ADVERTISEMENT

ಕೆಂಭಾವಿ: ಪಟ್ಟಣದತ್ತ ಗುಳೆ ಹೊರಟ ಮಂದಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 8:55 IST
Last Updated 11 ಏಪ್ರಿಲ್ 2012, 8:55 IST

ಕೆಂಭಾವಿ: ತಾಲ್ಲೂಕಿನಲ್ಲಿ ಬರಗಾಲದ ಛಾಯೆ ವ್ಯಾಪಕವಾಗಿದ್ದು, ಗ್ರಾಮೀಣ ಪ್ರದೇಶಗಳ ಜನರಿಗೆ ಕೂಲಿ ಸಿಗದೆ ಕೂಲಿ ಅರಸಿ ವ್ಯಾಪಕವಾಗಿ ಗುಳೆ ಹೋಗುತ್ತಿರುವುದು ನಡೆದಿದೆ. 

ಪ್ರಸಕ್ತ ಬರಗಾಲ ಹಾಗು ಈ ಬಾರಿ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಸ್ಥಗಿತ ಮಾಡಿದ್ದರಿಂದ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಬೇರೆಡೆ ಹೋಗುವುದು ಅನಿವಾರ್ಯವಾಗಿದೆ.

ತಪ್ಪದ ಗುಳೆ: ಕೆಲಸ ಅರಸಿ ಗ್ರಾಮೀಣ ಜನರು ಗುಳೆ ಹೋಗುವುದನ್ನು ತಪ್ಪಿಲೆಂದೆ ಪ್ರಾರಂಗೊಂಡ ಉದ್ಯೋಗ ಖಾತರಿ ಯೋಜನೆ ಸ್ಥಗಿತಗೊಂಡು, ಇಲ್ಲಿನ ಜನರಿಗೆ ಮಾತ್ರ ಕೆಲಸ ಸಿಗುತ್ತಿಲ್ಲ.

ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದ್ದ ತಾಲ್ಲೂಕು ಇದಾಗಿದ್ದು, ಅಷ್ಟೇ ಬೇಗನೆ ಬೋಗಸ್ ಬಿಲ್ ಮಾಡಿದ್ದೂ ಬಯಲಾಯಿತು ಹೀಗಿರುವಾಗ ಈಗ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸವಿಲ್ಲ.

ನಿಜವಾದ ಕೂಲಿಕಾರ್ಮಿಕನಿಗೆ ಮಾತ್ರ ಕೆಲಸ ಸಿಗುತ್ತಿಲ್ಲ, ತಾಲ್ಲೂಕಿನಾದ್ಯಂತ ಬರಗಾಲದ ಪ್ರಭಾವ ಹೆಚ್ಚುತ್ತಿದ್ದು ಕಾರ್ಮಿಕರು ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಹವಣಿಸುವಂತಾಗಿದೆ. ತಮ್ಮ ಕುಟುಂಬ ಸಮೇತ ಪುಣೆ, ಬೆಂಗಳೂರು, ಸೋಲಾಪುರ, ಹೈದರಾಬಾದ್, ಕೊಲ್ಹಾಪುರ, ಮುಂಬೈಗಳಂತಹ ಮಹಾನಗರಗಳಲ್ಲಿ ಕಟ್ಟಡ ಕಾಮಗಾರಿ, ಮನೆಗೆಲಸದಂತಹ ಕೆಲಸ ವನ್ನು ಅರಸಿ ಗುಳೆ ಹೋಗುತ್ತಿದ್ದಾರೆ.

ಕಾಲುವೆಯಲ್ಲಿ ನೀರಿದ್ದರೆ ಈಗ ಕೂಲಿ ಕಾರ್ಮಿಕರ ಬೇಡಿಕೆ ಹೆಚ್ಚುತ್ತಿತ್ತು ಅಂತೆಯೇ ಕೂಲಿ ಕೂಡಾ ಹೆಚ್ಚಾಗುತ್ತಿತ್ತು. ಒಂದೆಡೆ ಕಾಲುವೆಗೆ ನೀರು ಬರದೇ, ಮಳೆರಾಯ ಕೈಕೊಟ್ಟು ಬಾರದ    ಬೆಳೆ ಹಿಗಿರುವಾಗ ಜನ ಅನ್ನ ಹುಡುಕಿಕೊಂಡು ಹೋಗುತ್ತಿರುವುದು ಸಹಜವಾಗಿದೆ.

ಜಾನುವಾರುಗಳ ಮಾರಾಟ: ಬರಗಲಾದ ಛಾಯೆಯಿಂದ ರೈತರು ಜಾನುವಾರುಗಳನ್ನು ಮಾರಾಟ ಮಾಡಿ ಜೀವನ ನಡೆಸುವಂತಾಗಿದೆ, ವಲಯದ ಬಹುತೇಕ ಗ್ರಾಮಗಳಲ್ಲಿ ಜನ ಮೇವಿನ ಕೊರತೆಯಿಂದ ಜಾನುವಾರುಗಳನ್ನು ಮಾರಾಟ ಮಾಡುತಿದ್ದಾರೆ.

ನೀರಾವರಿ ಪ್ರದೇಶವಾದ ಕೆಂಭಾವಿ ವಲಯ ಯಾವಾಗಲೂ ಹಸಿರಿನಿಂದ ಕೂಡಿರುತ್ತಿತ್ತು ಆದರೆ ಈಬಾರಿ ಕಾಲುವೆಯ ನೀರು ಮುಂಚೆಯೇ ಸ್ಥಗಿತಗೊಂಡಿದ್ದರಿಂದ ಗದ್ದೆಗಳೂ ಬರಡಾಗಿವೆ. ಅಲ್ಲಲ್ಲಿ ಅಲ್ಪ ಸ್ವಲ್ಪ ಮೇವು ಇದ್ದರೂ ಅದರ ಬೇಡಿಕೆ ಮಾತ್ರ ಹೆಚ್ಚಿದೆ, ಕೆಲವೆಡೆ ಬೇರೆ ಜಿಲ್ಲೆಗಳಿಗೆ ಮೇವು ಸಾಗಿಸುವುದೂ ಕಂಡುಬಂದಿದೆ.

ಜನ ಅನಿವಾರ್ಯವಾಗಿ ತಮ್ಮ ಮನೆಯಲ್ಲಿರುವ ಒಂದೆರಡು ದನಗಳನ್ನೂ ಮಾರುತ್ತಿದ್ದಾರೆ.
ಇಂತಹದರಲ್ಲಿ ದನಗಳನ್ನು ಕೊಳ್ಳಲು ಬರುವ ದಲ್ಲಾಳಿಗಳು ಕಡಿಮೆ ದರದಲ್ಲಿ ಜಾನುವಾರುಗಳನ್ನು ಕೊಳ್ಳುತ್ತಿದ್ದಾರೆ ಎಂದು ಮಲ್ಲಪ್ಪ ಹೇಳುತ್ತಾರೆ.
 
ನಮ್ಮ ಎಮ್ಮಿ ಕಮ್ಮಿ ಅಂದ್ರ 12 ಸಾವಿರಕ್ಕ ಮಾರಬೇಕ್ರಿ ಆದರ ಈಗ ಆರು, ಏಳು ಸಾವಿರಕ್ಕೆ ಕೇಳತಾರ‌್ರಿ ಎನ್ ಮಾಡದ್ರಿ ಅದ ಹಾಕಕ ನಮ್ಮಬಲ್ಲಿ ಕಣಕಿ ಇಲ್ಲ ಅದಕ್ಕ ಮಾರಲಿಕ್ಕತ್ತವಿ”, ಎಂದು ಹಣಮವ್ವ ತನ್ನ ಅಳನನ್ನು ತೋಡಿಕೊಂಡರು.

ಪ್ರತಿ ಸೋಮವಾರ ಕೆಂಭಾವಿಯಲ್ಲಿ ನಡೆಯುವ ದನಗಳ ಸಂತೆಯಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ಜಾನುವಾರುಗಳೇ ಹೆಚ್ಚು, ಪ್ರತಿ ವಾರ ಈ ಜಾನುವಾರುಗಳ ಸಂಖೆ ಹೆಚ್ಚುತ್ತಿದೆ ಎಂದು ಜಂತಾ ಕಾಲೊನಿ ಜನ ಹೇಳುತ್ತಾರೆ. ಸರ್ಕಾರ ಜಾನುವಾರುಗಳ ರಕ್ಷಣೆಗಾಗಿ ಕ್ರಮ ಜರುಗಿಸಬೇಕು ಎಂಬುದು ಪ್ರಾಣಿ ಪ್ರಿಯರ ಮನವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.