗವಾಗಿ ಚಡಚಣ ತಲುಪುತ್ತಾರೆ. 3 ಕಿ.ಮೀ ಅಂತರದಲ್ಲಿರುವ ಏಳಗಿ (ಪಿ.ಎಚ್)‌ ಹಾಗೂ ಹಲಸಂಗಿ ಗ್ರಾಮಗಳ ನಡುವಿನ ರಸ್ತೆ ಹದಗೆಟ್ಟಿರುವುದರಿಂದ ವಾಹನ ಚಾಲಕರು 7 ಕಿಮೀ ಸುತ್ತಿ ಬಳಸಿ ಸಂಚರಿಸುವಂತಾಗಿದೆ.

ADVERTISEMENT

ಆಸ್ಪತ್ರೆಗಳಿಗೆ, ತುರ್ತು ಕೆಲಸಗಳಿಗಾಗಿ ನಗರಕ್ಕೆ ಹೋಗುವಾಗ ವಿಳಂಬ ಆಗುತ್ತದೆ. ನಾಲ್ಕು ಕಿ.ಮೀ ಹೆಚ್ಚುವರಿ ಸಂಚರಿಸಿಕೊಂಡು ಹೋಗುವಷ್ಟರಲ್ಲಿ ಜನರು ಹೈರಾಣಾಗುತ್ತಾರೆ. ರೋಗಿಗಳು, ಗರ್ಭಿಣಿಯರು ಪಾಡು ಪಡುವಂತಾಗಿದೆ.

ಈ ಬಗ್ಗೆ ಹಲವು ಬಾರಿ ಭಾಗದ ಗ್ರಾಮಸ್ಥರು ಶಾಸಕರಿಗೂ, ಸಂಬಂದಿಸಿದ ಇಲಾಖೆ ಅಧಿಕಾರಿಗಳಿಗೂ ಮನವಿ ಸಲ್ಲಿಸಿ, ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನಾದರೂ ಈ ಬಗ್ಗೆ ಕೂಡಲೇ ಈ ಬಗ್ಗೆ ಸಂಬಂಧಿಸಿದ ಇಲಾಕೆ ಅಧಿಕಾರಿಗಳು, ಶಾಸಕರು ಗಮನ ಹರಿಸಿ ವಾಹನ ಚಾಲಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಎರಡೂ ಗ್ರಾಮಸ್ಥರು ಆಗ್ರಹವಾಗಿದೆ.

ಚಡಚಣ ಲೋಣಿ ಮಾರ್ಗವಾಗಿ ಹಲಸಂಗಿ ಗ್ರಾಮದವರೆಗಿನ ರಸ್ತೆ ದುರಸ್ತಿ ಕಾಮಗಾರಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು –ವಿಠ್ಠಲ ಕಟಕಧೋಂಡ ಶಾಸಕ

ಏಳಗಿ ಹಾಗೂ ಹಲಸಂಗಿ ಗ್ರಾಮಗಳ ನಡುವಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಗಳ ಮಧ್ಯೆ ಗುಂಡಿಗಳಿಲ್ಲ. ಗುಂಡಿಗಳ ಮಧ್ಯೆ ರಸ್ತೆ ನಿರ್ಮಾಣವಾಗಿದೆ –ಮಡಿವಾಳಪ್ಪ ಪಾಟೀಲ ಏಳಗಿ(ಪಿ.ಎಚ್) ಗ್ರಾಮಸ್ಥ

ಲೋಣಿ ಗ್ರಾಮದಿಂದ ಚಡಚಣ ತಾಲ್ಲೂಕು ಕೇಂದ್ರಕ್ಕೆ ತೆರಳುವ ರಸ್ತೆ ದಶಕಗಳಿಂದ ದುರಸ್ತಿ ಭಾಗ್ಯ ಕಂಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಡಾಂಬರೀಕರಣಕ್ಕೆ ಮುಂದಾಗಬೇಕು –ಸಿದ್ದರಾಯ ಘಂಟಿ ಲೋಣಿ(ಬಿ.ಕೆ) ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.