ಯಾದಗಿರಿ: ದಾಸ ಸಾಹಿತ್ಯಕ್ಕೆ ಮಾತ್ರವಲ್ಲ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಪುರಂದರ ದಾಸರ ಕೊಡುಗೆ ಅಪಾರವಾಗಿದೆ ಎಂದು ಪಂ. ನರಸಿಂಹಾ ಚಾರ್ಯ ಪುರಾಣಿಕ ಹೇಳಿದರು.
ಪುರಂದರ ದಾಸರ ಆರಾಧನಾ ಮಹೋತ್ಸವದ ಅಂಗವಾಗಿ ವಿಶ್ವ ಮಧ್ವ ಮಹಾ ಪರಿಷತ್ ವತಿಯಿಂದ ಆಯೋಜಿಸಿದ್ದ ನಗರ ಸಂಕೀರ್ತನ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
ಹರಿದಾಸರ ಸಾಲಿನಲ್ಲಿ ಪುರಂದರ ದಾಸರು ಶ್ರೇಷ್ಠರು ಎನ್ನುವುದಕ್ಕೆ, ಇತರ ದಾಸವರೇಣ್ಯರು ಕೊಂಡಾಡಿರುವುದೇ ಸಾಕ್ಷಿಯಾಗಿದೆ ಎಂದರು.
ಸಾಹಿತ್ಯ, ಸಂಸ್ಕೃತಿ, ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪುರಂದರ ದಾಸರು ಅನನ್ಯ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ. ಪುರಂದರ ವಿಠ್ಠಲ ಎಂಬ ಅಂಕಿತದಲ್ಲಿ ಅಪಾರ ಕೀರ್ತನೆಗಳನ್ನು ರಚಿಸಿ, ಸಮಾಜದಲ್ಲಿನ ಮೌಢ್ಯಗಳನ್ನು ಹೋಗಲಾಡಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಕೀರ್ತನೆ ಮತ್ತು ಇತರ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ನಮ್ಮ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉತ್ತರಾದಿ ಮಠದ ಸತ್ಯಾತ್ಮತೀರ್ಥರ ಅನುಗ್ರಹದಿಂದ ಕಳೆದ 3 ವರ್ಷಗಳಿಂದ ವಿಶ್ವ ಮಧ್ವ ಮಹಾ ಪರಿಷತ್ ಯಾದಗಿರಿ ಘಟಕದ ವತಿಯಿಂದ ಹಲ ವಾರು ಕಾರ್ಯಕ್ರಮಗಳು ನಡೆಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಇನ್ನೂ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿ, ವಿಪ್ರ ಬಂಧುಗಳ ಸಂಘಟನೆಯೊಂದಿಗೆ ಧಾರ್ಮಿಕ ಸಂಸ್ಕಾರಗಳ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಬ್ರಾಹ್ಮಣ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶ್ರೀನಿವಾಸರಾವ, ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರರಾವ ಮುಂಡರಗಿ, ಮಾಣಿಕರಾವ ಕುಲಕರ್ಣಿ, ಗುಂಡೇರಾವ ಪಂಚಾಹತ್ರಿ, ರಾಘವೇಂದ್ರಾಚಾರ್ಯ ಜೋಷಿ ಮುಂಡರಗಿ, ಆರ್.ಜಿ. ಕುಲಕರ್ಣಿ, ಮೋಹನ್ ಅನಪುರ, ವೆಂಕಟೇಶ ದೇಶಪಾಂಡೆ, ಸುಧಾಕರ ಕುಲಕರ್ಣಿ, ಆನಂದರಾವ ಕುಲಕರ್ಣಿ, ನರಸಿಂಹಾಚಾರ ಬಳಿಚಕ್ರ, ಸುಧಿಂದ್ರರಾವ ಇಡ್ಲೂರ, ಶಂಕರನಾರಾಯಣ ಕುಲಕರ್ಣಿ, ಪ್ರಹ್ಲಾದರಾವ ಜೋಷಿ, ರಮೇಶ ಟೀಚರ್, ಸತೀಶ ಕುಲಕರ್ಣಿ, ಗೋವರ್ಧನ ಪುರಾಣಿಕ, ಪ್ರಹ್ಲಾದ ಆತ್ಮಕೂರ, ಗಿರಿಧರ ತೆಂಗಳಿ, ಜೀತೇಂದ್ರ ಕೊಲ್ಲೂರ, ಬಾಬುರಾವ ಕುಲಕರ್ಣಿ, ಗುರುರಾಜ ಮುತಾಲಿಕ, ವೆಂಕಟೇಶ ಕುಲಕರ್ಣಿ, ಪ್ರವೀಣ ದೇಶಮುಖ, ಗುರುರಾಜ ದೇಸಾಯಿ, ಶ್ರೀನಿವಾಸ ದಾಸ, ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ವಿಪ್ರ ಬಾಂಧವರು ಭಾಗವಹಿಸಿದ್ದರು.
ಬೆಳಿಗ್ಗೆ 6.30 ಕ್ಕೆ ಬಾಲಾಜಿ ಮಂದಿರದಿಂದ ರಾಘವೇಂದ್ರ ಪರಿಮಳ ಮಂಟಪದವರಿಗೆ ನಡೆದ ಸಂಕೀರ್ತನದಲ್ಲಿ ವಿವಿಧ ಭಜನಾ ಮಂಡಳಿಯ ಸದಸ್ಯರು, ವಿಪ್ರ ಬಂಧುಗಳು ಭಾಗವಹಿಸಿ, ಪುರಂದರ ದಾಸರ ಕೀರ್ತನೆಗಳನ್ನು ಹಾಡಿ ಕುಣಿದಾಡಿದರು. ಈ ಸಂದರ್ಭದಲ್ಲಿ ಮಹಿಳೆಯರ ಕೋಲಾಟ ವಿಶೇಷ ಮೆರಗು ನೀಡಿತು.
ಕೆಂಭಾವಿ ವರದಿ
ಸತ್ಯಪ್ರಮೋದ ಸೇವಾ ಸಂಘದ ವತಿಯಿಂದ ಮಂಗಳವಾರ ನಡೆದ ಸಂಕೀರ್ತನ ಕಾರ್ಯಕ್ರಮ ನಡೆಯಿತು.
ನಂತರ ಉತ್ತರಾದಿ ಮಠದಲ್ಲಿ ಉಪನ್ಯಾಸ ನೀಡಿದ ಸರ್ವೋತ್ತಮಾಚಾರ್ಯ ಜೋಷಿ, ದಾಸಶ್ರೇಷ್ಠರಲ್ಲಿ ಪುರಂದರದಾಸರು ಒಬ್ಬರು. ತಮ್ಮ ಕೀರ್ತನೆಗಳ ಮೂಲಕ ಸಮಾಜದ ಮೌಢ್ಯಗಳನ್ನು ತಿದ್ದಿ ಮಹತ್ವದ ಕ್ರಾಂತಿ ಮಾಡಿದ್ದಾರೆ ಎಂದು ಹೇಳಿದರು.
ಅರ್ಚಕ ವಿಜಯಾಚಾರ್ಯ ಪುರೋಹಿತ, ಪಂ. ಪ್ರಹ್ಲಾದಾಚಾರ್ಯ ಜೋಷಿ, ಜಯಾಚಾರ್ಯ ಪುರೋಹಿತ, ಗುರುಭಟ್ ಜೋಷಿ, ಹಳ್ಳೆಪ್ಪಾಚಾರ್ಯ ಚನ್ನೂರ, ಬಾಲಕೃಷ್ಣರಾವ ಕುಲಕರ್ಣಿ, ವಾಮನರಾವ ದೇಶಪಾಂಡೆ, ಮೋಹನರಾವ ಕುಲಕರ್ಣಿ, ನರಸಿಂಹರಾವ ಕುಲಕರ್ಣಿ, ಶೇಷಗಿರಿರಾವ ಕುಲಕರ್ಣಿ, ಗುರುರಾಜ ಕುಲಕರ್ಣಿ, ರಾಘವೇಂದ್ರರಾವ ಸದಬ, ರಂಗನಾಥ ಕುಲಕರ್ಣಿ, ರಾಘವೇಂದ್ರ ನಾಡಗೇರ, ಹಣಮಂತರಾವ ಕುಲಕರ್ಣಿ, ವೆಂಕಟೇಶ ನಾಡಿಗೇರ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.