ADVERTISEMENT

ನಶಿಸಿ ಹೋಗುತ್ತಿದೆ ಅಪರೂಪದ ವೀರಗಲ್ಲು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 8:00 IST
Last Updated 14 ಮಾರ್ಚ್ 2012, 8:00 IST

ಯಾದಗಿರಿ: ಹೈದರಾಬಾದ್ ಕರ್ನಾಟಕ ಹಾಗೂ ಸಗರನಾಡು ಎಂದೇ ಖ್ಯಾತವಾಗಿರುವ ಈ ಭಾಗ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಅನೇಕ ಅವಶೇಷಗಳು, ಸ್ಮಾರಕಗಳನ್ನು ಹೊಂದಿರುವ ಈ ಭಾಗವು, ಐತಿಹಾಸಿಕ ಮಹತ್ವವನ್ನು ಸಾರುತ್ತಿದೆ. ಆದರೆ ಹಲವಾರು ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು, ಜನರಲ್ಲಿ ಬೇಸರ ಮೂಡಿಸಿದೆ.

ಈ ಭಾಗದಲ್ಲಿ ಸಿಕ್ಕ ಶಾಸನಗಳು, ನಾಣ್ಯಗಳು, ಪುರಾತನ ಕಾಲದ ಸ್ಮಾರಕಗಳು, ಮಾಸ್ತಿ ಕಲ್ಲು, ವೀರಗಲ್ಲುಗಳನ್ನು ಅಧ್ಯಯನ ಮಾಡಿದಾಗ ಇಲ್ಲಿನ ರಾಜರ ಆಡಳಿತ, ವೀರರ ಮಾಹಿತಿ ಇತ್ಯಾದಿ ತಿಳಿದುಕೊಳ್ಳಲು ಸಹಾಯಕವಾಗಿವೆ. ಆದರೆ ಕೆಲವು ಶಾಸನಗಳು, ವೀರಗಲ್ಲು, ಮಾಸ್ತಿಗಲ್ಲುಗಳು  ಇತಿಹಾಸಕಾರರ ಕೈಗೆ ದೊರಕದೆ ಹಾಳಾಗುತ್ತಿವೆ.

ಇದಕ್ಕೆ ನಿದರ್ಶನ ಎಂಬಂತಿದೆ ಶಹಾಪುರ ತಾಲ್ಲೂಕಿನ ಹಿರೇತುಮಕೂರ ಗ್ರಾಮದಲ್ಲಿರುವ ಅನೇಕ ಮಾಸ್ತಿ ಕಲ್ಲು , ವೀರಗಲ್ಲುಗಳು. ಗ್ರಾಮದಲ್ಲಿ ಇಂತಹ ಅನೇಕ ಸ್ಮಾರಕಗಳು ಹೇರಳವಾಗಿ ಕಂಡು ಬರುತ್ತವೆ. ಅವುಗಳ ಬಗ್ಗೆ ಮಾಹಿತಿ ಇಲ್ಲದ ಗ್ರಾಮಸ್ಥರು, ಅವುಗಳ ಮೇಲೆ ಎಣ್ಣೆ ಸುರಿಯುತ್ತಿದ್ದಾರೆ. ದನಗಾಹಿಗಳು ಅವುಗಳನ್ನು ವಿಕಾರ ಮಾಡುತ್ತಿದ್ದಾರೆ.

ತುಮಕೂರ ಕ್ರಾಸ್‌ನಿಂದ ತುಮಕೂರ ಗ್ರಾಮದ ಒಳಗೆ ಹೋಗುವ ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆಯ ಕಟ್ಟಡದ ಪಕ್ಕದ ಜಾಲಿ ಗಿಡದಲ್ಲಿ ಅಪರೂಪವಾದ ವೀರಗಲ್ಲು ಇದೆ.

ಸಾಮಾನ್ಯವಾಗಿ ಒಂದು ಬಂಡೆಗಲ್ಲಿನಲ್ಲಿ ಒಬ್ಬ ವೀರನ ಚಿತ್ರವಿರುವ ಶಿಲ್ಪವನ್ನು ಕಾಣುತ್ತದೆ. ಆದರೆ ಈ ಬಂಡೆಗಲ್ಲಿನಲ್ಲಿ ಮೂವರು ವೀರರ ಚಿತ್ರಗಳನ್ನು ಕೆತ್ತಲಾಗಿದೆ. ಬಂಡೆಯ ಎಡ ಬಲಗಳಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳನ್ನು ಕೆತ್ತಲಾಗಿದೆ. ಇದರ ಅರ್ಥ ಸೂರ್ಯ ಮತ್ತು ಚಂದ್ರರು ಇರುವರೆಗೂ ಇವರ ಹೆಸರು ಅಜರಾಮರ. ಇಬ್ಬರು ವೀರರ ಕೈಯಲ್ಲಿ ಕತ್ತಿ ಇದೆ. ಇನ್ನೊಬ್ಬ ವೀರನ ಕೈಯಲ್ಲಿ ಕತ್ತಿ (ಖಡ್ಗ) ಮತ್ತು ಗುರಾಣಿ ಇದೆ. ಇಂತಹ ಅಪರೂಪದ ಬಂಡೆಗಲ್ಲು ಈ ಭಾಗದಲ್ಲಿ ಸಿಗಲಾರದು ಎಂದು ಇತಿಹಾಸ ಉಪನ್ಯಾಸಕರು ಹೇಳುತ್ತಾರೆ.

ಸರ್ಕಾರದ ನಿಯಮದ ಪ್ರಕಾರ ಯಾವ ಜಿಲ್ಲೆಯಲ್ಲಿ ನೂರು ವರ್ಷದ ಇತಿಹಾಸ ಸಿಗುತ್ತದೆಯೋ, ಅಂತಹ ಜಿಲ್ಲೆಯಲ್ಲಿ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯನ್ನು ಪ್ರಾರಂಭಿಸಬಹುದು. ಆದರೆ ಯಾದಗಿರ ಜಿಲ್ಲೆಯಾಗಿ ಎರಡು ವರ್ಷ ಗತಿಸಿದ್ದು, ಸಾವಿರಾರು ವರ್ಷಗಳ ಇತಿಹಾಸವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ನರಳುತ್ತಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಶೋಧಕರು, ಜಿಲ್ಲೆಯಲ್ಲಿ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ತೆರೆದು ಕಾಲಗರ್ಭದಲ್ಲಿ ಅಡಗಿರುವ ಇತಿಹಾಸವನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕು ಎಂಬುದು ಇಲ್ಲಿನ ಇತಿಹಾಸ ತಜ್ಞರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.