ಕೆಂಭಾವಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಭೂಮಿ ಹದ ಮಾಡಿಕೊಂಡು ಕಾಲುವೆಗೆ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಕೃಷ್ಣಾ ಕಾಲುವೆಯ ವಾರ್ಷಿಕ ನಿರ್ವಹಣೆ ಕಾಮಗಾರಿಗಳು ಟೆಂಡರ್ ಆಗಿದ್ದರೂ, ಇದುವರೆಗೂ ಪ್ರಾರಂಭಿಸದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಈ ಮೊದಲು ಚುನಾವಣೆ ನೆಪವೊಡ್ಡಿ ಕಾಮಗಾರಿಗಳನ್ನು ಮುಂದೂಡಲಾಯಿತು. ಇದೀಗ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭಿಸ ಬೆಕಾಗಿದೆ. ಆದರೆ ಜುಲೈ ಮೊದಲ ವಾರದಲ್ಲಿ ರೈತರ ಜಮೀನಿಗೆ ನೀರು ಕೊಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಆದರೆ ಕಾಮಗಾರಿಗಳು ಇನ್ನೂ ಪ್ರಾರಂಭವಾಗದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ನಾರಾಯಣಪುರ ಎಡದಂಡೆ ಕಾಲುವೆಯ ಇಂಡಿ, ಜೇವರ್ಗಿ, ಮುಡಬೂಳ, ಶಹಾಪುರ, ಇಂಡಿ ಏತನೀರಾವರಿ ಶಾಖಾ ಕಾಲುವೆಗಳ ವಾರ್ಷಿಕ ನಿರ್ವಹಣೆಗೆ ಈ ಬಾರಿ ಅಂದಾಜು ರೂ. 15 ಕೋಟಿ ಟೆಂಡರ್ ಕೆರೆದಿದ್ದು, ಗುತ್ತಿಗೆದಾರರೂ ಮಾತ್ರ ಶೇ.35 ರಿಂದ 42 ರವರೆಗೆ ಲೆಸ್ ಹಾಕಿದ್ದಾರೆ. ಇಷ್ಟು ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡುವುದು ಸಾಧ್ಯವಿಲ್ಲ ಎನ್ನುತ್ತಾರೆ ಶಂಕ್ರಣ್ಣ ವಣಿಕ್ಯಾಳ.
ಕಡಿಮೆ ಮೊತ್ತಕ್ಕೆ ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸದೇ ಓಡಿ ಹೋಗುತ್ತಾರೆ ಎನ್ನುವ ಭಯದ ಹಿನ್ನೆಲೆಯಲ್ಲಿ ಎಪಿಎಫ್ ಠೇವಣಿ ಹಣ ಕಟ್ಟಿ ಕಾಮಗಾರಿ ನಿರ್ವಹಿಸಲು ಮುಂದೆ ಬಂದವರಿಗೆ ಮಾತ್ರ ಕಾಮಗಾರಿ ನಿರ್ವಹಿಸಲು ಆದೇಶ ಕೊಡುತ್ತೆವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಎರಡು ವರ್ಷದಿಂದ ಬೇಸಿಗೆಯಲ್ಲಿ ನೀರು ಬಿಡದೇ ರೈತರು ಅಪಾರ ಹಾನಿ ಅನುಭವಿಸಿದ್ದಾರೆ. ಒಂದು ವರ್ಷ ವಾರ್ಷಿಕ ನಿರ್ವಹಣೆಯ ನೆಪವೊಡ್ಡಲಾಯಿತು. ಕಳೆದ ವರ್ಷ ಜಲಾಶಯದಲ್ಲಿ ನೀರಿಲ್ಲ ಎಂದು ರೈತರಿಗೆ ನೀರು ಸಿಗಲಿಲ್ಲ. ಈ ವರ್ಷ ಜೂನ್ ತಿಂಗಳಲ್ಲಾದರೂ ನೀರು ಹರಿಸುತ್ತಾರೆ ಎಂದರೆ ಇನ್ನು ವಾರ್ಷಿಕ ನಿರ್ವಹಣೆಯ ಕಾಮಗಾರಿಗಳೇ ಪ್ರಾರಂಭವಾಗಿಲ್ಲ. ನೀರು ಬಿಡುವ ಸಂದರ್ಭದಲ್ಲಿ ತರಾತುರಿಯಲ್ಲಿ ಕಾಮಗಾರಿ ಮಾಡಿ ನೀರು ಬಿಡಬೇಕೆಂದು ಕುಂಟನೆಪಗಳನ್ನು ಹೇಳುತ್ತ ದಿನಗಳನ್ನು ಮುಂದೂಡಲಾಗುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಹಣ ಕೃಷ್ಣಾರ್ಪಣ ಆಗುವ ಲಕ್ಷಣಗಳು ಕಂಡುಬರುತ್ತವೆ ಎಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜೂನ್ ತಿಂಗಳು ಅರ್ಧ ಮುಗಿದಿದ್ದರೂ ವಾರ್ಷಿಕ ನಿರ್ವಹಣೆ ಕಾಮಗಾರಿಗಳು ಇನ್ನು ಆರಂಭವಾಗುತ್ತಿಲ್ಲ. ಈಗ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳ ಒತ್ತಡ ಹಾಕಿ, ಕಾಲುವೆಗೆ ನೀರು ಹರಿಸುವ ಸಮಯ ಬರುತ್ತಿದ್ದು, ಶೀಘ್ರ ಕಾಮಗಾರಿ ಮುಗಿಸಲು ಒತ್ತಾಯ ಮಾಡುತ್ತಿದ್ದಾರೆ.
ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಎಪಿಎಫ್ ಠೇವಣಿ ಹಣ ತುಂಬಿಸಿಕೊಳ್ಳದೇ ಕಾಮಗಾರಿಗಳು ಆರಂಭವಾದರೆ ಕೆಲಸ ಮಾಡದೇ ಹಣ ಎತ್ತಿ ಹಾಕುವ ಸಂಚು ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ನೆರೆಯ ವಿಜಾಪುರ ಜಿಲ್ಲೆಯವರೇ ನೀರಾವರಿ ಮಂತ್ರಿಗಳಾಗಿದ್ದು, ಈ ಬಗ್ಗೆ ವಿಶೇಷ ಗಮನಹರಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ಹಣ ಪೋಲಾಗದಂತೆ ನೋಡಿಕೊಳ್ಳಬೇಕು. ಉತ್ತಮ ಕಾಮಗಾರಿ ಆಗುವಂತೆ ಮಾಡಬೇಕು ಎಂಬುದು ರೈತರ ಒತ್ತಾಸೆಯಾಗಿದೆ.
ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ತುಂಬಲಿವೆ. ವಾರ್ಷಿಕ ನಿರ್ವಹಣೆ ಕಾಮಗಾರಿಯನ್ನು ಬದಿಗಿಟ್ಟು, ಕಳೆದ ಎರಡು ವರ್ಷ ಬರಗಾಲದಿಂದ ಬಳಲುತ್ತಿರುವ ಯಾದಗಿರಿ, ಗುಲ್ಬರ್ಗ, ವಿಜಾಪುರ ಜಿಲ್ಲೆಯ ರೈತರ ಜಮೀನುಗಳಿಗೆ ನೀರು ಹರಿಸಬೇಕು. ಕಷ್ಟದಲ್ಲಿರುವ ರೈತರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.