ADVERTISEMENT

ನೀರಿಲ್ಲದೆ ಗೇಣಿ ಭೂಮಿ ಇಳಿಮುಖ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 10:52 IST
Last Updated 11 ಡಿಸೆಂಬರ್ 2012, 10:52 IST

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಉದ್ಭವಿಸಿದ ಕಾಲುವೆ ನೀರಿನ ಸಮಸ್ಯೆಯಿಂದ  ಆಂಧ್ರವಲಸಿಗರು ಫಲವತಾದ್ತ ಜಮೀನು ಗೇಣಿ (ಲೀಜ್) ರೂಪದಲ್ಲಿ ಪಡೆದು ಉಳುಮೆ ಮಾಡಿದ್ದವರು ಈಗ ಮತ್ತೊಂದು ವರಸೆ ಶುರು ಮಾಡಿದ್ದಾರೆ.

ಕಾಲುವೆ ಮೇಲ್ಭಾಗ ಹಾಗೂ ಹಳ್ಳದ ಕಡೆ ಸಮೃದ್ದಿಯಾಗಿ ದೊರೆಯುತ್ತಿದ್ದ ಕಡೆ ದುಬಾರಿ ಬೆಲೆಗೆ ಜಮೀನುಗಳನ್ನು ಗೇಣಿ ರೂಪದಲ್ಲಿ ಮುಂಗಾರು ಹಾಗೂ ಬೇಸಿಗೆ ಬೆಳೆ ಅವಧಿಗೆ ಇಂತಿಷ್ಟು ಹಣವನ್ನು ನಿಗದಿಪಡಿಸಿ ಭೂ ಮಾಲಿಕರಿಗೆ ನೀಡುತ್ತಿದ್ದರು.  ಬೇಸಿಗೆ ಬೆಳೆಗೆ ನೀರು ಇಲ್ಲದರಿಂದ ಮುಂಗಾರು ಹಂಗಾಮಿನ ಅವಧಿ ಹಣವನ್ನು ಮಾತ್ರ ನೀಡುತ್ತೇವೆ ಎಂದು ರಾಗ ತೆಗೆಯುತ್ತಿದ್ದರಿಂದ ಭೂ ಮಾಲಿಕರಿಗೆ ಪಿತ್ತ ನೆತ್ತಿಗೆರಿದೆ ಎನ್ನುತ್ತಾರೆ ರೈತ ಸತ್ಯನಾರಾಯಣ ರಡ್ಡಿ.

ಮೊದಲು ಎರಡು ಅವಧಿಗೆ ನೀರು ಬರುತ್ತಿತ್ತು ಅದರಂತೆ ಹಣವನ್ನು ನೀಡುತ್ತಾ ಬಂದಿದ್ದೇವೆ. ಈಗ ಒಂದು ಅವಧಿ ಬೆಳೆಗೂ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ. ಸಾಕಷ್ಟು ವೆಚ್ಚ ಮಾಡಿದ್ದು ಆಗಿದೆ. ಇನ್ನೊಂದು ಅವಧಿಯ ಹಣ ಎಲ್ಲಿಂದ ತರಬೇಕು. ಲೀಜ ಸಹವಾಸವೇ ಬೇಡ. ನಮ್ಮೂರಿನ ಕಡೆ ನಾವು ಮುಖ ಮಾಡುತ್ತೇವೆ ಎಂದು ಆಂಧ್ರವಲಸಿಗರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.
ಜಿಲ್ಲೆಯ ಕೆಲ ಪ್ರಭಾವಿ ರಾಜಕೀಯ ಮುಖಂಡರು ಭೂಮಿಯನ್ನು ಆಂಧ್ರವಲಸಿಗರಿಗೆ ಲೀಜ್ ನೀಡಿ ಪ್ರತಿವರ್ಷ ಲಕ್ಷಾವಧಿ ಹಣವನ್ನು ಪಡೆದುಕೊಳ್ಳುತ್ತಾ ಬರುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಬೇಸಿಗೆ ಹಂಗಾಮಿನಲ್ಲಿ ನೀರು ದೊರೆಯುತ್ತಿಲ್ಲ. ಈಗ ಆದಾಯ ತಪ್ಪಿಹೋಗಿರುವುದು ರಾಜಕಾರಣಿಗಳಿಗೆ ನಿದ್ದೆಗಡೆಸಿದೆ.

ವಾರಬಂದಿ: ನಾರಾಯಣಪೂರ ಮುಖ್ಯ ಕಾಲುವೆಯಿಂದ ನಂತರ ಆರಂಭವಾಗುವ ಗೇಟ್‌ಗಳನ್ನು ಕಿತ್ತು ಹಾಕಿದ್ದಾರೆ. ವಾರಬಂದಿ ಅನ್ವಯಿಸುತ್ತಿಲ್ಲ. ಅಲ್ಲದೆ ಬತ್ತ ಬೆಳೆಯನ್ನು ಬೇಸಿಗೆ ಹಂಗಾಮಿನಲ್ಲಿ ನಾಟಿ ಮಾಡುವುದು ನಿಲ್ಲಿಸಿದ್ದರು ಸಹ ಅನಾವಶ್ಯಕವಾಗಿ ನೀರು ಪೋಲು ಮಾಡುತ್ತಿದ್ದಾರೆ. ಬೆಳೆ ಇಲ್ಲದೆ ಕಡೆ ನೀರು ಸ್ಥಗಿತಗೊಳಿಸಿ ಕಾಲುವೆ ಕೆಳಭಾಗದ ರೈತರಿಗೆ ನೀರು ನೀಡಿದರೆ ಶೇಂಗಾ, ಮೆಣಸಿನಕಾಯಿ ಅನುಕೂಲವಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಶಾಸಕರು ಕಾಲುವೆ ಮೇಲ್ಭಾಗದಲ್ಲಿ ನೀರು ಪೋಲಾಗುತ್ತಿರುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಬತ್ತ ಬೆಳೆಗಾರರ ಹಿತ ಚಿಂತನೆಯಲ್ಲಿ ಮುಖಂಡರು ತೊಡಗಿದ್ದಾರೆ ಎಂದು ನಿಗಮದ ಎಂಜಿನಿಯರೊಬ್ಬರು `ಪ್ರಜಾವಾಣಿ' ಜೊತೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಸ್ಪಷ್ಟಪಡಿಸಿ: ರಾಜಕೀಯ ಮುಖಂಡರು ತಮಗೆ ತೋಚಿದ್ದನ್ನು ಪತ್ರಿಕೆಗಳಲ್ಲಿ ಹೇಳಿಕೆ ನೀಡುತ್ತಾ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಮುಖಂಡರ ಮಾತು ಕೇಳಿ ಬೇಸಿಗೆ ಹಂಗಾಮಿನಲ್ಲಿ ಬೆಳೆ ಬಿತ್ತನೆ ಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಕೆಬಿಜೆಎನ್‌ಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಪಿಲಮೋಹನ ತ್ವರಿತವಾಗಿ ಭೀಮರಾಯನಗುಡಿಯಲ್ಲಿ ರೈತರ ಸಭೆ ಕರೆದು ಕಾಲುವೆ ನೀರು ಹರಿಸುವ ದಿನ ಸ್ಪಷ್ಟಪಡಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.