ADVERTISEMENT

`ಅಭಿವೃದ್ಧಿ ನೆಪದಲ್ಲಿ ಜನರಿಗೆ ವಂಚನೆ'

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:51 IST
Last Updated 24 ಏಪ್ರಿಲ್ 2013, 10:51 IST

ಯಾದಗಿರಿ: ಅಭಿವೃದ್ಧಿಯ ನೆಪ ಹೇಳಿ ಜನರನ್ನು ವಂಚಿಸಿ ಅಧಿಕಾರಕ್ಕೆ ಬಂದ ಬಿಜೆಪಿ ನಾಯಕರು, ಇದೀಗ ನಮ್ಮವರೇ ನಮ್ಮ ಬೆನ್ನಿಗೆ ಚೂರಿ ಹಾಕಿದರು ಎಂದು ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಯಾರು ಯಾರಿಗೆ ಚೂರಿ ಹಾಕಿದರೋ ಗೊತ್ತಿಲ್ಲ. ಆದರೆ ಬಿಜೆಪಿಯವರು ಜನರಿಗೆ ಮಾತ್ರ ಚೂರಿ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕರ್ನಾಟಕದ ಇತಿಹಾಸದಲ್ಲಿಯೇ ಭ್ರಷ್ಟ ಆಡಳಿತ ನೀಡಿದ್ದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.

ಸಂಸತ್ತಿಗೆ ನಡೆದ ಚುನಾವಣಾಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ಈ ಭಾಗಕ್ಕೆ 371ನೇ ಕಲಂ ತಿದ್ದುಪಡಿ ಮಸೂದೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಅದರಂತೆ ಈ ಭಾಗದ ಜನರ ಬಹುದಿನಗಳ ಕನಸನ್ನು ನನಸು ಮಾಡಲು ಮತ್ತು ಮತದಾರರ ಋಣ ತೀರಿಸಲು ತಿದ್ದುಪಡಿ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಸತತ 30ವರ್ಷಗಳಿಂದ ಹೋರಾಟ ನಡೆಸಿದ್ದರೂ, ಯಾರೊಬ್ಬರೂ ಸ್ಪಂದಿಸಿರಲಿಲ್ಲ. ಕಾಂಗ್ರೆಸ್ ಮಾತ್ರ ಮಾತು ಕೊಟ್ಟು ಮರೆಯದೇ ನುಡಿದಂತೆ ನಡೆದಿದೆ. ಈ ಬಾರಿಯ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥಿರ್ರ್ಗಳಿಗೆ ಮತ ನೀಡಿ ಗೆಲ್ಲಿಸಿದಲ್ಲಿ, ಈ ಮಸೂದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಹಾಯವಾಗಲಿದೆ ಎಂದು ಹೇಳಿದರು.

ಈ ಭಾಗದ ಅಭಿವೃದ್ಧಿಗೆ ಗುಲ್ಬರ್ಗದಿಂದ ಶಹಾಬಾದ, ವಾಡಿ, ಯಾದಗಿರಿ, ಸೈದಾಪೂರ, ಮಾರ್ಗವಾಗಿ ರಾಯಚೂರ, ಮಂತ್ರಾಲಯ, ಆಧೋನಿವರೆಗೆ ರೂ. 920ಕೋಟಿ ವೆಚ್ಚದಲ್ಲಿ ಸುಮಾರು 320 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದರು.

ರಾಜ್ಯಸಭೆ ಸದಸ್ಯ ಆನಂದ ಭಾಸ್ಕರ್ ಮಾತನಾಡಿ, ಕರ್ನಾಟಕದ ಅಭಿವೃದ್ಧಿಯಲ್ಲಿ ಐತಿಹಾಸಿಕ ಬದಲಾವಣೆಗಾಗಿ ಕಾಂಗ್ರೆಸ್ ಬೆಂಬಲಿಸಿ ಎಂದು ಹೇಳಿದರು. ಡಾ. ಎ.ಬಿ. ಮಾಲಕರಡ್ಡಿ ಮಾತನಾಡಿ, ಬಿಜೆಪಿ ದುರಾಡಳಿತ ನೋಡಿ ಜನತೆ ಬೇಸತ್ತಿದ್ದಾರೆ. ಜಿಲ್ಲೆಯಾದ್ಯಂತ ಜನರು ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲ್ಕಲ್, ಶಾಸಕ ಶರಣಬಸ್ಸಪ್ಪ ದರ್ಶನಾಪೂರ, ವಿಧಾನಪರಿಷತ್ ಮಾಜಿ ಸದಸ್ಯ ಚೆನ್ನಾರಡ್ಡಿ ತುನ್ನೂರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶರಣೀಕ್‌ಕುಮಾರ ದೋಖಾ, ಸುರೇಶ ಜೈನ್ ಸೇರಿದಂತೆ ಹಲವಾರು ಜನರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.