ಸುರಪುರ: ತಾಲ್ಲೂಕಿನ ಭೈರಿಮರಡಿ ಗ್ರಾಮದ ಶೇಕಡಾ ಅರ್ಧದಷ್ಟು ಜನ ಊರಿನಲ್ಲಿ ಇರುವುದೇ ಇಲ್ಲ. ಹೊಟ್ಟೆ ಹೊರೆಯಲು ಕೆಲಸ ಅರಸಿ ದೂರದ ನಗರಗಳಿಗೆ ‘ಗುಳೆ’ ಹೋಗುವುದರಲ್ಲಿ ತಾಲ್ಲೂಕಿನಲ್ಲಿಯೇ ಹೆಚ್ಚು. ಹೀಗಾಗಿ ಈ ಗ್ರಾಮ ಜನರಿಲ್ಲದೆ ಸದಾ ಭಣಗುಡುತ್ತದೆ.
‘ಗುಳೆ’ ಸಮಸ್ಯೆಗೆ ಪರಿಹಾರವಂತೂ ಇದುವರೆಗೂ ಸಿಕ್ಕಿಲ್ಲ. ವರ್ಷಕ್ಕೆ ಕನಿಷ್ಟ 100 ದಿನ ಕೂಲಿ ನೀಡುವ ನರೇಗಾ ಯೋಜನೆ ಇಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ‘ಗುಳೆ’ ಹೋದವರ ಬದುಕು ಸದಾ ಅಭದ್ರವಾಗಿರುತ್ತದೆ. ಅವರ ಮಕ್ಕಳ ಶಿಕ್ಷಣವಂತೂ ಮರೀಚಿಕೆ. ಗ್ರಾಮದ ಸಾಕ್ಷರತೆ ಶೇ 25 ಮಾತ್ರ.
ಮೂಲಸೌಕರ್ಯವಂತೂ ಈ ಗ್ರಾಮಕ್ಕೆ ಗಗನ ಕುಸುಮ. ಮಹಿಳಾ ಶೌಚಾಲಯ ಇಲ್ಲ. ಇಡೀ ಗ್ರಾಮದಲ್ಲಿ ತಿರುಗಾಡಿದರೆ ಕೇವಲ ಒಬ್ಬರ ಮನೆಯಲ್ಲಿ ಮಾತ್ರ ಶೌಚಾಲಯ ಇದೆ. ಬಯಲು ಮುಕ್ತ ಶೌಚಾಲಯ ಉದ್ದೇಶದ ನಿರ್ಮಲ ಭಾರತ ಯೋಜನೆ ಈ ಊರಿಗೆ ಕಾಲಿಟ್ಟಿಲ್ಲ.
ಕಿರು ನೀರು ಸರಬರಾಜು ಯೋಜನೆ ಸಮರ್ಪಕವಾಗಿಲ್ಲ. ಇರುವ ಎರಡು ಕೊಳವೆಬಾವಿಗಳು ಸದಾ ದುರಸ್ತಿಯಲ್ಲಿ ಇರುತ್ತವೆ.
ಗ್ರಾಮದಲ್ಲಿರುವ ಎರಡು ತೆರೆದ ಬಾವಿಗಳ ನೀರು ಕೆಟ್ಟು ಹೋಗಿದೆ. ಜನ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಸಿ.ಸಿ. ರಸ್ತೆ ಇಲ್ಲ. ಚರಂಡಿ ಇದ್ದರೂ ಸ್ವಚ್ಛ ಮಾಡುವುದಿಲ್ಲ. ಕಾರಣ ಕೊಳಚೆ ನೀರು ಸದಾ ರಸ್ತೆಯ ಮೇಲೆ ಹರಿಯುತ್ತಿರುತ್ತದೆ. ಆಸ್ಪತ್ರೆ ಇಲ್ಲದ ಕಾರಣ ರೋಗಿಗಳು ಸುರಪುರ ಪಟ್ಟಣಕ್ಕೆ ಬರಬೇಕು. ತಿಪ್ಪೆಗುಂಡಿಗಳು ಇಲ್ಲಿ ಸಾಮಾನ್ಯ. ಇದರಿಂದ ಸಾಂಕ್ರಾಮಿಕ ರೋಗಗಳು ಆಗಾಗ ಹರಡುತ್ತಿರುತ್ತವೆ.
5ನೇ ತರಗತಿವರೆಗೆ ಶಾಲೆ ಇದ್ದರೂ, ಶಿಕ್ಷಕರ ಕೊರತೆ ಇದೆ. ಪಾಲಕರ ಜೊತೆಗೆ ಮಕ್ಕಳು ‘ಗುಳೆ’ ಹೋಗುವುದರಿಂದ ಹಾಜರಾತಿ ಕಡಿಮೆ. ಆಟದ ಮೈದಾನ ಇಲ್ಲ. ಗ್ರಾಮದ ಜನ ಶಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಗ್ರಾಮದ ಪ್ರಜ್ಞಾವಂತರ ಆರೋಪ.
ಮದ್ಯಮಾರಾಟ ರಾಜಾರೋಷವಾಗಿ ನಡೆಯುತ್ತದೆ. ಕಿರಾಣಿ ಅಂಗಡಿ, ಹೊಟೇಲ್, ಪಾನಶಾಪ್‌ಗಳಲ್ಲಿ ಮದ್ಯದ ಬಾಟಲಿಗಳು ಲಭ್ಯ. ಬೆಳಿಗ್ಗೆಯಿಂದಲೆ ಮದ್ಯಪಾನ ಆರಂಭವಾಗುತ್ತದೆ. ಇದರಿಂದ ಗ್ರಾಮದ ಸೌಹಾರ್ದ ಹದಗೆಟ್ಟಿದೆ. ಅಬಕಾರಿ ಇಲಾಖೆ ಇತ್ತ ಕಡೆ ಗಮನಹರಿಸಿಲ್ಲ ಎನ್ನುತ್ತಾರೆ ಮಹಿಳೆಯರು.
ಸಾಕಷ್ಟು ಕೃಷಿ ಭೂಮಿ ಇದೆ. ನೀರಾವರಿ ಸೌಲಭ್ಯವೂ ಇದೆ. ಗ್ರಾಮದಲ್ಲಿ ಬಹುತೇಕ ರೈತರು ಕೂಲಿ ಅರಸಿ ‘ಗುಳೆ’ ಹೋಗುವುದರಿಂದ ಕೃಷಿ ಚಟುವಟಿಕೆ ಸಮರ್ಪವಾಗಿ ನಡೆಯುತ್ತಿಲ್ಲ. ಕೃಷಿ ಇಲಾಖೆಯಿಂದ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ ಎಂಬುದು ರೈತರ ಅಳಲು. ಕಳೆದ ವರ್ಷ ಯುವ ರೈತನೊಬ್ಬ ಗುಲಾಬಿ ಪುಷ್ಪ ಕೃಷಿ ಮಾಡಿ ಗಮನ ಸೆಳೆದಿದ್ದಾರೆ. ಕೆಲ ಯುವಕರು ಈ ರೈತನ ಹಾದಿ ಹಿಡಿದಿರುವುದು ಗಮನಾರ್ಹ.
ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಆದರೆ, ಬೀದಿ ದೀಪಗಳು ನಿರಂತರ ಉರಿಯುವುದು ಇಲ್ಲಿನ ಸಮಸ್ಯೆ. ದೇವರಗೋನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಹಳ್ಳಿ 1500 ಜನಸಂಖ್ಯೆ ಹೊಂದಿದೆ. ಮೂರು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಬಹಳಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ಬೇಡ, ಕುರುಬ, ದಲಿತ ಜನಾಂಗದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರ ಆರಂಭಿಸಬೇಕು. ಸಿ.ಸಿ. ರಸ್ತೆ ನಿರ್ಮಿಸಬೇಕು. ಸಮರ್ಪಕ ನೀರು ಸರಬರಾಜು ಮಾಡಬೇಕು. ಮೂಲಸೌಕರ್ಯಗಳನ್ನು ಒದಗಿಸಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಬನ್ನೆಟ್ಟಿ.
‘ಶೌಚಾಲಯ ನಿರ್ಮಿಸಿ’
‘ಭೈರಿಮರಡಿ ಗ್ರಾಮದಲ್ಲಿ ಮಹಿಳಾ ಶೌಚಾಲಯ ಇಲ್ಲದಿರುವುದು ನಾಚಿಕೆಗೇಡು. ಶೀಘ್ರದಲ್ಲಿ ಶೌಚಾಲಯ ನಿರ್ಮಿಸಬೇಕು. ಅಗತ್ಯ ಮೂಲಸೌಕರ್ಯ ಒದಗಿಸಬೇಕು. ವಿಳಂಬವಾದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ಮಾಡಲಾಗುವುದು’.
–ವೆಂಕಟೇಶನಾಯಕ ಭೈರಿಮರಡಿ, ಪ್ರಧಾನ ಕಾರ್ಯದರ್ಶಿ, ಕರವೇ
‘ಸೌಕರ್ಯ ಒದಗಿಸಲು ಬದ್ಧ’
‘ಗ್ರಾಮ ಪಂಚಾಯಿತಿ ಸಭೆಯಲ್ಲಿ ಭೈರಿಮರಡಿಗೆ ಮಹಿಳಾ ಶೌಚಾಲಯ ನಿರ್ಮಿಸಲು ಅನುಮೋದನೆ ಪಡೆಯಲಾಗಿದೆ. ಕೆಲ ದಿನಗಳ ಹಿಂದೆ ಭೇಟಿ ನೀಡಿದ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಮಹಿಳಾ ಶೌಚಾಲಯ ನಿರ್ಮಿಸಲು ಸೂಚಿಸಿದ್ದಾರೆ. ಮೂಲಸೌಕರ್ಯಗಳನ್ನು ಒದಗಿಸಲು ಬದ್ಧನಾಗಿದ್ದೇನೆ’.
–ಸಣ್ಣದೇಸಾಯಿ ನಾಯಕ, ಅಧ್ಯಕ್ಷರು, ಗ್ರಾ.ಪಂ.ದೇವರಗೋನಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.