ADVERTISEMENT

‘ಗುಳೆ ನಿಯಂತ್ರಣ ಮೊದಲ ಆದ್ಯತೆ’

ಪ್ರಬಲ ಪೈಪೋಟಿ ನೀಡುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್‌ ನೆಲೆಗೊಳಿಸಿದ ಶಾಸಕ

ಮಲ್ಲೇಶ್ ನಾಯಕನಹಟ್ಟಿ
Published 9 ಜೂನ್ 2018, 8:45 IST
Last Updated 9 ಜೂನ್ 2018, 8:45 IST
ನಾಗನಗೌಡ ಕಂದಕೂರ
ನಾಗನಗೌಡ ಕಂದಕೂರ   

ಯಾದಗಿರಿ: ರಾಜಕೀಯದಲ್ಲಿ ಸಾಕಷ್ಟು ಕಹಿ ಉಂಡವರು ‘ನಾಗನಗೌಡ ಕಂದಕೂರ’. ಜೆಡಿಎಸ್ ಅನ್ನು ಜಿಲ್ಲೆಯಲ್ಲಿ ನೆಲೆಗೊಳಿಸಿದ ಕಂದಕೂರ ಮನೆತನದ ಹಿರಿಯ ಮುಖಂಡ. ಗುರುಮಠಕಲ್‌ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುತ್ತಾ ಬಂದ ಅವರು, ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್–ಕಾಂಗ್ರೆಸ್‌ ದೋಸ್ತಿ ಸರ್ಕಾರದಲ್ಲಿ ಕಂದಕೂರರಿಗೆ ಸಚಿವ ಸ್ಥಾನ ಕಾಯಂ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬಂದಿದ್ದವು. ಅವರು ಈ ನಿರೀಕ್ಷೆಯನ್ನು ಇಟ್ಟುಕೊಂಡೇ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದರು. ಆದರೆ, ಮಂತ್ರಿಮಂಡಲ ರಚನೆಯಾದ ಬಳಿಕ ಕ್ಷೇತ್ರಕ್ಕೆ ಮರಳಿದ್ದಾರೆ. ಕ್ಷೇತ್ರ ಅಭಿವೃದ್ಧಿ ಕಾರ್ಯದತ್ತ ಗಮನ ಹರಿಸಿದ್ದಾರೆ. ಅವರು ಶಾಸಕರಾದ ನಂತರ ಮೊದಲ ಬಾರಿಗೆ ‘ಪ್ರಜಾವಾಣಿ’ ಜತೆಗೆ ಮಾತನಾಡಿದ್ದಾರೆ.

 ನೀವು ಗೆದ್ದಾಗಿದೆ, ತಕ್ಷಣಕ್ಕೆ ಮಾಡುವ ಅಭಿವೃದ್ಧಿ ಕೆಲಸ?

ADVERTISEMENT

ಖರ್ಗೆ, ಚಿಂಚಿನಸೂರು ಅವರಂತಹವರಿಗೆ ಉಜ್ವಲ ರಾಜಕೀಯ ಭವಿಷ್ಯ ನೀಡಿ ತೀರಾ ಹಿಂದುಳಿದ ಹಣೆಪಟ್ಟಿ ಕಟ್ಟಿಕೊಂಡಿರುವ ‘ಗುರುಮಠಕಲ್‌’ ಕ್ಷೇತ್ರದಲ್ಲಿ ಪ್ರಸ್ತುತ ನೂರಾರು ಜ್ವಲಂತ ಸಮಸ್ಯೆಗಳಿವೆ. ತಕ್ಷಣ ಎಂದರೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಚರಂಡಿ, ಸ್ವಚ್ಛತೆಯನ್ನು ಮೊದಲ ಆದ್ಯತೆಯನ್ನಾಗಿ ಪರಿಗಣಿಸಲಿದ್ದೇನೆ.

ಕ್ಷೇತ್ರದಲ್ಲಿ ಬಡ ವರ್ಗದ ಜನರು ಹೆಚ್ಚಿದ್ದಾರೆ. ಸಮರ್ಪಕವಾಗಿ ಅವರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುವುದೇ ನನ್ನ ಮುಂದಿನ ಗುರಿ. ಈಗಲೂ ನೂರಾರು ಹಳ್ಳಿಗಳಲ್ಲಿ ಆರೋಗ್ಯ ಕೇಂದ್ರಗಳಿಲ್ಲ. ಸಮರ್ಪಕ ರಸ್ತೆಗಳಿಲ್ಲ. ಅರ್ಹರಿಗೆ ಬಿಪಿಎಲ್‌ ಕಾರ್ಡ್‌ಗಳಿಲ್ಲ. ಇವನ್ನೆಲ್ಲ ನಾನು ಮಾಡಬೇಕಾದ ಅಗತ್ಯ ಮತ್ತು ಅನಿವಾರ್ಯ ಕೆಲಸ. ಆದ್ದರಿಂದ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಲಿದ್ದೇನೆ.

ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಾಕಿಕೊಂಡಿರುವ ನೀಲನಕ್ಷೆ ಏನು?

ರಾಜ್ಯದಲ್ಲಿ ಹೆಚ್ಚು ಜನರು ಕೂಲಿಗಾಗಿ ವಲಸೆ ಹೋಗುವ ಕ್ಷೇತ್ರಗಳಲ್ಲಿ ಗುರುಮಠಕಲ್‌ ಒಂದಾಗಿದೆ. ನಲವತ್ತು ವರ್ಷಗಳ ದೀರ್ಘ ಕಾಲ ಆಳ್ವಿಕೆ ನಡೆಸಿರುವ ಜನಪ್ರತಿನಿಧಿಗಳು ವಲಸೆಯನ್ನು ಒಂದು ಸಮಸ್ಯೆ ಎಂದು ಪರಿಗಣಿಸದೇ ಇರುವುದರಿಂದ ಈ ಸಮಸ್ಯೆ ಇಂದು ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲ ಕೆರೆಗಳ ಹೂಳೆತ್ತಿ ನೀರು ತುಂಬಿಸುವ ಯೋಜನೆಯನ್ನು ಸಾಕಾರಗೊಳಿಸಿದರೆ ವಲಸೆ ಸಮಸ್ಯೆ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ಕೆರೆ ತುಂಬಿಸುವ ಯೋಜನೆಯನ್ನು ಸರ್ಕಾರದ ಮುಂದೆ ಪ್ರಸ್ತಾವ ಇಡಲಿದ್ದೇನೆ.

ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಕೊರತೆ, ನನೆಗುದಿಗೆ ಬಿದ್ದಿರುವ ಕೈಗಾರಿಕಾ ಪ್ರದೇಶ, ಏಳಿಗೆ ಕಾಣದ ಬಡತನ ರೇಖೆಗಿಂತ ಕೆಳಗಿನ ವರ್ಗ, ಕುಡಿಯುವ ನೀರಿನ ಅಭಾವ, ಕಣಿವೆ ಪ್ರದೇಶಗಳ ಗ್ರಾಮಗಳಲ್ಲಿನ ಜನಜೀವನ ಸುಧಾರಣೆ ನಿಟ್ಟಿನಲ್ಲಿ ಯೋಜನೆ ರೂಪಿಸಲಿದ್ದೇನೆ.

ಕೈಗಾರಿಕಾ ಪ್ರದೇಶದಿಂದ ಜನರ ಕನಸು ಈಡೇರಿಲ್ಲ ಎಂಬ ದೂರುಗಳಿವೆ?

ನಿಜ. ಕೇವಲ ಗುರುಮಠಕಲ್‌ ಕ್ಷೇತ್ರವನ್ನು ಗುರಿಯಾಗಿಸಿಕೊಂಡು ಕೈಗಾರಿಕಾ ಪ್ರದೇಶವನ್ನು ಸರ್ಕಾರ ನಿರ್ಮಿಸಿಲ್ಲ. ಆದರೆ, ಅದರ ಬಹುಪಾಲು ಪ್ರಯೋಜನ ಗುರುಮಠಕಲ್ ಕ್ಷೇತ್ರದ ಜನರಿಗೆ ಸಿಗುತ್ತದೆ. ಇಂದು ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗದೇ ಇರುವುದರಿಂದ ಜನರ ಕನಸು ಈಡೇರಿಲ್ಲ. ಹಿಂದಿದ್ದ ಶಾಸಕ, ಸಚಿವರು ಅದರ ಅಭಿವೃದ್ಧಿ ಮರೆತಿದ್ದರಿಂದಲೇ ಇಂದು ಇಂಥಾ ಸ್ಥಿತಿ ಬಂದಿದೆ.

ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಗಮನ ಸೆಳೆದು ಖಾಸಗಿ ಕಂಪೆನಿಗಳು ಬಾಡಿಯಾಳ ಕಡೇ ಚೂರು ಕೈಗಾರಿಕಾ ಪ್ರದೇಶದತ್ತ ಕಣ್ಣು ಹಾಯಿಸುವಂತೆ ಮಾಡುತ್ತೇನೆ. ಕಂಪೆನಿಗಳಿಗೆ ಬೇಕಾದ ಮೂಲ ಸೌಕರ್ಯ ಒದಗಿಸಿಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇದರಿಂದ ಇಲ್ಲಿನ ಜನರಿಗೆ ಹೆಚ್ಚಿನ ಉದ್ಯೋಗ ದೊರೆಯುವಂತೆ ಶ್ರಮಿಸುತ್ತೇನೆ.

ಶೈಕ್ಷಣಿಕ ಪ್ರಗತಿಗೆ ಯಾವ ಯೋಜನೆ ರೂಪಿಸಿದ್ದೀರಿ?

ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಮಕ್ಕಳ ಗೈರು ಶಿಕ್ಷಣ ಪ್ರಗತಿ ಕುಂಠಿತಕ್ಕೆ ಕಾರಣವಾಗಿದೆ. ಈ ವಿಷಯದಲ್ಲಿ ವಲಸೆ ಪ್ರಮುಖ ಕಾರಣವಾಗಿದೆ. ವಲಸೆ ನಿಲ್ಲಿಸಿದರೆ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯವಾಗುತ್ತದೆ. ಪೋಷಕರ ಬೇಜವಾಬ್ದಾರಿ, ಶಿಕ್ಷಕರ ಕರ್ತವ್ಯ ಬದ್ಧತೆಯ ಕೊರತೆ ಶೈಕ್ಷಣಿಕ ಪ್ರಗತಿ ಕುಸಿತಕ್ಕೆ ಕಾರಣವಾಗಿದೆ. ಶೈಕ್ಷಣಿಕ ಭವಿಷ್ಯ ಕುರಿತು ಪೋಷಕರಲ್ಲಿ ಅರಿವು ಮೂಡಿಸಲು ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧಿಕಾರಿಗಳ ಮಟ್ಟದಲ್ಲಿ ಸಮಾಲೋಚಿಸುತ್ತೇನೆ. ಗುರುಮಠಕಲ್‌ ಕ್ಷೇತ್ರಕ್ಕೆ ವಿಶೇಷ ಶೈಕ್ಷಣಿಕ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿ  ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.