ADVERTISEMENT

ತಿರುಪತಿ ಬ್ರಹ್ಮರಥಕ್ಕೆ ಸುರಪುರ ಅರಸು ಮನೆತನದಿಂದ ಪೂಜೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 11:02 IST
Last Updated 3 ಅಕ್ಟೋಬರ್ 2017, 11:02 IST
ತಿರುಪತಿ ಬ್ರಹ್ಮರಥಕ್ಕೆ ಸುರಪುರ ಅರಸು ಮನೆತನದಿಂದ ಪೂಜೆ
ತಿರುಪತಿ ಬ್ರಹ್ಮರಥಕ್ಕೆ ಸುರಪುರ ಅರಸು ಮನೆತನದಿಂದ ಪೂಜೆ   

ಸುರಪುರ: ಇತ್ತೀಚೆಗೆ ತಿರುಪತಿಯಲ್ಲಿ ಜರುಗಿದ ಬ್ರಹ್ಮೋತ್ಸವದಲ್ಲಿ ಸುರಪುರ ಸಂಸ್ಥಾನದ ಪ್ರಥಮಪೂಜೆ ಸಲ್ಲಿಕೆಯಾದ ನಂತರ ಬ್ರಹ್ಮರಥೋತ್ಸವಕ್ಕೆ ಚಾಲನೆ ದೊರಕಿತು.

ಪ್ರತಿ ವರ್ಷವೂ ಜರುಗುವ ಬ್ರಹ್ಮರಥೋತ್ಸವದಲ್ಲಿ ಸುರಪುರ ಸಂಸ್ಥಾನದಿಂದ ಪೂಜೆ ಸಲ್ಲಿಕೆಯಾದ ಬಳಿಕ ರಥೋತ್ಸವ ಜರುಗುತ್ತಿದೆ. ಸಾಂಪ್ರದಾಯದಂತೆ ಈ ಬಾರಿ ಅರಸು ಮನೆತನದ ಪ್ರತಿನಿಧಿಗಳಾಗಿ ಸಂಸ್ಥಾನದ ವೇಣುಮಾಧವ ನಾಯಕ, ಶ್ರೀನಿವಾಸ ದೇವರು ಚಿನ್ನದ ರಥವೇರಿ ಪೂಜೆ ಸಲ್ಲಿಸಿದರು.

ಹಿನ್ನಲೆ: 1710 ರಲ್ಲಿ ಅಂದಿನ ಅರಸ ಪಿತಾಂಬರಿ ಬಹಿರಿ ಪಿಡ್ಡನಾಯಕನಿಗೆ ಒಮ್ಮೆ ಕನಸಿನಲ್ಲಿ ತಿರುಪತಿಯ ತಿರುಮಲೇಶ ಪ್ರತ್ಯಕ್ಷನಾಗಿ ನಿಮ್ಮ ದೈವಭಕ್ತಿಗೆ ಮೆಚ್ಚಿದ್ದೇನೆ ಇನ್ನೂ ಮುಂದೆ ನೀವು ನನ್ನ ದರ್ಶನಕ್ಕೆ ಇಲ್ಲಿಯವರೆಗೆ ಬರುವುದು ಬೇಡ ನಾನೇ ನಿಮಗೆ ದರ್ಶನ ಭಾಗ್ಯ ನೀಡುತ್ತೇನೆ. ನಿಮ್ಮ ಮನೆತನದಿಂದಲೇ ಪ್ರಥಮಪೂಜೆ ಸ್ವೀಕರಿಸುವುದಾಗಿ ಅಭಯ ನೀಡಿದ್ದ ಎಂಬ ಬಗ್ಗೆ ಇತಿಹಾಸದಿಂದ ತಿಳಿದು ಬರುತ್ತದೆ. ಹೀಗಾಗಿ ಅರಸು ಮನೆತನದವರು ಇದುವರೆಗೂ ತಿರುಪತಿಗೆ ಹೋಗುವುದಿಲ್ಲ. ಪ್ರತಿ ವರ್ಷ ಸಂಸ್ಥಾನದಿಂದ ಪ್ರತಿನಿಧಿಯನ್ನು ಕಳುಹಿಸಿ ಪ್ರಥಮಪೂಜೆ ಮಾಡಿಸಲಾಗುತ್ತಿದೆ.

ADVERTISEMENT

ತಿರುಪತಿಗೂ ಇಲ್ಲಿಯ ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಮೂರು ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಅರಸು ಮನೆತನ ಹೀಗಲೂ ಮುಂದುವರೆಸಿಕೊಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.