ADVERTISEMENT

ಮಳೆಗೆ ಕುಸಿದ ಶಾಲಾ ಕೊಠಡಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 6:00 IST
Last Updated 5 ಅಕ್ಟೋಬರ್ 2012, 6:00 IST

ಚಿಂಚೋಳಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಂದಾಪುರದ ಗಂಗೂನಾಯಕ್ ತಾಂಡಾದಲ್ಲಿ ಶಾಲಾ ಕೋಣೆಯೊಂದು ಭಾರಿ ಮಳೆಗೆ ಕುಸಿದು ಬಿದ್ದು ಅಪ್ಪಚ್ಚಿಯಾಗಿದೆ. ಸುಮಾರು 30 ವರ್ಷಗಳ ಹಿಂದೆ ತಾಂಡಾದ ಸೇವಾಲಾಲ್ ಹಾಗೂ ಜಗದಂಬಾ ಮಂದಿರದ ಆವರಣದಲ್ಲಿ ನಿರ್ಮಿಸಿದ ಶಾಲಾ ಕೋಣೆ ಕುಸಿದಿದೆ.

ತಾಲ್ಲೂಕಿನ ಅಕ್ಟೋಬರ್ ಆರಂಭವಾದಾಗಿನಿಂದ ನಿತ್ಯ ಮಳೆ ಸುರಿಯುತ್ತಿದ್ದು, ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಶಾಲಾ ಕೋಣೆಯ ಪೂರ್ವ ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನ ಗೋಡೆ ಉರುಳಿ ಸಿಮೆಂಟ್ ಕಾಂಕ್ರಿಟ್ ಛತ್ತು ಮಾತ್ರ ನೆಲಕ್ಕೆ ಅಪ್ಪಚ್ಚಿಯಾಗಿದೆ. ಶಾಲೆಯ ಪ್ರವೇಶ ದ್ವಾರದ ಮುಂಭಾಗ ಮಾತ್ರ ಹಾಗೆಯೇ ಉಳಿದಿದೆ.

ಶಾಲಾ ಕೋಣೆಯಲ್ಲಿ ನಡೆಯುತ್ತಿದ್ದ ತರಗತಿಗಳು ಕಳೆದ 4 ವರ್ಷಗಳ ಹಿಂದೆ ನೂತನವಾಗಿ ನಿರ್ಮಿಸಿದ ಶಾಲೆಗೆ ಸ್ಥಳಾಂತರಿಸಲಾಗಿದೆ. ಸದ್ಯ ದಾಸ್ತಾನು ಕೋಣೆಯಾಗಿ ಬಳಸುತ್ತಿದ್ದರು.

ಸೇವಾಲಾಲ್ ಮಂದಿರದ ಟೆಂಟ್ ಹೌಸ್‌ನ ಸಾಮಗ್ರಿ ಹಾಗೂ ಪಟ್ಟಣ ಪಂಚಾಯಿತಿಯ ಹೈಮಾಸ್ಟ್ ವಿದ್ಯುತ್ ದೀಪದ ಬಿಡಿ ಭಾಗಗಳು ಸಿಕ್ಕಿ ಬಿದ್ದು ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್, ಸದಸ್ಯ ಖೀರು ನಾಯಕ್, ಮಾಜಿ ಅಧ್ಯಕ್ಷ ರಾಮಶೆಟ್ಟಿ ಪವಾರ್ ತಹಶೀಲ್ದಾರ ಡಾ. ರಮೇಶಬಾಬು ಹಾಲು, ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನರಾವ್ ದೊಡ್ಮನಿ ಮತ್ತು ಸರ್ವ ಶಿಕ್ಷಣ ಅಭಿಯಾನದ ಶಾಖಾಧಿಕಾರಿ ಶೈಲೇಶ್ ಹುಲಿ ಭೇಟಿ ನೀಡಿ ಪರಿಶೀಲಿಸಿದರು.
ಮಳೆಯ ವಿವರ: ಗುರುವಾರ ಚಿಂಚೋಳಿ -75.5, ಕೊಂಚಾವರಂ -10.8, ಸುಲೇಪೇಟ -46.4, ಕೋಡ್ಲಿ 15.6, ಐನಾಪುರ -61.2, ಚಿಮ್ಮನಚೋಡ -72.2 ಮಿ.ಮೀ. ಮಳೆ ಸುರಿದಿದೆ.

ಅಕ್ಟೋಬರ್ ತಿಂಗಳಲ್ಲಿ (4 ದಿನಗಳಲ್ಲಿ) ಚಿಂಚೋಳಿ -165,  ಸುಲೇಪೇಟ -143.4, ಕೋಡ್ಲಿ -97.8, ಚಿಮ್ಮನಚೋಡ -140.4, ಐನಾಪುರ -65.4, ಕೊಂಚಾವರಂ -35.6, ಮಿ.ಮೀ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.