ADVERTISEMENT

ಜ.1ರಿಂದ ಶತಮಾನೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 8:55 IST
Last Updated 25 ಡಿಸೆಂಬರ್ 2012, 8:55 IST

ಜೇವರ್ಗಿ: ತಾಲ್ಲೂಕಿನ ಸೊನ್ನ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿರಕ್ತಮಠದಲ್ಲಿ ಜ.1ರಿಂದ24ರವರೆಗೆ ವಿಶ್ವಗುರು ಬಸವಣ್ಣನವರ ಶತಮಾನೋತ್ಸವ, ನೂತನವಾಗಿ ನಿರ್ಮಿಸಿದ ಶ್ರೀಮಠದ ಲೋಕಾರ್ಪಣೆ, ಶಿವಾನಂದ ಸ್ವಾಮೀಜಿಯವರ ಸುವರ್ಣ ಮಹೋತ್ಸವ, ಶಿವಾನಂದ ಶಿವಯೋಗಿ ಗ್ರಾಮೀಣ ಜನಕಲ್ಯಾಣ ಸಂಸ್ಥೆಯ 12ನೇ ವಾರ್ಷಿಕೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅದ್ಧೂರಿಯಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ  ಶಾಸಕ ದೊಡ್ಡಪ್ಪಗೌಡ  ಪಾಟೀಲ ನರಿಬೋಳ ತಿಳಿಸಿದ್ದಾರೆ.

ಭಾನುವಾರ ಸೊನ್ನದ ಶ್ರೀಮಠದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ  ಮಾತನಾಡಿ, ತಾಲ್ಲೂಕಿನಲ್ಲಿ ಇಂಥಹ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಲಾಗಿದೆ. ಭಕ್ತರ ಸಹಾಯ-ಸಹಕಾರದಿಂದ ಈ ಎಲ್ಲಾ ಕಾರ್ಯಗಳು ಜರುಗಲಿವೆ. ಜ.1ರಿಂದ 23ರವರೆಗೆ ಪ್ರತಿದಿನ ಸಂಜೆ 7ರಿಂದ 9ರವರೆಗೆ ಶ್ರೀ ಮಠದ ಕಲ್ಯಾಣಮಂಟಪದಲ್ಲಿ `ಬಸವ ದರ್ಶನ' ಪ್ರವಚನ ನಡೆಯಲಿದೆ. ಹುನ್ನೂರಿನ ಶರಣ ಈಶ್ವರ ಮಂಟೂರ ಅವರು 21ದಿನಗಳವರೆಗೆ ಪ್ರವಚನ ದಾಸೋಹ ನೀಡಲಿದ್ದಾರೆ.

ಜ.1ರಂದು ಸಂಜೆ 7ಗಂಟೆಗೆ ಬಸವ ದರ್ಶನ ಪ್ರವಚನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ಸುಲಫಲಮಠದ ಮಹಾಂತ ಶಿವಾಚಾರ್ಯರು, ಯಡ್ರಾಮಿಯ ಸಿದ್ಧರಾಮ ಸ್ವಾಮೀಜಿ, ಫೀರೋಜಾಬಾದನ ಗುರುಬಸವ ಸ್ವಾಮೀಜಿ, ಮಸಬಿನಾಳದ ಸಿದ್ಧರಾಮ ಸ್ವಾಮೀಜಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಜ.10ರಿಂದ ಶ್ರೀಮಠಕ್ಕೆ ದಾಸೋಹ ಸೇವೆಗೈದ 60ಗ್ರಾಮಗಳ ಭಕ್ತರಿಗೆ ಪ್ರತಿದಿನ ಮಹಾದಾಸೋಹ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪ್ರತಿದಿನ ದಾಸೋಹ ವ್ಯವಸ್ಥೆ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಜ.21ರಂದು ಶ್ರೀಮಠದಲ್ಲಿ ಬಸವ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮ ನಡೆಯಲಿದೆ.

ಜ.22ರಂದು ಬಸವಣ್ಣನವರ ಶತಮಾನೋತ್ಸವದ ಅಂಗವಾಗಿ ಆನೆಯ ಅಂಬಾರಿಯ ಮೇಲೆ ಶರಣರ ವಚನ ಸಾಹಿತ್ಯದ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10ಗಂಟೆಗೆ ಸಂಸ್ಥೆಯ 12ನೇ ವಾರ್ಷಿಕೋತ್ಸವ ಮತ್ತು ಯುವಜನೋತ್ಸವ, ಸಂಜೆ 6ಗಂಟೆಗೆ ಗ್ರಾಮೀಣೋತ್ಸವ ಹಾಗೂ ರಾತ್ರಿ 9ಗಂಟೆಗೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳು ಜರುಗಲಿವೆ.

ಜ.23ರಂದು ಬೆಳಿಗ್ಗೆ 10ಗಂಟೆಗೆ 100ಕ್ಕೂ ಅಧಿಕ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭ. ಸಂಜೆ 6ಗಂಟೆಗೆ ಪೂಜ್ಯ ಶಿವಾನಂದ ಸ್ವಾಮೀಜಿಯವರ ಸುವರ್ಣ ಮಹೋತ್ಸವ, ರಾತ್ರಿ 9ಗಂಟೆಗೆ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಜ.24ರಂದು ಲಿಂ. ಗುರುಸಿದ್ಧ ಸ್ವಾಮೀಜಿಯವರ ಪುಣ್ಯಸ್ಮರಣೋತ್ಸವ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಡಿನ ಪ್ರಮುಖ ರಾಜಕಾರಣಿಗಳು, ಮಠಾಧೀಶರುಗಳು, ಜನಪ್ರತಿನಿಧಿಗಳು ಹಾಗೂ ಶ್ರೀಮಠದ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ಸೊನ್ನದ ಶ್ರೀಗಳು ಹಾಗೂ ಶಾಸಕ ನರಿಬೋಳ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಮಹಾಜನಶೆಟ್ಟಿ, ಶಿವಾನಂದ ಸಾಹು ಮಾಕಾ, ಸಾಹೇಬಗೌಡ ಬಿರಾದಾರ, ಎಸ್.ಎಸ್.ಸಲಗರ್, ಶರಣಯ್ಯ ನಂದರಗಿಮಠ, ರಮೇಶ ಕೋಳಕೂರ, ಶಿವಲಿಂಗಪ್ಪ ಗೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.