ADVERTISEMENT

ನಾಯ್ಕಲ್‌ಗೆ ಒಲಿಯದ ಆರೋಗ್ಯ ಕೇಂದ್ರ ಭಾಗ್ಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 10:40 IST
Last Updated 1 ಏಪ್ರಿಲ್ 2013, 10:40 IST

ಯಾದಗಿರಿ: ವೈದ್ಯಕೀಯ ಶಿಕ್ಷಣ, ಆರೋಗ್ಯ ಖಾತೆಯನ್ನು ನಿಭಾಯಿಸಿದ ಸಚಿವರು ಪ್ರತಿನಿಧಿಸುತ್ತಿರುವ ಕ್ಷೇತ್ರ ಯಾದಗಿರಿ. ವಿಧಾನಸಭಾ ಮತಕ್ಷೇತ್ರ ವೈದ್ಯರ ಕ್ಷೇತ್ರವೆಂದೇ ಖ್ಯಾತಿ ಪಡೆದಿದೆ. ಹಾಲಿ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಮತ್ತು ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ ಮಧ್ಯೆಯೇ ಇಲ್ಲಿ ಪೈಪೋಟಿ ನಡೆಯುತ್ತಿರುವುದರಿಂದ ಯಾದಗಿರಿ ಕ್ಷೇತ್ರ ವಿಶೇಷ ಎನಿಸಿಕೊಂಡಿದೆ.

ಯಾದಗಿರಿ ಮತಕ್ಷೇತ್ರದ ಶಹಾಪುರ ತಾಲ್ಲೂಕಿನ ಪ್ರಮುಖ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಿದ ಗ್ರಾಮ ನಾಯ್ಕಲ್. ಇದು ಜಿಲ್ಲಾ ಪಂಚಾಯಿತಿ ಕ್ಷೇತ್ರವೂ ಹೌದು. ಸುಮಾರು 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆವುಳ್ಳ ರಾಜಕೀಯವಾಗಿ ಸಾಕಷ್ಟು ಪ್ರಭಾವ ಹೊಂದಿದ ಗ್ರಾಮ. ಆದರೆ ಗ್ರಾಮಕ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಭಾಗ್ಯ ಮಾತ್ರ ಇದುವರೆಗೆ ಸಿಗುತ್ತಿಲ್ಲ.

ನಾಯ್ಕಲ್ ಗ್ರಾಮಸ್ಥರು ಮತ್ತು ಸುತ್ತಲಿನ ಗ್ರಾಮಗಳಾದ ಖಾನಾಪುರ, ಗುಂಡಳ್ಳಿ, ಮನಗನಾಳ, ಗುರುಸುಣಿಗಿ, ಬಬಲಾದ, ಹುಲಕಲ್, ನಾಲ್ವಡಿಗಿ, ನಾಲ್ವಡಿಗಿ ತಾಂಡಾ, ಬಲಕಲ್ ಮುಂತಾದ ಗ್ರಾಮಸ್ಥರು, ಅನಾರೋಗ್ಯದಿಂದ ಬಳಲುವ ರೋಗಿಗಳು, ಗರ್ಭಿಣಿಯರು, ಆಶಾ ಕಾರ್ಯಕರ್ತೆಯರು, ಬಾಣಂತಿಯರು ಚಟ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ಅನಿವಾರ್ಯತೆ ಬಂದೊದಿಗಿದೆ.

ಸ್ಥಳೀಯ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೂ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಭಾಗ್ಯ ಒದಗಿಬರುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ. ನಾಯ್ಕಲ್‌ನಲ್ಲಿ ಕೇವಲ ಉಪ ಆರೋಗ್ಯ ಕೇಂದ್ರವಿದೆ. ಒಬ್ಬರು ಹಿರಿಯ ಆರೋಗ್ಯ ಸಹಾಯಕಿ, ಒಬ್ಬರು ಆರೋಗ್ಯ ಸಹಾಯಕರು, ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ. ಆರೋಗ್ಯ ಸಹಾಯಕಿ ಕಳೆದ 6 ತಿಂಗಳಿನಿಂದ ತರಬೇತಿಗೆ  ತೆರಳಿದ್ದರಿಂದ, ಗ್ರಾಮದ ಉಪ ಅರೋಗ್ಯ ಕೇಂದ್ರದ ಬಾಗಿಲು ಸದಾ ಮುಚ್ಚಿದೆ. ಹೀಗಾಗಿ ಗ್ರಾಮಸ್ಥರಿಗೆ ಆರೋಗ್ಯದ ಭಾಗ್ಯ ಗಗನಕುಸುಮವಾಗಿದೆ.

ನಾಯ್ಕಲ್ ಸುತ್ತಲಿನ ಗ್ರಾಮಗಳಾದ ಕುರುಕುಂದಾ, ತಡಿಬಿಡಿ, ಚಟ್ನಳ್ಳಿ, ಮುಂತಾದೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ನಾಯ್ಕಲ್‌ಗೆ ಇನ್ನೂ ಪ್ರಾಥಮಿಕ ಆರೋಗ್ಯದ ಸಿಗುತ್ತಿಲ್ಲ ಎಂಬುದು ಜನರ ದೂರಾಗಿದೆ. ಯಾದಗಿರಿ ಕ್ಷೇತ್ರದ ಹಾಲಿ ಶಾಸಕ ಡಾ. ಎ.ಬಿ. ಮಾಲಕರಡ್ಡಿಯವರೂ ಸ್ವತಃ ವೈದ್ಯರು. ಕಳೆದ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆರೋಗ್ಯ ಸಚಿವರಾಗಿದ್ದರು. ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳರೂ ವೈದ್ಯರೇ. ಇವರು ಒಂದು ಬಾರಿ ಶಾಸಕರಾಗಿದ್ದರು. ಅಲ್ಲದೆ ಅವಿಭಜಿತ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯಾದ ಡಾ. ಶೈಲಜಾ ಶರಣಭೂಪಾಲರಡ್ಡಿ ಕೂಡ ಈ ಕ್ಷೇತ್ರದಿಂದಲೇ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದರು. ಹೊಸ ಪಕ್ಷ ಕೆಜೆಪಿ ಯುವ ಮುಖಂಡ ಡಾ.ಶರಣಭೂಪಾಲರಡ್ಡಿ ಕೂಡ ನಾಯ್ಕಲ್ ಗ್ರಾಮದವರೇ.

ಹೀಗಿರುವಾಗ ನಾಯ್ಕಲ್ ಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವಂಚಿತಗೊಂಡಿರುವುದು ಗ್ರಾಮಸ್ಥರ ದೌರ್ಭಾಗ್ಯ ಎನ್ನಬಹುದು. ಪಡೆದ ಇಲ್ಲಿಯ ಜನರ ಮತ ಪಡೆದು ಶಾಸಕರಾದರೂ, ಮಂತ್ರಿಗಳಾದರು. ಇಲ್ಲಿನ ಮತದಾರರ ಕೃಪೆಯಿಂದ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿ, ಅಧ್ಯಕ್ಷ ಸ್ಥಾನವನ್ನೂ ಪಡೆದರು. ಈಗಿನ ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ್ ಕೂಡ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಆದರೆ ಗ್ರಾಮಸ್ಥರ ಆರೋಗ್ಯ ಕಾಪಾಡಲು ಪ್ರಾಥಮಿಕ ಕೇಂದ್ರ ಸ್ಥಾಪನೆಗೆ ಯಾರೂ ಮುಂದಾಗದೇಇ ಇರುವುದು ದುರಂತದ ಸಂಗತಿ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ನಾಯ್ಕಲ್ ಮತ್ತು ಇತರ ಗ್ರಾಮಗಳ ಜನರಿಗೆ ಆರೋಗ್ಯ, ಹೆರಿಗೆ, ಕಾಲಾರಾ ಇನ್ನೂ ಹಲವು ಸಮಸ್ಯೆಗಳನ್ನು ಉದ್ಭವಿಸಿದಾಗ ಮಹಿಳೆಯರ ಪಡುವ ಪಡಿಪಾಟಲು ಹೇಳತೀರದು. ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಬರುವ ಪ್ರಮುಖ ಗ್ರಾಮ. ಮುಖ್ಯರಸ್ತೆಯಲ್ಲಿ ಬರುವ ಗ್ರಾಮದ ಜನರು, ಮೂಲೆಯಲ್ಲಿರುವ ಚಟ್ನಳ್ಳಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಹೋಗುವ ಅನಿವಾರ್ಯತೆ ಬಂದಿದೆ. ಅಲ್ಲದೇ ನಾಯ್ಕಲ್, ಖಾನಾಪುರ, ಬಲಕಲ್, ನಾಲ್ವಡಿಗಿ, ಚಟ್ನಳ್ಳಿ ಇತರ ಗ್ರಾಮಗಳ ಕಿರಿಯ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಪ್ರತಿ ತಿಂಗಳ ಸಭೆ, ಆಗಾಗ ನಡೆಯುವ ಸಭೆಗೆ ಹಾಜರಾಗಲು ಚಟ್ನಳ್ಳಿ ಕೇಂದ್ರಕ್ಕೆ ಹೋಗಬೇಕು. ಚಟ್ನಳ್ಳಿ ಗ್ರಾಮಕ್ಕೆ ಹೋಗಬೇಕಾದರೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಸಂಚರಿಸುವ ಮೂರು ಬಸ್‌ಗಾಗಿ ರೋಗಿಗಳು ಕಾಯಬೇಕು.

ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸೌಲಭ್ಯ ಒದಗಿಸಿ ಕೋಡುವಂತೆ ಗ್ರಾಮಸ್ಥರು ಶಾಸಕರಲ್ಲಿ ಅನೇಕ ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮದಲ್ಲಿ ಕೆಬಿಜೆಎನ್‌ಎಲ್‌ನ ಖಾಲಿ ನಿವೇಶನ ಇದೆ. ಸಿಬ್ಬಂದಿಗಾಗಿ ವಸತಿ ಗೃಹಗಳಿವೆ. ಎಲ್ಲ ಸೌಲಭ್ಯಗಳು ಹೇಳಿ ಮಾಡಿಸದಂತಿದೆ. ಆದರೆ ಆರೋಗ್ಯ ಕೇಂದ್ರದ ಭಾಗ್ಯ ಇನ್ನೂ ಒದಗಿಬರುತ್ತಿಲ್ಲ ಎಂಬ ಕೊರಗು ಗ್ರಾಮಸ್ಥರನ್ನು ಕಾಡುತ್ತಿದೆ. 

ಚುನಾವಣೆ ಬಂದಾಗ ಹಳ್ಳಿಗಳು ನೆನಪಾಗುವ ಜನಪ್ರತಿನಿಧಿಗಳಿಗೆ, ಚುನಾವಣೆ ಮುಗಿದ ನಂತರ ಮತ್ತೆ ನೆನಪಾಗುವುದು ಐದು ವರ್ಷ ಬಳಿಕ. ಈಗ ಮತ್ತೊಮ್ಮೆ ಚುನಾವಣೆಗೆ ಅಖಾಡ ಸಿದ್ಧಗೊಂಡಿದೆ. ಜನಪ್ರತಿನಿಧಿಗಳು ವೋಟು ಕೇಳಲಿಕ್ಕೆ ಬರತಾರ್ ಆವಾಗ ನೋಡೋಣ ಎಂದು ಗ್ರಾಮಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.