ADVERTISEMENT

ತೊಗರಿ ಖರೀದಿ ಅವ್ಯವಸ್ಥೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 6:17 IST
Last Updated 24 ಫೆಬ್ರುವರಿ 2018, 6:17 IST
ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಕ್ರಾಸ್ ಬಳಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರಿಗೆ ಮನವಿ ಸಲ್ಲಿಸಿದರು
ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಕ್ರಾಸ್ ಬಳಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಎಸ್‌ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರಿಗೆ ಮನವಿ ಸಲ್ಲಿಸಿದರು   

ಶಹಾಪುರ: ತೊಗರಿ ಖರೀದಿ ಕೇಂದ್ರದ ಅವ್ಯವಸ್ಥೆ ಸರಿಪಡಿಸಬೇಕು ಮತ್ತು ಕಾಲುವೆ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಶಹಾಪುರ– ರಾಯಚೂರು ಹೆದ್ದಾರಿಯ ತಾಲ್ಲೂಕಿನ ಹತ್ತಿಗೂಡೂರ ಕ್ರಾಸ್ ಬಳಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

‘ಯಾದಗಿರಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ರೈತರು ಉತ್ತಮವಾಗಿ ತೊಗರಿ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಸೂಕ್ತ ಧಾರಣೆ ಇಲ್ಲ. ಆದರೆ, ತೊಗರಿ ಖರೀದಿ ಕೇಂದ್ರ ರೈತರ ನೆರವಿಗೆ ಇದೆ ಎನ್ನುಷ್ಟರಲ್ಲಿ ದಲ್ಲಾಳಿಗಳ ಹಾವಳಿ ಹಾಗೂ ತಾಂತ್ರಿಕ ನೆಪವೊಡ್ಡಿ ಖರೀದಿ ಸ್ಥಗಿತಗೊಳಿಸಿರುವುದು ರೈತರನ್ನು ಕೆರಳಿಸುವಂತೆ ಮಾಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ರಾಜ್ಯ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಆರೋಪಿಸಿದರು.

‘ಸುರಪುರ ಹಾಗೂ ಶಹಾಪುರ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ಕಾಲುವೆ ನೀರು ಬರುತ್ತಿಲ್ಲ. ಇದರಿಂದ ಸುರಪುರ ತಾಲ್ಲೂಕಿನ ಸತ್ಯಂಪೇಟೆ, ರುಕ್ಮಾಪುರ, ಚೌಡೇಶ್ವರಹಾಳ, ಯಮನೂರ, ಚಂದಲಾಪುರ, ಬೇವಿನಹಾಳ ಹಾಗೂ ಶಹಾಪುರ ತಾಲ್ಲೂಕಿನ ಕೊಳ್ಳೂರ, ಐಕೂರ, ಮುನಮುಟಗಿ, ಯಕ್ಷಿಂತಿ, ಗೌಡೂರ ಹೀಗೆ ಹಲವಾರು ಗ್ರಾಮಗಳು ಕಾಲುವೆ ನೀರಿನಿಂದ ವಂಚಿತಗೊಂಡಿವೆ. ಅಲ್ಲದೆ ಕಾಲುವೆ ಕೊನೆ ಭಾಗದಲ್ಲಿ ಸಮರ್ಪಕವಾಗಿ ಕಾಮಗಾರಿ ನಿರ್ವಹಿಸದೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ನೀರು ಇಲ್ಲದೆ ಹಣ ಪೋಲಾಗಿದೆ. ರೈತರಿಗೆ ಮಾತ್ರ ಗುಳೆ ಹೋಗುವುದು ತಪ್ಪಿಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಹಣಮಂತರಾಯ ಕೊಂಗಂಡಿ ದೂರಿದರು.

ADVERTISEMENT

ರೈತ ಮುಖಂಡರಾದ ನಾಗರತ್ನ ಪಾಟೀಲ, ಶರಣು ರಡ್ಡಿ ಹತ್ತಿಗೂಡೂರ, ತಿಪ್ಪಣ್ಣ ಘಂಟಿ, ಬಸಣ್ಣಗೌಡ ಬಿರಾದಾರ, ನಾಗಪ್ಪ ನರಬೋಳಿ, ಬಸವರಾಜ ಜಿನಕೇರಿ ಇದ್ದರು. ರಸ್ತೆ ತಡೆ ನಡೆಸಿದ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಭೀಮರಾಯನಗುಡಿ ಕೆಬಿಜೆಎನ್ಎಲ್ ನಿಗಮದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಮನವಿ ಸ್ವೀಕರಿಸಿದರು.

ಮಾಪನದಲ್ಲಿ ಅಕ್ರಮ: ‘ಆಯಾ ತೊಗರಿ ಖರೀದಿ ಕೇಂದ್ರದಲ್ಲಿ ಮಾಪನ ಮಾಡುವ ನೆಪದಲ್ಲಿ ತೊಗರಿ ಕಳವು ಮಾಡಲಾಗುತ್ತಿದೆ. ದಲ್ಲಾಳಿಗಳ ತೊಗರಿ ಖರೀದಿಸಿ ನಿಜವಾದ ರೈತರಿಗೆ ವಂಚನೆ ನಡೆದಿದೆ’ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘದ ಸಂಚಾಲಕ ಮಲ್ಲಣ್ಣ ಪರಿವಾಣ ಗೋಗಿ ನೇತೃತ್ವದಲ್ಲಿ ರೈತರು ಎಪಿಎಂಸಿ ಕೇಂದ್ರದ ಮುಂದೆ ಧರಣಿ ನಡೆಸಿದರು.

‘ರೈತರ ಬಾಕಿ ಉಳಿದ ತೊಗರಿ ಖರೀದಿಸಬೇಕು. ತೊಗರಿ ಖರೀದಿ ಕೇಂದ್ರದಲ್ಲಿ ನಡೆದ ಅಕ್ರಮ ತನಿಖೆ ನಡೆಸಿ ಕಾರ್ಯದರ್ಶಿಗಳನ್ನು ಅಮಾನತುಗೊಳಿಸಬೇಕು. ತೂಕದಲ್ಲಿ ಕೊಳ್ಳೆ ಹೊಡೆಯುವ ಹಮಾಲರನ್ನು ಕೈಬಿಡಬೇಕು. ಸಹಕಾರ ಸಂಘದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು’ ಎಂದು ಧರಣಿನಿರತರು ಆಗ್ರಹಿಸಿದರು. ರೈತ ಮುಖಂಡರಾದ ಲಾಲ್ ಸಾಬ್ ಚೌದ್ರಿ, ಭೀಮಣ್ಣಗೌಡ ಹುಲಕಲ್, ಶರಣ ಗೌಡ ಮದ್ರಿಕಿ, ರೈತರು ಭಾಗವಹಿಸಿದ್ದರು.

‘5 ಲಕ್ಷ ಮೆಟ್ರಿಕ್‌ ಟನ್ ತೊಗರಿ ಖರೀದಿಗೆ ಕೇಂದ್ರಕ್ಕೆ ಪತ್ರ’

ಶಹಾಪುರ: ‘ತೊಗರಿ ಖರೀದಿಸುವ ಪ್ರಮಾಣ 5 ಲಕ್ಷ ಮೆಟ್ರಿಕ್‌ ಟನ್‌ಗೆ ಹೆಚ್ಚಿಸುವಂತೆ ಅನುಮತಿ ಕೋರಿ ಕೇಂದ್ರ ಕೃಷಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ನಿರೀಕ್ಷೆಯಲ್ಲಿದೆ. ಅನುಮೋದನೆ ದೊರೆತ ನಂತರ ಇನ್ನೂ ಹೆಚ್ಚಿನ ರೈತರಿಂದ ಖರೀದಿಸಲಾಗುವುದು’ ಎಂದು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಸದನಲ್ಲಿ ಶುಕ್ರವಾರ ಶಾಸಕ ಗುರು ಪಾಟೀಲ ಶಿರವಾಳ ಅವರ ಗಮನ ಸೆಳೆಯುವ ಸೂಚನೆಯ ವೇಳೆಯಲ್ಲಿ ಎತ್ತಿದ ಪ್ರಶ್ನೆಗೆ ಕೃಷಿ ಸಚಿವರು ಉತ್ತರಿಸಿದ್ದಾರೆ.

‘ಕೇಂದ್ರ ಸರ್ಕಾರವು ರಾಜ್ಯದಲ್ಲಿ 26,52,000 ಕ್ವಿಂಟಲ್ ತೊಗರಿ ಖರೀದಿಸಲು ಅನುಮತಿ ನೀಡಿದೆ. ಅದರಂತೆ ಫೆ.8ಕ್ಕೆ 17,07,170 ಕ್ವಿಂಟಲ್ ಪ್ರಮಾಣವನ್ನು 1,07,493 ರೈತರಿಂದ ಖರೀದಿಸಲಾಗಿದೆ. ಇನ್ನೂ 2,07,975 ನೋಂದಾಯಿತ ರೈತರಿಂದ 9,44,829 ಕ್ವಿಂಟಲ್ ಖರೀದಿಸಲು ಬಾಕಿ ಉಳಿದಿರುತ್ತದೆ’ ಎಂದು ವಿವರಿಸಿದ್ದಾರೆ.

* * 

ತೊಗರಿ ಖರೀದಿ ಕೇಂದ್ರದಲ್ಲಿ ಅಕ್ರಮ ಜಾಲ ಕಾರ್ಯ ನಿರ್ವ ಹಿಸುತ್ತಿದೆ. ದಲ್ಲಾಳಿಗಳ ಹಾವಳಿಯಿಂದ ರೈತರು ತತ್ತರಿಸಿದ್ದಾರೆ. ಜಿಲ್ಲಾಧಿಕಾರಿ ಮೌನವಹಿಸಿರುವುದು ಸರಿಯಲ್ಲ.
ಮಲ್ಲಣ್ಣ ಪರಿವಾಣ ಗೋಗಿ ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.