ಯಾದಗಿರಿ: ಜಿಲ್ಲೆಯಲ್ಲಿ ಎರಡು ನದಿಗಳು ಹರಿದಿರುವುದರಿಂದ ಬಹುತೇಕ ಜಮೀನು ನೀರಾವರಿ ಸೌಲಭ್ಯ ಪಡೆದಿದ್ದು, ರೈತರು ಭತ್ತ ಬೆಳೆಯುತ್ತಿದ್ದಾರೆ. ವರ್ಷದಲ್ಲಿ ಎರಡು ಭತ್ತದ ಬೆಳೆಗಳನ್ನು ಬೆಳೆಯುವ ಜಿಲ್ಲೆಯ ರೈತರಿಗೆ, ಈ ಬಾರಿಯೂ ಕಾಲುವೆಗೆ ನೀರು ಹರಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಇದರಿಂದ ರೈತರು ಆತಂಕ ಎದುರಿಸುವಂತಾಗಿದೆ.
ನಗರದ ಸುತ್ತಲಿನ ಭೀಮಾ ನದಿ ತೀರದ ರೈತರು ಭತ್ತದ ನಾಟಿಯನ್ನು ಭರದಿಂದ ಆರಂಭಿಸಿದ್ದಾರೆ. ಭೀಮಾ ನದಿ ತೀರದ ಆಂಧ್ರ ವಲಸಿಗ ರೈತರು ಮತ್ತು ಸ್ಥಳೀಯ ರೈತರು ಭತ್ತದ ನಾಟಿ ಆರಂಭಿಸಿದ್ದು, ಸತತ 3 ದಿನಗಳಿಂದ ಧಾರಾಕಾರ ಸುರಿದ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಆದರೆ ನಾರಾಯಣಪುರ ಎಡದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಪಡೆದಿರುವ ರೈತರು ಮಾತ್ರ ಇನ್ನೂ ಭತ್ತದ ನಾಟಿ ಮಾಡುವುದೂ ಸಾಧ್ಯವಾಗಿಲ್ಲ. ಮೊದಲೇ ಸುರಪುರ ತಾಲ್ಲೂಕಿನಲ್ಲಿ ಕಡಿಮೆ ಪ್ರಮಾಣದ ಮಳೆ ಸುರಿದಿದ್ದು, ಈ ಮಧ್ಯೆ ಕಾಲುವೆಗೆ ನೀರು ಹರಿಸುವ ದಿನವೂ ನಿಗದಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯಾವ ನಂಬಿಕೆಯ ಮೇಲೆ ಭತ್ತದ ನಾಟಿ ಮಾಡಬೇಕು ಎನ್ನುವ ಪ್ರಶ್ನೆ ರೈತರದ್ದು.
ಆಲಮಟ್ಟಿ ಜಲಾಶಯದಲ್ಲೂ ನೀರಿನ ಸಂಗ್ರಹವಿಲ್ಲ. ಹೀಗಾಗಿ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸುವುದು ಇನ್ನೂ ವಿಳಂಬವಾಗಲಿದೆ. ನಾರಾಯಣಪುರ ಜಲಾಶಯದಲ್ಲಿ ಅಗತ್ಯ ನೀರು ಸಂಗ್ರಹವಿದ್ದರೆ ಮಾತ್ರ ಕಾಲುವೆಗೆ ನೀರು ಹರಿಸುವುದು ಸಾಧ್ಯ.
ಈ ಹಿನ್ನೆಲೆಯಲ್ಲಿ ಕಾಲುವೆಯಿಂದ ನೀರಾವರಿ ಸೌಲಭ್ಯ ಪಡೆದ ರೈತರಿಗೆ ದಿಕ್ಕು ತೋಚದಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದ್ದಾರೆ.
ಕೃಷ್ಣಾ ನದಿಯ ಮೇಲ್ಭಾಗದಲ್ಲಿ ಸಾಕಷ್ಟು ಮಳೆ ಆಗಿಲ್ಲ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ಭಾಗದಲ್ಲೂ ಮಳೆಯ ಪ್ರಮಾಣ ಅಷ್ಟಕ್ಕಷ್ಟೇ. ಇದರಿಂದಾಗಿ ಜಲಾಶಯಗಳೂ ಇನ್ನೂ ಖಾಲಿಯಾಗಿಯೇ ಇವೆ. ಇದು ರೈತರ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ ಎಂದರು.
ಮುಂಗಾರು ಹಂಗಾಮಿನ ಭತ್ತ ಬೆಳೆಯುವುದು ಇನ್ನೂ ಅನಿಶ್ಚಿತವಾಗಿದೆ. ಮುಂಗಾರು ಬಿತ್ತನೆ ವಿಳಂಬವಾದರೆ, ಹಿಂಗಾರು ಬಿತ್ತನೆಯೂ ವಿಳಂಬವಾಗಲಿದೆ. ಹಂಗಾಮು ಮುಗಿದು ಹೋಗುವುದರಿಂದ ಇಳುವರಿ ಕಡಿಮೆ ಆಗಲಿದೆ.
ಕಳೆದ ಎರಡು ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ ಉತ್ತಮ ಬೆಳೆ ಪಡೆಯದ ರೈತರು, ಸಾಲದ ಹೊರೆಯಲ್ಲಿ ಮುಳುಗಿದ್ದಾರೆ.
ಈ ಬಾರಿಯೂ ನೀರು ಸಿಗದೇ ಇದ್ದರೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡಲೇ ರಾಜ್ಯ ಸರ್ಕಾರ ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿಸುವ ಮೂಲಕ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು. ಭತ್ತದ ನಾಟಿ ಮಾಡಿಕೊಳ್ಳಲು ಅನುಕೂಲ ಆಗುವಂತೆ ರೈತರಿಗೆ ಅಗತ್ಯ ಮಾಹಿತಿ ನೀಡಬೇಕು.
ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು, ಇದೆಲ್ಲವನ್ನೂ ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.