ADVERTISEMENT

ತಳಮಟ್ಟದಿಂದ ಪಕ್ಷ ಸಂಘಟಿಸಿ: ಕಂದಕೂರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 9:00 IST
Last Updated 15 ಫೆಬ್ರುವರಿ 2012, 9:00 IST

ಸುರಪುರ: ಜಾತ್ಯತೀತ ಜನತಾ ದಳದಲ್ಲಿ ರಾಜ್ಯದ ಜನ ವಿಸ್ವಾಸವಿರಿಸಿಕೊಂಡಿದ್ದಾರೆ. ಆದರೆ ಭಿನ್ನಾಭಿಪ್ರಾಯಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ತಟಸ್ಥರಾಗಿದ್ದಾರೆ. ಜೆಡಿಎಸ್‌ನಿಂದ ಆಯ್ಕೆಯಾದ ಜನಪ್ರತಿನಿಧಿಗಳು ಬೇರೆ ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಬೇಕಿದೆ ಎಂದು ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ನಾಗನಗೌಡ ಕಂದಕೂರ್ ಪ್ರತಿಪಾದಿಸಿದರು.
ಇಲ್ಲಿನ ಉಸ್ತಾದ್ ಮಂಜಿಲ್‌ದಲ್ಲಿ ಸೋಮವಾರ ಏರ್ಪಡಿಸಿದ್ದ ಜೆಡಿಎಸ್ ತಾಲ್ಲೂಕು ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಪರ್ವಕಾಲ ಈಗ ಒದಗಿ ಬಂದಿದೆ. ಕಾರಣ ಪಕ್ಷದ ಮುಖಂಡರು ಈಗಿನಿಂದಲೆ ಕೆಲಸ ಮಾಡಿರಿ. ಪಕ್ಷವನ್ನು ಸಂಘಟಿಸಿರಿ. ನಮ್ಮ ಪಕ್ಷ ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ನೀಡುತ್ತದೆ ಎಂದು ಭರವಸೆ ನೀಡಿದರು.
ರಾಜ್ಯದ ಜನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.
 

ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸುಳಿಗೆ ಸಿಲುಕಿದೆ. ಕಾಂಗ್ರೆಸ್ ಪಕ್ಷ ದಶಕಗಳ ಕಾಲ ಅಧಿಕಾರ ನಡೆಸಿದರೂ ಯಾವುದೆ ಅಭಿವೃದ್ಧಿ ಮಾಡಿಲ್ಲ. ಕಾರಣ ಈ ಬಾರಿ ಜೆಡಿಎಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೆ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಈಗಿನ ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಯಾವುದೆ ಹಿಂದುಳಿದ ಮುಖಂಡರನ್ನು ಬೆಳೆಸಿಲ್ಲ. ಯಾದಗಿರಿ ಜಿಲ್ಲೆಯ ಶಾಸಕರು ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿಲ್ಲ. ಹಿಂದೆ ನಮ್ಮ ಪಕ್ಷದಿಂದ ಅಧಿಕಾರ ಮಾಡಿದ ಮುಖಂಡರು ಈಗ ಬೇರೆ ಪಕ್ಷದಲ್ಲಿದ್ದಾರೆ ಎಂದು ವಿಷಾದಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪುರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಅನಪೂರ್, ಮುಖಂಡರಾದ ತಿಮ್ಮಣ್ಣ ಹೆಡಗಿಮುದ್ರಿ, ಗೌಸ್ ಕೋಟೆ, ಖಾಜಾ ಬಾಬಾ, ಸಾಯಬಣ್ಣ ಗಣಪುರ್, ಅಶೋಕ ಕರಿಗಾರ್, ರಾಜಶೇಖರನಾಯಕ್ ಅನವಾರ್, ವಿಶ್ವನಾಥ ಶಿರವಾರ್, ಮಲ್ಲಣ್ಣಗೌಡ ವಂದಗನೂರ್ ಮಾತನಾಡಿದರು.

ಮುಖಂಡರಾದ ಹರಿಶ್ಚಂದ್ರ ಕಟ್ಟಿಮನಿ, ಸಂಗೀತಾ ವೇದಿಕೆಯಲ್ಲಿದ್ದರು. ಉಸ್ತಾದ್ ವಜಾಹತ್ ಹುಸೇನ್ ಪ್ರಾಸ್ತಾವಿಕ ಮಾತನಾಡಿದರು. ವೆಂಕಟೇಶ ಭಕ್ರಿ ಸ್ವಾಗತಿಸಿದರು. ಸಂಗಣ್ಣ ಬಾಕ್ಲಿ ನಿರೂಪಿಸಿದರು. ಭೀಮನಗೌಡ ಹಳ್ಳಿಗೌಡ ವಂದಿಸಿದರು.

ಶಿವಪ್ಪ ಸದಬ, ಅಯ್ಯಣ್ಣ ಹಾಲಬಾವಿ, ತಿಮ್ಮಣ್ಣ ಜಂಗಳಿ, ಪರಮಣ್ಣ ಗುಮೇದಾರ್, ಬಸವರಾಜ ವಾಗಣಗೇರಿ, ದೇವಿಂದ್ರಪ್ಪ ಬಳಿಚಕ್ರ, ತಿಪ್ಪಣ್ಣ ಪೊಲೀಸ್ ಪಾಟೀಲ, ತಿಮ್ಮಣ್ಣ ಪೋತಲಕರ್, ಎಸ್.ಎಂ. ರಹೆಮಾನ್ ದಖನಿ, ಸರ್ದಾರ್ ಅಹ್ಮದ್ ಖಾಜಿ, ಎಂ.ಡಿ. ಬಾಬಾ, ಕಲೀಮುದ್ದೀನ ಫರೀದಿ, ಮಹ್ಮದ್ ಇರ್ಫಾನ್, ಮಹ್ಮದ್ ಸೋಫಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT