ADVERTISEMENT

ಕೊಟ್ಟಿಗೆಯಾದ ವಡಗೇರಾ ಗ್ರಾ.ಪಂ

ಮಲ್ಲೇಶ್ ನಾಯಕನಹಟ್ಟಿ
Published 15 ಡಿಸೆಂಬರ್ 2017, 6:50 IST
Last Updated 15 ಡಿಸೆಂಬರ್ 2017, 6:50 IST
ಯಾದಗಿರಿ ಜಿಲ್ಲೆಯ ನೂತನ ತಾಲ್ಲೂಕು ಕೇಂದ್ರ ವಡಗೇರಾ ಗ್ರಾಮ ಪಂಚಾಯಿತಿ ಆವರಣದಲ್ಲಿ ದನಗಳನ್ನು ಕಟ್ಟಿಹಾಕಿರುವುದು
ಯಾದಗಿರಿ ಜಿಲ್ಲೆಯ ನೂತನ ತಾಲ್ಲೂಕು ಕೇಂದ್ರ ವಡಗೇರಾ ಗ್ರಾಮ ಪಂಚಾಯಿತಿ ಆವರಣದಲ್ಲಿ ದನಗಳನ್ನು ಕಟ್ಟಿಹಾಕಿರುವುದು   

ಯಾದಗಿರಿ: ನೂತನ ತಾಲ್ಲೂಕು ಕೇಂದ್ರವಾಗಿ ಘೋಷಿಸಲ್ಪಟ್ಟಿರುವ ಜಿಲ್ಲೆಯ ‘ವಡಗೇರಾ’ ಗ್ರಾಮ ಪಂಚಾಯಿತಿಯಲ್ಲಿ ಸದಾ ಬೀಗಮುದ್ರೆ ಕಾಣುತ್ತದೆ. ‘ವಡಗೇರಾ’ ಶಹಾಪುರ ತಾಲ್ಲೂಕಿನ ಹೋಬಳಿ ಕೇಂದ್ರ. 9,091 ಜನಸಂಖ್ಯೆ ಹೊಂದಿರುವ ಈ ಗ್ರಾಮ ಜಿಲ್ಲಾ ಕೇಂದ್ರದಿಂದ 20 ಕಿ.ಮೀ ಹಾಗೂ ಶಹಾಪುರ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿದೆ. ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಇದು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದು, ಬಡ ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ, ಪಂಗಡದ ಜನರೇ ಹೆಚ್ಚು ವಾಸವಾಗಿದ್ದಾರೆ. ಒಟ್ಟು 26 ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿನಿಧಿಸುತ್ತಾರೆ.

‘ಬೆಳಿಗ್ಗೆ ಕಸಗುಡಿಸಲು ಒಬ್ಬ ಗ್ರಾಮ ಪಂಚಾಯಿತಿ ಕಚೇರಿ ಸಹಾಯಕ ಬರುತ್ತಾರೆ. ಕಚೇರಿ ಕಟ್ಟಡದಲ್ಲಿನ ಕಸ ಗುಡಿಸುತ್ತಾರೆ. ನಂತರ ಛಾವಣಿ ಏರಿ ರಾಷ್ಟ್ರ ಧ್ವಜಾರೋಹಣ ಮಾಡಿ ಹೋಗುತ್ತಾರೆ. ಅಲ್ಲಿಗೆ ಗ್ರಾಮ ಪಂಚಾಯಿತಿ ಕರ್ತವ್ಯದ ಅವಧಿ ಮುಗಿಯಿತು. ಗ್ರಾಮ ಪಂಚಾಯಿತಿ ಕಚೇರಿಗೆ ಇಡೀ ದಿನ ಬೀಗ ಬಿದ್ದಿರುತ್ತದೆ. ಸಂಜೆ ರಾಷ್ಟ್ರಧ್ವಜ ಅವರೋಹಣ ಮಾಡುತ್ತಾರೆ. ಹಾಗಾಗಿ, ಊರಿನ ಜನರು ಗ್ರಾಮ ಪಂಚಾಯಿತಿ ಆವರಣಗಳಲ್ಲಿಯೇ ದನಕರುಗಳನ್ನು ಕಟ್ಟಿ ಹಾಕುತ್ತಾರೆ’ ಎಂದು ಗ್ರಾಮಸ್ಥರು ಸ್ಥಳಕ್ಕೆ ಭೇಟಿಕೊಟ್ಟ ‘ಪ್ರಜಾವಾಣಿ’ಗೆ ತೋರಿಸಿದರು.

‘ನಾಲ್ಕು ವರ್ಷಗಳಿಂದ ಇಲ್ಲಿನ ಪ್ರಭಾರ ಪಿಡಿಒ ಆಗಿ ಪುತ್ರಪ್ಪಗೌಡ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಎಂದೂ ಕಚೇರಿಗೆ ಬರುವುದಿಲ್ಲ. ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಏನೇ ಕೆಲಸಗಳಿದ್ದರೂ, ಜನರು 30 ಕಿಲೋಮೀಟರ್‌ ದೂರದ ಶಹಾಪುರಕ್ಕೆ ಹೋಗಿ ಪಿಡಿಒ ಅವರನ್ನು ಕಂಡು ಬರಬೇಕು. ಇನ್ನು ಅಧ್ಯಕ್ಷರು, ಸದಸ್ಯರು ಇತ್ತ ಕಣ್ಣು ಹಾಯಿಸುವುದಿಲ್ಲ. ಶಾಸಕರು ಇತ್ತ ಹೆಜ್ಜೆಯೂ ಇಡುವುದಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಈ ದುಃಸ್ಥಿತಿ ಕುರಿತು ವಿಚಾರಿಸಲು ಪಿಡಿಒ ಪುತ್ರಪ್ಪಗೌಡ, ತಾಲ್ಲೂಕು ಪಂಚಾಯಿತಿ ಇಒ ಟಿ.ಎಸ್.ತೆಕ್ಕಳಿಕೆ ಅವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಇನ್ಫೋಗ್ರಾಫಿಕ್ಸ್ (2011ರ ಜನಗಣತಿ ಆಧಾರ)
9091 ಗ್ರಾಮದ ಒಟ್ಟು ಜನಸಂಖ್ಯೆ

3,293 ಪರಿಶಿಷ್ಟ ಜಾತಿ ಜನರ ಒಟ್ಟು ಸಂಖ್ಯೆ

1,909 ಪರಿಶಿಷ್ಟ ಪಂಗಡ ಜನರ ಒಟ್ಟು ಸಂಖ್ಯೆ

4,581 ಗ್ರಾಮದ ಒಟ್ಟು ಮಹಿಳೆಯರ ಸಂಖ್ಯೆ

4,510 ಗ್ರಾಮದ ಒಟ್ಟು ಪುರುಷರ ಸಂಖ್ಯೆ

* * 

ಒಬ್ಬ ಪಿಡಿಒಗೆ ಎರಡಕ್ಕಿಂತ ಹೆಚ್ಚು ಗ್ರಾಮ ಪಂಚಾಯಿತಿ ಪ್ರಭಾರ ನೀಡುವಂತಿಲ್ಲ ಎಂದು ಆದೇಶಿಸಿದ್ದೇನೆ. ಒಂದು ವೇಳೆ ಹೆಚ್ಚು ಪ್ರಭಾರ ವಹಿಸಿದ್ದರೆ ಇಒ ವಿರುದ್ಧ ಕ್ರಮಕೈಗೊಳ್ಳುತ್ತೇನೆ
ಜೆ.ಮಂಜುನಾಥ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.