ಆಲಮಟ್ಟಿ: ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ (ಬೇನಾಳ ಬ್ರಿಜ್, ಪಾರ್ವತಿಕಟ್ಟಾ ಸೇತುವೆ ಬಳಿ) ಮಹಿಳೆಯೊಬ್ಬರು ಸೋಮವಾರ ನಾಲ್ವರು ಮಕ್ಕಳೊಂದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಮಹಿಳೆಯನ್ನು ರಕ್ಷಿಸಲಾಗಿದೆ. ಇಬ್ಬರು ಮಕ್ಕಳು ಮೃತಪಟ್ಟಿದ್ದು, ಇನ್ನಿಬ್ಬರು ನೀರು ಪಾಲಾಗಿದ್ದಾರೆ. ಶೋಧ ಮುಂದುವರೆದಿದೆ.
‘ಕೊಲ್ಹಾರ ತಾಲ್ಲೂಕಿನ ತೆಲಗಿ ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ ಭಜಂತ್ರಿ ಅವರ ಪತ್ನಿ ಭಾಗ್ಯ ಆತ್ಮಹತ್ಯೆಗೆ ಯತ್ನಿಸಿದವರು. ಮಕ್ಕಳಾದ ತನುಶ್ರೀ (5), ರಕ್ಷಾ (3) ಮೃತಪಟ್ಟಿದ್ದು, ಅವಳಿ ಮಕ್ಕಳಾದ ಹಸೇನ್ ಮತ್ತು ಹುಸೇನ್ (13 ತಿಂಗಳು) ಪತ್ತೆಗಾಗಿ ಶೋಧ ಮುಂದುವರೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ತಿ ಇಬ್ಭಾಗಕ್ಕಾಗಿ ನಿಂಗಪ್ಪ ಹಾಗೂ ತಂದೆ ಮತ್ತು ಸಹೋದರನೊಂದಿಗೆ ಕಳೆದ ಕೆಲ ದಿನಗಳಿಂದ ಕಲಹ ಏರ್ಪಟ್ಟಿತ್ತು. ಇದರಿಂದ ನಿಂಗಪ್ಪನ ಪತ್ನಿ ಭಾಗ್ಯ ನೊಂದಿದ್ದಳು. ಭಾನುವಾರ ಕಲಹ ಹೆಚ್ಚಾಗಿದ್ದಕ್ಕೆ ನಿಂಗಪ್ಪನ ತಂದೆ ಮನೆ ಬಿಟ್ಟು ಹೋಗಲು ಹೇಳಿದ್ದರು. ಇದರಿಂದ ನೊಂದು ಮನೆ ಬಿಟ್ಟು ದಂಪತಿ ಬಂದಿದ್ದರು ಎಂದು ಕುಟಂಬದವರು ಹೇಳಿದರು.
ನಿಂಗಪ್ಪ ಭಾಗ್ಯ ಹಾಗೂ ನಾಲ್ವರು ಮಕ್ಕಳು ಸೇರಿಕೊಂಡು ಲಿಂಗಸೂರು ತಾಲ್ಲೂಕು ಕಸಬಾ ಗ್ರಾಮಕ್ಕೆ ಹೊಸ ಬದುಕು ಕಟ್ಟಿಕೊಳ್ಳಲು ಸೋಮವಾರ ಬೈಕ್ ನಲ್ಲಿ ಹೊರಟಿದ್ದರು. ಆಲಮಟ್ಟಿ ಬಳಿ ಬಂದಾಗ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಸ್ಥಾವರದ ಸಮೀಪ ಬೈಕಿನ ಪೆಟ್ರೋಲ್ ಖಾಲಿಯಾಗಿದೆ. ಕಾಲುವೆಯ ಸಮೀಪವೇ ಹೆಂಡತಿ, ನಾಲ್ವರು ಮಕ್ಕಳು ಹಾಗೂ ಬೈಕ್ ಬಿಟ್ಟು ನಿಂಗಪ್ಪ ಪೆಟ್ರೋಲ್ ತರಲು ಹೋಗಿದ್ದಾನೆ. ಮೊದಲೇ ಕಲಹದಿಂದ ನೊಂದಿದ್ದ ಭಾಗ್ಯ ನಾಲ್ವರು ಮಕ್ಕಳು ಸಮೇತ ಕಾಲುವೆಗೆ ಜಿಗಿದಿದ್ದಾಳೆ.
ಮುಖ್ಯ ಸ್ಥಾವರ ಬಳಿಯೇ ಕಾಲುವೆಯಿದ್ದು, ನೀರು ಹರಿಸುತ್ತಿದ್ದರಿಂದ ನೀರಿನ ರಭಸ ಹೆಚ್ಚಿತ್ತು. ಮಹಿಳೆ ಹಾರುವುದನ್ನು ಗಮನಿಸಿದ ಅಲ್ಲಿಯ ಕೆಲವರು ತಕ್ಷಣ ಸ್ಥಳೀಯ ಮೀನುಗಾರರಿಗೆ ಫೋನ್ ಮಾಡಿದ್ದಾರೆ.
‘ಬೈಕಿನ ಪೆಟ್ರೋಲ್ ಮುಗಿಯದಿದ್ದರೆ ಬೈಕ್ ಅಲ್ಲಿ ನಿಲ್ಲಿಸುವ ಪ್ರಮೇಯವೇ ಬರುತ್ತಿರಲಿಲ್ಲಿ’ ಎಂದು ನಿಂಗಪ್ಪ ರೋಧಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಸಂಬಂಧಿಕರ ರೋಧನ ಮುಗಿಲುಮುಟ್ಟಿತ್ತು.
ಉಳಿಸಿದ ಬೈಕ್ ಚಾರ್ಜರ್ ಕೇಬಲ್: ತಾಯಿ ಭಾಗ್ಯ ಹಾಗೂ ಇಬ್ಬರು ಹೆಣ್ಣು ಮಕ್ಕಳಾದ ತನುಶ್ರೀ (5) ಹಾಗೂ ಸುರಕ್ಷಾ (3) ಬಿದ್ದ ಸ್ಥಳದಿಂದ 400 ಮೀಟರ್ ಅಂತರದಲ್ಲಿ ಕಾಲುವೆಯಲ್ಲಿ ಹರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಮೀನುಗಾರರು ಸೇರಿ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದರು.
ತಕ್ಷಣಕ್ಕೆ ನೀರಿನಲ್ಲಿ ಆಸರೆಗೆ ಒಗೆಯಲು ಹಗ್ಗ ಸಿಗಲಿಲ್ಲ. ಅಲ್ಲಿಯೇ ಒಬ್ಬರ ಬಳಿ ಎಲೆಕ್ಟ್ರಿಕ್ ಬೈಕಿನ ಚಾರ್ಜರ್ ಕೇಬಲ್ ಡಿಕ್ಕಿಯಲ್ಲಿರುವುದು ಗೊತ್ತಾಗಿ, ಕೇಬಲ್ ಕಾಲುವೆಯೊಳಗೆ ಎಸೆದಿದ್ದಾರೆ. ನಾಲ್ಕನೇ ಪ್ರಯತ್ನದಲ್ಲಿ ನೀರಿನಲ್ಲಿ ಕೊಚ್ಚಿ ಹೊರಟಿದ್ದ ತಾಯಿ ಭಾಗ್ಯಳ ಕೈಗೆ ಕೇಬಲ್ ಸಿಕ್ಕಿದ್ದು, ಭಾಗ್ಯಳನ್ನು ಮೇಲಕ್ಕೆ ಎತ್ತಲಾಯಿತು. ಬದುಕುಳಿದ ಭಾಗ್ಯಳಿಗೆ ನಿಡಗುಂದಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ಅಪಾಯಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ತೇಲಿಕೊಂಡು ಹೋಗುತ್ತಿದ್ದ ಇಬ್ಬರು ಮಕ್ಕಳನ್ನು ಹೊರಕ್ಕೆ ತೆಗೆಯುವುದರಲ್ಲಿಯೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಮೀನುಗಾರರಾದ ರಾಹುಲ್, ಶಿವಾಜಿ ತಿಳಿಸಿದರು.
ಅವಳಿ ಮಕ್ಕಳ ಶವಕ್ಕಾಗಿ ಹುಡುಕಾಟ: ಮೊಹರಂನ ದೇವರುಗಳಿಗೆ ಗಂಡು ಮಕ್ಕಳಿಗೆ ಹರಕೆ ಹೊತ್ತಿದ್ದ ತಾಯಿ ಭಾಗ್ಯ, ನಂತರ ಇಬ್ಬರು ಅವಳಿ ಮಕ್ಕಳು ಜನಿಸಿದ್ದರು. ಅಲಾಯಿ ದೇವರ ಸ್ಮರಣೆಗಾಗಿ ಹಿಂದೂ ಆದರೂ ಹಸೇನ, ಹುಸೇನ ಎಂದು ಮಕ್ಕಳಿಗೆ ನಾಮಕರಣ ಮಾಡಲಾಗಿತ್ತು. 13 ತಿಂಗಳ ಈ ಚಿಕ್ಕ ಮಕ್ಕಳು ಕಾಲುವೆಯಲ್ಲಿ ಮುಳುಗಿವೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯ ಮೀನುಗಾರರು ಹುಡುಕಾಡಿದರೂ ಸಂಜೆಯವರೆಗೂ ಅವರಿಬ್ಬರು ಪತ್ತೆಯಾಗಿಲ್ಲ. ಅವರು ಬದುಕಿರುವ ಸಾಧ್ಯತೆ ಕ್ಷೀಣಗೊಂಡಿವೆ. ವಿಶಾಲ ಕಾಲುವೆಯಲ್ಲಿ ಅಪಾರ ನೀರಿದ್ದು, ಅವಳಿ ಚಿಕ್ಕ ಮಕ್ಕಳನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೇಟಿ: ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್. ಪಿ. ಶಂಕರ ಮಾರಿಹಾಳ, ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಅಶೋಕ ಚವ್ಹಾಣ, ಪಿಎಸ್ ಐ ಶಿವಾನಂದ ಪಾಟೀಲ ಭೇಟಿ ನೀಡಿದರು.
ಸಾವಿನ ಕಾಲುವೆಯಾದ ‘ಎಡದಂಡೆ’
ರೈತರ ಬದುಕನ್ನು ಹಸನುಗೊಳಿಸುತ್ತಿರುವ ಆಲಮಟ್ಟಿ ಎಡದಂಡೆ ಕಾಲುವೆ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸುಲಭದ ಸ್ಥಳವಾಗಿದೆ. ಇದೇ ಕಾಲುವೆಯಲ್ಲಿ 2005 ಜನವರಿ 10ರಂದು ಎಳ್ಳ ಅಮವಾಸ್ಯೆಯಂದು ಬಸ್ ಮುಳುಗಿ 58 ಜನ ಮೃತಪಟ್ಟಿದ್ದರು. ಕಾಲುವೆಯಲ್ಲಿ ಈಜಾಡಲು ಹೋಗಿ ಹಲವಾರು ಜನ ಮೃತಪಟ್ಟಿದ್ದಾರೆ. ಒಟ್ಟಾರೆ ಆಲಮಟ್ಟಿಯಿಂದ ನಿಡಗುಂದಿ ವರೆಗೆ ನಾಲ್ಕು ಕಿ.ಮೀ ದಲ್ಲಿ ಈ ಕಾಲುವೆಯಲ್ಲಿ 85 ಕ್ಕೂ ಅಧಿಕ ಜನ ನಾನಾ ಕಾರಣಗಳಿಂದ ಮುಳುಗಿ ಪ್ರಾಣ ಬಿಟ್ಟಿದ್ದಾರೆ.
ರಕ್ಷಣಾ ಗ್ಯಾಲರಿ ನಿರ್ಮಿಸಲು ಆಗ್ರಹ
ಎಎಲ್ ಬಿಸಿ ಕಾಲುವೆಯ ಗುಂಟ ಸುಮಾರು ನಾಲ್ಕು ಕಿ.ಮೀ ರಕ್ಷಣಾ ಕವಚ ನಿರ್ಮಿಸಲು ಹಲವು ದಿನಗಳ ಬೇಡಿಕೆಯಿದೆ. ಆದರೆ ಅದರಲ್ಲಿ ನಿಡಗುಂದಿ ಬಳಿ ಮಾತ್ರ ರಕ್ಷಣಾ ಗ್ಯಾಲರಿ ನಿರ್ಮಿಸಿದ್ದಾರೆ. ಕಾಲುವೆಯ ಎರಡೂ ಬದಿಗೆ ಅಡ್ಡಲಾಗಿ ನಾನಾ ಕಡೆ ಹಗ್ಗ ಅಳವಡಿಸಿದರೆ ಕಾಲುವೆಯಲ್ಲಿ ಆಕಸ್ಮಿಕವಾಗಿ ಬಿದ್ದು ಕೊಚ್ಚಿ ಹೋಗುತ್ತಿರುವವರಿಗೆ ಹಿಡಿದು ನಿಲ್ಲಲು ಆಸರೆಯಾಗಲಿದೆ ಎನ್ನುತ್ತಾರೆ ಮೀನುಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.