ಇಂಡಿ: ತಾಲ್ಲೂಕಿನ ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು 2,53,258 ಒಟ್ಟು ಮತದಾರರು ಇದ್ದಾರೆ. ಪ್ರಸಕ್ತ ವರ್ಷ 2,553 ಮತದಾರರು ಹೆಚ್ಚಾಗಿದ್ದಾರೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದರು.
ಅವರು ಗುರುವಾರ ಎಸಿ ಕಚೇರಿಯಲ್ಲಿ ತಾಲ್ಲೂಕಿನ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಾಲ್ಲೂಕಿನಲ್ಲಿ 1,30,109 ಪುರುಷ ಮತದಾರರು, 1,23,135 ಮಹಿಳಾ ಮತದಾರರು, ಇತರ 18 ಮತದಾರರು ಇದ್ದಾರೆ. ಕಳೆದ 2023 ರ ವಿಧಾನಸಭೆ ಚುನಾವಣೆಯಲ್ಲಿ ಇಂಡಿ ಮತಕ್ಷೇತ್ರದಲ್ಲಿ 1,22,997 ಪುರುಷರು, 1,14,382 ಮಹಿಳೆಯರು, ಇತರರು 18 ಒಟ್ಟು 2,37,397 ಮತದಾರರಿದ್ದರು.
ಈ ಬಾರಿ 2,553 ಮತದಾರರು ಹೆಚ್ಚಾಗಿದ್ದು, 659 ಮತದಾರರ ಹೆಸರನ್ನು ವರ್ಗಾವಣೆ ಅಥವಾ ಮರಣ ಹೊಂದಿದ ನಿಮಿತ್ತ ತೆಗೆಯಲಾಗಿದೆ.
ತಾಲ್ಲೂಕಿನಲ್ಲಿ ಪ್ರತಿ ಒಂದು ಸಾವಿರ ಪುರುಷರಿಗೆ 947 ಮಹಿಳೆಯರು ಇದ್ದಾರೆ. ಬಹುತೇಕ ಈ ಹಿಂದಿಗಿಂತಲೂ ಈ ಬಾರಿ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ವರ್ಷ ನಿರಂತರವಾಗಿ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಚುನಾವಣೆ ಪ್ರಕ್ರಿಯೆಯಲ್ಲಿ ಆಡಳಿತ ಯಂತ್ರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಪಾತ್ರವು ಮುಖ್ಯವಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಎಸಿ ಅಬೀದ ಗದ್ಯಾಳ ತಿಳಿಸಿದ್ದಾರೆ. ತಹಶೀಲ್ದಾರ್ ಬಿ.ಎಸ್. ಕಡಕಬಾವಿ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.