ಯಾದಗಿರಿ: ಕಳೆದ ತಾಲ್ಲೂಕು ಪಂಚಾಯಿತಿ ಸಭೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಬರದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕಚೇರಿಗೆ ನುಗ್ಗಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯರು, ಶುಕ್ರವಾರ ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಘಟನೆಗೆ ಕಾರ್ಯ ನಿರ್ವಾಹಕ ಅಧಿಕಾರಿಗಳೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ಸದಸ್ಯರಾದ ಶರಣಪ್ಪ ಮೋಟ್ನಳ್ಳಿ, ಹಣಮಂತ ಲಿಂಗೇರಿ ಮತ್ತಿತರರು, ಅಂದು ನಡೆದ ಘಟನೆಗೆ ಕಾರ್ಯ ನಿರ್ವಾಹಕ ಅಧಿಕಾರಿಗಳೇ ನೇರ ಜವಾಬ್ದಾರರು. ಕಳೆದ ಹಲವಾರು ಸಭೆಗಳಲ್ಲಿ ಸಹಾಯಕ ಕೃಷಿ ನಿರ್ದೇಶಕರನ್ನು ಸಭೆಗೆ ಕರೆಸಿ, ಮಾಹಿತಿ ಕೊಡಿಸುವಂತೆ ಕೋರಲಾಗಿತ್ತು. ಆದರೆ ಇದಾವುದಕ್ಕೂ ಸ್ಪಂದನೆಯೇ ಇಲ್ಲ.
ಹಿಂದಿನ ಸಭೆಯಲ್ಲೂ ಅಧಿಕಾರಿಯನ್ನು ಕರೆಸುವಂತೆ ಕೇಳಲಾಗಿತ್ತು. ಆದರೆ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೇವಲ ಮೊಬೈಲ್ ಕರೆ ಮಾಡಿ ಕುಳಿತು ಬಿಟ್ಟರು. ಹಿಂದಿನ ಸಭೆಯಲ್ಲಿ ನಿರ್ಧಾರವಾಗಿದ್ದೇ ಬೇರೆ, ನಡುವಳಿಕೆಯಲ್ಲಿ ಬರೆದಿರುವುದೇ ಬೇರೆ. ಹಿಂದಿನ ಸಭೆಯಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಸದಸ್ಯರ ಸಹನೆ ಪರೀಕ್ಷಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಮಾತನಾಡಿದ ಕಾರ್ಯ ನಿರ್ವಾಹಕ ಅಧಿಕಾರಿ ಬಿರಾದಾರ, ಇದರಲ್ಲಿ ತಮ್ಮದೇನು ತಪ್ಪಿಲ್ಲ. ಅಧಿಕಾರಿಗಳು ಬರದೇ ಇದ್ದರೆ ಏನು ಮಾಡಬೇಕು. ಈ ರೀತಿ ಹೇಳುವುದು ಸರಿಯಲ್ಲ ಎಂದರು. ನಂತರ ವಿಷಯಗಳ ಚರ್ಚೆ ಆರಂಭವಾಯಿತು.
ಕುಡಿಯುವ ನೀರಿನ ವಿಷಯದ ಬಗ್ಗೆ ಪ್ರಸ್ತಾಪಿಸಿದ ಶರಣಪ್ಪ ಮೋಟ್ನಳ್ಳಿ, ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೆಲವೆಡೆ ಹಳೆಯ ಬೋರ್‌ವೆಲ್‌ಗಳನ್ನು ದುರಸ್ತಿ ಮಾಡಲಾಗಿದೆ. ಕೆಲವೆಡೆ ಹೊಸ ಬೋರ್‌ವೆಲ್ ಕೊರೆಯಲಾಗಿದೆ.
ಆದರೆ ಹೊಸ ಬೋರ್‌ವೆಲ್‌ಗೆ ಅಳವಡಿಸಿದ್ದ ಕೈಪಂಪ್ ಸೆಟ್ ಅನ್ನು, ಪಂಪ್ ಆಪರೇಟರ್, ದುರಸ್ತಿ ಮಾಡುವವರೇ ಕಳುವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ದುರಸ್ತಿ ಮಾಡುವವನೊಬ್ಬ ತಾನೇ ಕಳವು ಮಾಡಿರುವುದಾಗಿ ಒಪ್ಪಿ ಬರೆದಿರುವ ಪತ್ರವನ್ನು ತಾಲ್ಲೂಕು ಪಂಚಾಯಿತಿಗೆ ನೀಡಲಾಗಿದೆ. ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಹೊನಗೇರಾ ಶಾಲೆಯಲ್ಲಿ ಹ್ಯಾಂಡ್‌ಪಂಪ್ ಸೆಟ್ ಕದ್ದುಕೊಂಡು ಹೋಗಲಾಗಿದೆ. ಪಂಪ್ ಆಪರೇಟರ್ ಇದನ್ನು ಒಪ್ಪಿಕೊಂಡಿದ್ದಾನೆ. ಈ ವಿಷಯದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಸಮಗ್ರವಾಗಿ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಾರ್ಯ ನಿರ್ವಾಹಕ ಅಧಿಕಾರಿ ಬಿರಾದಾರ ಹೇಳಿದರು.
ವಸತಿ ಯೋಜನೆ: ತಾಲ್ಲೂಕಿನಲ್ಲಿ ವಸತಿ ಯೋಜನೆಗಳು ಅರ್ಹ ಸಿಗುತ್ತಿಲ್ಲ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು ಎಂದು ಹಣಮಂತ ಚಾಮನಳ್ಳಿ ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಬಿರಾದಾರ, ಬಾಡಿಯಾಳ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 227 ಮನೆಗಳ ಪೈಕಿ, ಕೇವಲ 97 ಮನೆಗಳು ಮುಗಿದಿವೆ. ಉಳಿದ ಮನೆಗಳ ಫಲಾನುಭವಿಗಳಿಗೆ ತಮಗೆ ಮನೆ ಬಂದಿದೆ ಎಂಬುದೂ ತಿಳಿದಿಲ್ಲ. ಅವರಿಗೆ ಯಾವುದೇ ಹಣವನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಲ್ಲೂಕಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಮಂಜೂರಾಗಿರುವ ಹಾಗೂ ಪೂರ್ಣಗೊಂಡಿರುವ ಮನೆಗಳ ಪಟ್ಟಿಯನ್ನು ನೀಡುವಂತೆ ಸದಸ್ಯರು ಕೋರಿದರು.
ನಿಮಗ ಪಾವರ್ ಇಲ್ಲೇನ್ರಿ?: ಎಲ್ಲಾದಕ್ಕೂ ಜಿಲ್ಲಾ ಪಂಚಾಯಿತಿ, ಆ ಆಫೀಸರ್, ಈ ಆಫೀಸರ್ ಅಂತೀರಿ. ನಿಮಗೇನ ಪಾವರ್ ಇಲ್ಲ ಏನ್ರಿ? ಎಂದು ಸದಸ್ಯ ಸದಾಶಿವರೆಡ್ಡಿ ಕೋಡ್ಲಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬಿರಾದಾರ ಅವರನ್ನು ಖಾರವಾಗಿ ಪ್ರಶ್ನಿಸಿದರು.
ಬಿಆರ್‌ಜಿಎಫ್ ಯೋಜನೆಯಡಿ ಬೆಳಗೇರಾ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸಮರ್ಪಕ ಯೋಜನೆ ಸಿಗುತ್ತಿಲ್ಲ. ಸದಸ್ಯರು ಹೇಳಿದ ಕಾಮಗಾರಿಯನ್ನು ತೆಗೆದುಕೊಳುತ್ತಿಲ್ಲ ಎಂದು ಸದಾಶಿವರೆಡ್ಡಿ ಪ್ರಶ್ನಿಸಿದರು.
ತಾಲ್ಲೂಕು ಪಂಚಾಯಿತಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಿದ ಪಟ್ಟಿ ಬೇರೆ ಇದೆ ಎಂದು ಬಿರಾದಾರ ಹೇಳಿದರು.
ಇದರಿಂದ ಆಕ್ರೋಶಗೊಂಡ ಸದಾಶಿವರೆಡ್ಡಿ, ನೀವು ಯೋಜನಾ ಸಮಿತಿ ಸಭೆಗೆ ಹೋಗುವುದಿಲ್ಲವೇ? ಅಲ್ಲಿ ಈ ವಿಷಯವನ್ನು ಹೇಳಿಲ್ಲವೇ? ಹೇಳಿದ್ದರೆ ನಿಮಗೆ ಪಾವರ್ ಇಲ್ಲ ಏನ್ರಿ? ಎಂದು ಪ್ರಶ್ನಿಸಿಯೇ ಬಿಟ್ಟರು.
ಅಧ್ಯಕ್ಷೆ ಶರಣಮ್ಮ ಕವಾಲ್ದಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ಯಾಮಲಾ ವಾರದ, ಸಣ್ಣ ಹಣಮಂತಪ್ಪ ಬಳಿಚಕ್ರ, ಸೇರಿದಂತೆ ವಿವಿಧ ಸದಸ್ಯರು ಪಾಲ್ಗೊಂಡಿದ್ದರು.
ಬಾಡಿಗೆಯೇ ಇಲ್ಲ; ತೆರಿಗೆ 3 ಲಕ್ಷ ಬಾಕಿ
ಯಾದಗಿರಿ: ನಗರದಲ್ಲಿರುವ ತಾಲ್ಲೂಕು ಪಂಚಾಯಿತಿ ಮಳಿಗೆಗಳಿಗೆ ಬಾಡಿಗೆಯೇ ವಸೂಲಿ ಆಗಿಲ್ಲ. ಆದರೆ ರೂ.2.95 ಲಕ್ಷ ತೆರಿಗೆ ಪಾವತಿಸಲು ನಗರಸಭೆಯಿಂದ ನೋಟಿಸ್ ಬಂದಿದೆ.
ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಯಿತು. ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ತಾಲ್ಲೂಕು ಪಂಚಾಯಿತಿ ಮಳಿಗೆಗಳಿಗೆ 1993-94 ರಿಂದ ಇಲ್ಲಿಯವರೆಗೆ ತೆರಿಗೆ ಪಾವತಿಸಿಲ್ಲ. ಹೀಗಾಗಿ ರೂ.2.95 ಲಕ್ಷ ತೆರಿಗೆ ಪಾವತಿಸುವಂತೆ ನಗರಸಭೆಯಿಂ ನೋಟಿಸ್ ಬಂದಿದೆ ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಬಿರಾದಾರ ತಿಳಿಸಿದರು.
ಅಲ್ಲಿಂದ ಇಲ್ಲಿಯವರೆಗೆ ವಸೂಲಿ ಮಾಡಿದ ಬಾಡಿಗೆ ಎಷ್ಟು? ಬಾಡಿಗೆ ವಸೂಲಿ ಆಗದೇ ಇದ್ದ ಮೇಲೆ ತೆರಿಗೆ ಕಟ್ಟುವುದಾದರೂ ಹೇಗೆ ಎಂದು ಸದಸ್ಯರು ಪ್ರಶ್ನಿಸಿದರು. ಕೂಡಲೇ ಆ ಮಳಿಗೆಗಳನ್ನು ಖಾಲಿ ಮಾಡಿಸಿ, ಮರು ಟೆಂಡರ್ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.