ADVERTISEMENT

ಮೈಲಾಪುರ ಜಾತ್ರೆಗೆ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2013, 7:04 IST
Last Updated 15 ಜನವರಿ 2013, 7:04 IST
ಮೈಲಾಪುರ ಜಾತ್ರೆಗೆ ಭಕ್ತ ಸಾಗರ
ಮೈಲಾಪುರ ಜಾತ್ರೆಗೆ ಭಕ್ತ ಸಾಗರ   

ಯಾದಗಿರಿ: ಏಳು ಕೋಟಿ... ಏಳು ಕೋಟಿ... ಏಳು ಕೋಟಿಗೋ... ಮಲ್ಲಯ್ಯ ಪರಾಕ್... ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಕಣ್ಣು ಹಾಯಿಸಿದಲ್ಲೆಲ್ಲ ಭಕ್ತ ಸಾಗರವೇ ಕಾಣುತ್ತಿತ್ತು. ಮಲ್ಲಯ್ಯನ ಪಲ್ಲಕ್ಕಿ ಉತ್ಸವ ಹೊನ್ನಕೆರೆಗೆ ಹೊರಡುವ ದಾರಿಯಲ್ಲಿ ಭಂಡಾರ ಎರಚುವ ಸಂಭ್ರಮ ನೋಡುವಂತಿತ್ತು.

ತಾಲ್ಲೂಕಿನ ಮೈಲಾಪುರದಲ್ಲಿ ಸೋಮವಾರ ಜರುಗಿದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು. ಮೈಲಾರಲಿಂಗನ ಜಾತ್ರೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ವಿವಿಧೆಡೆಗಳಿಂದ ಸುಮಾರು ಲಕ್ಷಾಂತರ ಭಕ್ತರು ಈ ಬಾರಿ ಆಗಮಿಸಿದ್ದರು. ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಮೈಲಾಪುರದ ಜಾತ್ರೆಯು ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಅದ್ದೂರಿಯಾಗಿ ನಡೆಯುತ್ತಿದ್ದು, ಈ ಬಾರಿಯೂ ಜಿಲ್ಲಾಡಳಿತದ ಸಕಲ ಸಿದ್ಧತೆಯಿಂದಾಗಿ ಸುಸಜ್ಜಿತವಾಗಿ ನಡೆದಿದ್ದು ವಿಶೇಷವಾಗಿತ್ತು.

ಗುರವಾರದಿಂದಲೇ ಮೈಲಾಪುರಕ್ಕೆ ಭಕ್ತರ ಆಗಮನ ಆರಂಭವಾಗಿತ್ತು. ಅಲ್ಲಲ್ಲಿ ಟೆಂಟ್‌ಗಳನ್ನು ಹಾಕಿ, ವಾಸ್ತವ್ಯ ಮಾಡಿದ್ದ ಭಕ್ತರು, ಶನಿವಾರ ಮೈಲಾರಲಿಂಗನ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಿದರು. ಬೆಳಿಗ್ಗೆಯಿಂದಲೇ ಗುಹಾಂತರ ದೇವಾಲಯದಲ್ಲಿರುವ ಮಲ್ಲಯ್ಯನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಧ್ಯಾಹ್ನ 12 ಗಂಟೆಗೆ ಮಲ್ಲಯ್ಯನ ಉತ್ಸವ ಮೂರ್ತಿಯನ್ನು ಹೊತ್ತ ಪಲ್ಲಕ್ಕಿಯು ಹೊನ್ನಕೆರೆಯತ್ತ ಗಂಗಾಸ್ನಾನಕ್ಕೆ ತೆರಳಿತು. ಈ ಸಂದರ್ಭದಲ್ಲಿ ದಾರಿಯ ಇಕ್ಕೆಲಗಳಲ್ಲಿ ದೊಡ್ಡ ಬಂಡೆಗಳ ಮೇಲೆ ಜೀವದ ಹಂಗು ತೊರೆದು ಕುಳಿತಿದ್ದ ಭಕ್ತಾದಿಗಳು, ಮಲ್ಲಯ್ಯನ ಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಂಡರು.

ಹೈದರಾಬಾದ್ ಕರ್ನಾಟಕದ ಧಾರ್ಮಿಕ ಶ್ರದ್ದಾ ಕೇಂದ್ರವಾದ ತಾಲ್ಲೂಕಿನ ಮೈಲಾಪೂರ ಮಲ್ಲಯ್ಯನ ಜಾತ್ರೆ ಮಕರ ಸಂಕ್ರಮಣ ದಿನದಂದು ಲಕ್ಷಾಂತರ ಭಕ್ತರ ಜಯ ಘೋಷಗಳ ಮಧ್ಯೆ ಅದ್ದೂರಿಯಾಗಿ ಜರುಗಿತು. ಕ್ಷೇತ್ರಕ್ಕೆ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಆಗಮಿಸಿದ ಅಸಂಖ್ಯಾತ ಭಕ್ತರು ಇಲ್ಲಿ ತಂಗಿದ್ದರು.

ಬೆಳಿಗ್ಗೆ ಭಕ್ತರು ಪವಿತ್ರ ಹೊನ್ನಕೆರೆಯಲ್ಲಿ ಮಿಂದು ಮಡಿಗೊಂಡು ಮಲ್ಲಯ್ಯನ ದರ್ಶನ ಪಡೆದು ಪುನೀತರಾದರು. ಮಧ್ಯಾಹ್ನ 12 ಗಂಟೆಯ ನಂತರ ಮಲ್ಲಯ್ಯನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತೆಗೆದುಕೊಂಡು ಗಂಗಾ ಸ್ನಾನಕ್ಕೆ ವಿವಿಧ ವಾದ್ಯಗಳೊಂದಿಗೆ ತೆರಳಿದರು.

ಈ ಸಂದರ್ಭದಲ್ಲಿ ಎತ್ತ ನೋಡಿದರೂ ಜನ ಸಾಗರವೇ ಕಾಣುತಿತ್ತು. ದಾರಿಯುದ್ದಕ್ಕೂ, ಬೆಟ್ಟ, ಮರಗಳ ಮೇಲೆ ನಿಂತಿರುವ ಭಕ್ತರು ಮಲ್ಲಯ್ಯನ ಮೂರ್ತಿ ಮೇಲೆ ಕಲ್ಲು ಸಕ್ಕರೆ, ಉತ್ತತ್ತಿ, ಭಂಡಾರ, ಕುರಿ ಉಣ್ಣೆ, ರೂಪಾಯಿ ಹಾಗೂ ತಾವೂ ಜಮೀನಿನಲ್ಲಿ ಬೆಳೆದ ಕಬ್ಬು, ಜೋಳ, ಬತ್ತದ ಬೆಳೆಯನ್ನು ಎಸೆದು ಏಳು ಏಳು ಕೋಟಿಗೆ ಮಲ್ಲಯ್ಯ ಎಂದು ಘೋಷಣೆ ಹಾಕಿ ಭಕ್ತಿ ಭಾವ ಮೆರೆದರು. ಈ ಸಮಯದಲ್ಲಿ ಅಲ್ಲಿ ಹಳದಿಮಯ ವಾತಾವರಣ ಸೃಷ್ಟಿಯಾಯಿತು.

ಮಲ್ಲಯ್ಯನ ಮೂರ್ತಿಯನ್ನು ಗಂಗಾ ಸ್ನಾನ ಮಾಡಿಸಿದ ನಂತರ ದೇವಸ್ಥಾನದ ಮುಂಭಾಗದಲ್ಲಿ ದೇವರ ಸರಪಳಿ ಹರಿಯಲಾಯಿತು. ಸಂಜೆ 4 ಗಂಟೆಗೆ ಮೂಲ ಸ್ಥಳದಲ್ಲಿ ಮೂರ್ತಿಯನ್ನು ಸಕಲ ಪೂಜೆಗಳೊಂದಿಗೆ ಇಡಲಾಯಿತು.

ಕಳೆದ ವರ್ಷದಿಂದ ಮಲ್ಲಯ್ಯನ ಜಾತ್ರೆಯಲ್ಲಿ ಭಕ್ತರು ಕುರಿಗಳನ್ನು ಹಾರಿಸುವುದನ್ನು ಜಿಲ್ಲಾಡಳಿತ ನಿಷೇಧಿಸಿ ಪ್ರಾಣಿ ಹಿಂಸೆಗೆ ಕಡಿವಾಣ ಹಾಕಿದ್ದು, ಗ್ರಾಮದ ಮುಖ್ಯ ದ್ವಾರದಲ್ಲಿಯೇ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭಕ್ತರಿಂದ ಕುರಿಗಳನ್ನು ವಶಪಡಿಸಿಕೊಂಡರು. ಈ ವರ್ಷವೂ ಅಗತ್ಯ ಕ್ರಮ ಕೈಗೊಂಡರು. ಜಾತ್ರೆಗೆ ಬಂದ ಭಕ್ತರು ಕದ್ದು ಮುಚ್ಚಿ ತಂದ ಮೂರು ಕುರಿಗಳನ್ನು ಮಲ್ಲಯ್ಯನ ಪಲ್ಲಕ್ಕಿಯ ಮೇಲೆ ಎಸೆದರು.

ಭಕ್ತರು ಮಲ್ಲಯ್ಯನ ಭಂಡಾರ, ಸಿಹಿ ತಿನಿಸುಗಳು ಹಾಗೂ ಕೃಷಿ ಚಟುವಟಿಕೆಗೆ ಬೇಕಾಗುವ ವಸ್ತುಗಳನ್ನು ಖರೀದಿ ಮಾಡುತ್ತಿರುವುದು ಹಾಗೂ  ಚಿಕ್ಕ ಮಕ್ಕಳು ಜೋಕಾಲಿ ಮತ್ತು ತೊಟ್ಟಿಲಲ್ಲಿ ಕುಳಿತು ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಾತ್ರೆಗೆ ಆಗಮಿಸಿದ ಲಕ್ಷಾಂತರ ಭಕ್ತರು ಸೂಕ್ತ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡಿದರು. ಜಾತ್ರೆಯಲ್ಲಿ ಹಲವಾರು ಮಕ್ಕಳು ತಮ್ಮ ತಂದೆ- ತಾಯಿಯನ್ನು, ಕೆಲವು ಗೃಹಿಣಿಯರು ಗಂಡಂಡಿರನ್ನು ಕಳೆದುಕೊಂಡು ಅಳುತ್ತಿರುವುದು ಗಮನಿಸಿದ ಪೊಲೀಸರು ಅವರ ಅಗತ್ಯ ಮಾಹಿತಿ ಪಡೆದು ಧೈರ್ಯ ತುಂಬಿ ಅವರ ಗ್ರಾಮಗಳಿಗೆ ಕಳುಸುತ್ತಿರುವ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.