ADVERTISEMENT

ಬಿಡಾಡಿ ದನಗಳಿಂದ ಸಂಚಾರಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 8:10 IST
Last Updated 24 ಸೆಪ್ಟೆಂಬರ್ 2011, 8:10 IST

ಯಾದಗಿರಿ: ರಸ್ತೆಗಳಲ್ಲಿ ಹಾಯಾಗಿ ಮಲಗಿಕೊಳ್ಳುವ ಬಿಡಾಡಿ ದನಗಳು, ಎಷ್ಟೇ ಶಬ್ದ ಮಾಡಿದರೂ ದಾರಿ ಬಿಟ್ಟುಕೊಡುವುದಿಲ್ಲ. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಅಡ್ಡ ಬರುವಂತೆ ನಗರದಾದ್ಯಂತ ರಸ್ತೆಗಳಲ್ಲಿ ಬಿಡಾಡಿ ದನಗಳೇ ತುಂಬಿ ಹೋಗಿವೆ. ಎಲ್ಲೆಂದರಲ್ಲಿ ಮಲಗುವ ಈ ದನಗಳಿಂದಾಗಿ ವಾಹನಗಳ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.

ನಗರದ ಯಾವುದೇ ಬಡಾವಣೆಗೆ ಹೋದರೂ, ಈ ದನಗಳ ಕಾಟ ತಪ್ಪುತ್ತಿಲ್ಲ. ಈಗಾಗಲೇ ನಗರದ ರಸ್ತೆಗಳ ವಿಸ್ತಾರ ಕಾರ್ಯ ಮುಗಿಯುತ್ತ ಬಂದಿದ್ದು, ಈ ದನಗಳಿಗೆ ಮತ್ತಷ್ಟು ಜಾಗೆ ಸಿಕ್ಕಂತಾಗಿದೆ. ಇದರಿಂದಾಗಿ ದಾರಿಯಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ದಿಕ್ಕು ತೋಚದಂತಾಗಿದೆ.

ನಗರದ ಪ್ರಮುಖ ಸ್ಥಳಗಳಾದ ಗಾಂಧಿ ವೃತ್ತ, ಹತ್ತಿಕುಣಿ ರಸ್ತೆ, ಮೈಲಾಪುರ ಅಗಸಿ, ಹೊಸಳ್ಳಿ ಕ್ರಾಸ್, ಸುಭಾಷ ವೃತ್ತ, ಬಸ್‌ನಿಲ್ದಾಣದ ಬಳಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದೆ. ಜಿಲ್ಲಾ ಕೇಂದ್ರವಾದ ನಂತರ ವಾಹನಗಳ ಓಡಾಟ ಹೆಚ್ಚಾಗುತ್ತಿದ್ದು, ಬಿಡಾಡಿ ದನಗಳಿಂದ ಕೆಲವೊಮ್ಮೆ ಚಾಲಕರು, ನಿಯಂತ್ರಣ ಕಳೆದುಕೊಂಡ ಉದಾಹರಣಗಳೂ ಸಾಕಷ್ಟಿವೆ.

ಜಿಲ್ಲಾ ಕೇಂದ್ರದ ಸೌಂದರ್ಯೀಕರಣಕ್ಕೆ ಒತ್ತು ನೀಡಲು ಮುಂದಾಗಿರುವ ನಗರಸಭೆಯು, ರಸ್ತೆಗಳಲ್ಲಿ ಸಂಚರಿಸುವ ಬಿಡಾಡಿ ದನಗಳ ನಿಯಂತ್ರಣಕ್ಕೆ ಪ್ರಥಮ ಆದ್ಯತೆ ನೀಡಿದೆ. ಇದರಿಂದಾಗಿ ಬಿಡಾಡಿ ದನಗಳ ಹಾವಳಿ ಎಷ್ಟೊಂದು ತೀವ್ರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ರಸ್ತೆಗಳ ವಿಸ್ತಾರ ಕಾರ್ಯ ಮುಗಿದ ಹಿನ್ನೆಲೆಯಲ್ಲಿ ರಸ್ತೆ ಮಧ್ಯ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ. ವಿಸ್ತಾರಗೊಂಡ ರಸ್ತೆಗಳಲ್ಲಿ ಇದೀಗ ಏಕಮುಖ ಸಂಚಾರ ಮಾಡುವುದು ಅನಿವಾರ್ಯವಾಗಿದ್ದು, ಇದೇ ರಸ್ತೆಗಳಲ್ಲಿ ಬಿಡಾಡಿ ದನಗಳು ಮಲಗುತ್ತಿರುವುದರಿಂದ ವಾಹನ ಚಾಲಕರು ತೀವ್ರ ಪರದಾಡುವಂತಾಗಿದೆ.

ಮೊದಲೇ ವಾಹನ ದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವಾರಕ್ಕೆ ಮೂರು ಅಪಘಾತಗಳಾದರೂ ಸಂಭವಿಸುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ವಾಹನಗಳ ಚಾಲಕರು ಈ ರಸ್ತೆಗಳಲ್ಲಿ ಸಂಚರಿಸಲು ಹಿಂಜರಿಯುವಂತಾಗಿದೆ. ನಗರಸಭೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸರಿಯಲ್ಲ ಎಂದು ಬಿಜೆಪಿ ಯುವ ಮೋರ್ಚಾದ ನಾಗರಾಜ ಬೀರನೂರ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾರೆ.

ವಾರದೊಳಗೆ ಈ ಸಮಸ್ಯೆಯನ್ನು ನಿವಾರಿಸಲು ನಗರಸಭೆ ಮುಂದಾಗಬೇಕು ಇಲ್ಲದ್ದ್ದಿದರೆ ಪ್ರತಿಭಟನೆ ಎದುರಿಸಿ ಎಂದು ಬೀರನೂರ ಎಚ್ಚರಿಸುತ್ತಾರೆ. ಬಿಡಾಡಿ ದನಗಳ ಹಾವಳಿಯಿಂದ ಸ್ಟೇಶನ್ ರಸ್ತೆಯಲ್ಲಿ ತರಕಾರಿ ಮಾರುವ ವ್ಯಾಪಾರಿಗಳು ಬೇಸತ್ತು ಹೋಗಿದ್ದಾರೆ.

26ರಿಂದ ಕಾರ್ಯಾಚರಣೆ:  ನಗರದಲ್ಲಿ ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ನಗರಸಭೆ ಮುಂದಾಗಿದ್ದು, ಸೋಮವಾರದಿಂದ ಬಿಗಿ ಕಾರ್ಯಾಚಣೆ ನಡೆಸಲು ನಿರ್ಧರಿಸಿದೆ. ಬಿಡಾಡಿ ದನಗಳ ಮಾಲೀಕರಿಗೆ ಈಗಾಗಲೇ ಎಚ್ಚರಿಕೆ ನೀಡಿರುವ ನಗರಸಭೆ, ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದೆ.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷೆ ನಾಗರತ್ನಾ ಅನಪೂರ, “ಈಗಾಗಲೇ ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಮಾಲೀಕರು ಇದನ್ನು ಲಘುವಾಗಿ ಪರಿಗಣಿಸಿದ್ದು, ಶುಕ್ರವಾರ (ಸೆ.23)ದಿಂದಲೇ ಬಿಡಾಡಿ ದನಗಳನ್ನು ರಸ್ತೆಯಿಂದ ಓಡಿಸುವ ಕೆಲಸ ಆರಂಭಿಸಲಾಗಿದೆ” ಎಂದು ತಿಳಿಸಿದರು.

ಇದು ಮೊದಲ ಹಂತವಾಗಿದೆ. ಬಿಡಾಡಿ ದನಗಳನ್ನು ಹಿಡಿದು ಹಾಕಲು ಕೊಂಡವಾಡ ಇಲ್ಲದಾಗಿದೆ. ಹಾಗಾಗಿ ಇಲ್ಲಿಯ ಫಿಲ್ಟರ್‌ಬೆಡ್‌ನಲ್ಲಿಯೇ ಹಿಡಿದಿರುವ ದನಗಳನ್ನು ಹಾಕಲು ಕ್ರಮ ಕೈಗೊಳ್ಳಲಾಗಿದೆ.

ಅವುಗಳಿಗೆ ಅಗತ್ಯವಾದ ಮೇವು, ನೀರಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಸೋಮವಾರದಿಂದ ಬಿಡಾಡಿ ದನಗಳನ್ನು ಹಿಡಿಯುವ ಕಾರ್ಯಾಚರಣೆ ಚುರುಕುಗೊಳ್ಳಲಿದೆ” ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.