ADVERTISEMENT

ನಿಗದಿತ ಅವಧಿಯಲ್ಲಿ ಮಾಹಿತಿ ನೀಡಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 5:34 IST
Last Updated 8 ಜನವರಿ 2014, 5:34 IST

ಯಾದಗಿರಿ: ಆಡಳಿತದಲ್ಲಿ ಪಾರದರ್ಶ­ಕತೆಗೆ ಹಾಗೂ ಭ್ರಷ್ಟಾಚಾರ ನಿರ್ಮೂ­ಲ­ನೆಗೆ ಜಾರಿಯಾಗಿರುವ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಸಮಗ್ರ ಅಧ್ಯ­ಯನ ನಡೆಸಿ, ನಿಗದಿತ ಅವಧಿ­ಯೊಳಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸ­ಬೇಕು ಎಂದು ಜಿಲ್ಲಾಧಿಕಾರಿ ಎಫ್.­ಆರ್.­ಜಮಾದಾರ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮೈಸೂರು ಆಡಳಿತ ತರಬೇತಿ ಸಂಸ್ಥೆ ವತಿಯಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಸಹಾಯಕ ಮಾಹಿತಿ ಅಧಿಕಾರಿಗಳು, ಒಂದನೇ ಮೇಲ್ಮನವಿ ಪ್ರಾಧಿಕಾರಿಗಳು (ಎ ಮತ್ತು ಬಿ ಶ್ರೇಣಿಯ ಅಧಿಕಾರಿಗಳು), ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದರು.

ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತರಲು, ಭ್ರಷ್ಟಾಚಾರ ನಿರ್ಮೂಲನೆ, ಅಭಿವೃದ್ಧಿ ಮಹತ್ವವನ್ನು ಹೆಚ್ಚಿಸುವ ದಿಸೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಯಲ್ಲಿದೆ. ಅಧಿಕಾರಿಗಳು ಪಾರದರ್ಶಕವಾಗಿ ಮತ್ತು ನ್ಯಾಯ­ಸಮ್ಮತವಾಗಿ ಕಾರ್ಯನಿರ್ವಹಿಸಲು ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿ, ಆಯಾ ಇಲಾಖೆಗಳಿಗೆ ಸಂಬಂಧಪಟ್ಟ ಸಮಗ್ರ ಮಾಹಿತಿಯನ್ನು ಇಟ್ಟುಕೊಂಡಿರಬೇಕು. ಸಾರ್ವಜನಿಕರು ಕೋರಿದಾಗ ನಿಗದಿ­ಪಡಿಸಿದ ಅವಧಿಯೊಳಗೆ ಮಾಹಿತಿ­ಯನ್ನು ಪೂರೈಸಬೇಕು ಎಂದು ಸಲಹೆ ನೀಡಿದರು.

ಇಲಾಖೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಅನುದಾನವನ್ನು ವಿವಿಧ ಕಾಮಗಾರಿ­ಗಳಿಗೆ ಬಳಸಲಾಗಿದೆ. ಈ ಕುರಿತು ಮಾಹಿತಿ ಕೋರಿ ಸಾರ್ವಜನಿಕರಿಂದ ಅರ್ಜಿ ಬಂದಾಗ ಸೂಕ್ತ ಮಾಹಿತಿ­ಯನ್ನು ಸಕಾಲಕ್ಕೆ ನೀಡಬೇಕು. ಇದ­ರಿಂದ ಅಭಿವೃದ್ಧಿ ಇಲಾಖೆಗಳ ಮತ್ತು ಅಧಿಕಾರಿಗಳ ಬಗ್ಗೆ ಉತ್ತಮ ಅಭಿ­ಪ್ರಾಯ ಬರುವ ಜೊತೆಗೆ ಸಾರ್ವಜನಿ­ಕ­ರಲ್ಲಿಯೂ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಹುದ್ದೆಗಳ ಕೊರತೆ ಮಧ್ಯೆಯೂ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ ಸರ್ಕಾರಿ ಕರ್ತವ್ಯವನ್ನು ಎಲ್ಲರೂ ಸಂಘಟಿತರಾಗಿ ಕಾರ್ಯ ನಿರ್ವಹಿಸ­ಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.­ಜಿಲಾನಿ ಮಾತನಾಡಿ, ಆಡಳಿತದಲ್ಲಿ ಪಾರದರ್ಶಕ ತರುವ ನಿಟ್ಟಿನಲ್ಲಿ ಮತ್ತು ಕಾನೂನಿನ ಅಡಿ­ಯಲ್ಲಿ ಹಾಗೂ ಸಾರ್ವಜನಿಕ ಭರವಸೆಗಳಿಗೆ ತಕ್ಕಂತೆ ಕಾರ್ಯನಿರ್ವ­ಹಿಸಲು ಈ ಕಾಯ್ದೆ ಸಹಕಾರಿ­ಯಾಗಲಿದ್ದು, ಅಧಿಕಾರಿಗಳು ನಿಷ್ಪಕ್ಷ­ಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಚಿಕ್ಕಮಗಳೂರಿನ ಬಿ.ಮಲ್ಲೇಶಪ್ಪ, ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಬೋಧಕ ಅಶೋಕ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.