ADVERTISEMENT

ಯುರೇನಿಯಂ ಗಣಿಗಾರಿಕೆ: ತಜ್ಞರ ಸಮಿತಿ?

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 10:20 IST
Last Updated 13 ಜನವರಿ 2012, 10:20 IST

ಯಾದಗಿರಿ:   ಗೋಗಿ ಗ್ರಾಮದಲ್ಲಿ ಯುರೇನಿಯಂ ಘಟಕದ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಹಲವಾರು ರೋಗಗಳು ಬರುತ್ತಿವೆ ಎಂಬ ಆತಂಕ ಗ್ರಾಮಸ್ಥರಲ್ಲಿದೆ. ಈ ಗೊಂದಲವನ್ನು ನಿವಾರಿಸಲು ತಜ್ಞರ ಸಮಿತಿ ರಚಿಸಿ, ಅಧ್ಯಯನ ನಡೆಸಲು ಇಂದು (ಶುಕ್ರವಾರ) ನಡೆಯಲಿರುವ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.

ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋಗಿ ಯುರೇನಿಯಂ ಘಟಕಕ್ಕೆ ತಾವು ಕೂಡ ಭೇಟಿ ನೀಡಿದ್ದು, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದೆ. ಸಚಿವ ಸಂಪುಟದ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.

ಜಿಲ್ಲೆಗೆ ನೀಡಲಾಗಿರುವ ರೂ.300ಕೋಟಿ ವಿಶೇಷ ಪ್ಯಾಕೇಜ್‌ನಲ್ಲಿ ಅನುದಾನ ಬಿಡುಗಡೆ ಆಗಿಲ್ಲ ಎಂಬುದು ಸರಿಯಲ್ಲ. ಈಗಾಗಲೇ ರೂ.76.17 ಕೋಟಿ ಮೊತ್ತದ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಕಾಮಗಾರಿಗಳು ವಿವಿಧ ಹಂತದಲ್ಲಿವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಹೊಸ ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದು, ರೂ.300 ಕೋಟಿ ಅನುದಾನವನ್ನು ಮೂರು ವರ್ಷದಲ್ಲಿ ಬಳಕೆ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಕಾಮಗಾರಿ ಆರಂಭವಾದ ತಕ್ಷಣ ಹಣ ನೀಡಲಾಗುವುದು ಎಂದು ತಿಳಿಸಿದರು.

ಯಾದಗಿರಿ ಜಿಲ್ಲಾ ಆಡಳಿತ ಸೌಧದ ನಿರ್ಮಾಣಕ್ಕೆ ರೂ. 50 ಕೋಟಿ ವಿಶೇಷ ಅನುದಾನದಲ್ಲಿ ರೂ.20 ಕೋಟಿ ಮೀಸಲಿಡಲಾಗಿದೆ. ಸಂಕೀರ್ಣಕ್ಕೆ ಅವಶ್ಯಕವಾಗಿರುವ ಜಮೀನು ಖರೀದಿಸಲು ರೂ.650 ಕೋಟಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದು, ಫೆಬ್ರವರಿ ಅಂತ್ಯದೊಳಗೆ ಜಿಲ್ಲಾ ಆಡಳಿತ ಸೌಧದ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯ ಮೂರೂ ತಾಲ್ಲೂಕುಗಳಲ್ಲಿ ಸಂಪೂರ್ಣ ಬರಗಾಲವಿದ್ದು, ಕುಡಿಯುವ ನೀರಿಗಾಗಿ ಈಗಾಗಲೇ ರೂ. 4.21 ಕೋಟಿ ಅನುದಾನ ಒದಗಿಸಿದೆ. 248 ಗ್ರಾಮಗಳಲ್ಲಿ ರೂ. 3.21 ಕೋಟಿ ಮೊತ್ತದ ಕುಡಿಯುವ ನೀರಿನ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ.

ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲು ಪ್ರತಿ ತಾಲ್ಲೂಕಿಗೆ ರೂ. 5 ಲಕ್ಷ ಅನುದಾನ ಒದಗಿಸಲಾಗಿದೆ. ತುರ್ತು ಕಾಮಗಾರಿಗಳಿಗೆ ರೂ. 1.50 ಕೋಟಿ ಅನುದಾನವನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದ್ದು, ಒಟ್ಟು ರೂ. 2.22 ಕೋಟಿ ಅನುದಾನ ಜಿಲ್ಲಾಡಳಿತದ ಬಳಿ ಲಭ್ಯವಾಗಿದೆ ಎಂದರು.

ಸೈದಾಪುರ ಬಳಿ 3 ಸಾವಿರ ಎಕರೆ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಆದಷ್ಟು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ನಂತರ ತ್ವರಿತವಾಗಿ ಪ್ರಕ್ರಿಯೆ ಆರಂಭಿಸಲಾಗುವುದು. ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಾಗುವುದು. ಜ.25 ರಂದು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳು ಯಾದಗಿರಿಗೆ ಆಗಮಿಸಲಿದ್ದು, ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಸುಪ್ರಸಿದ್ಧ ಮೈಲಾಪುರ ಜಾತ್ರೆಯಲ್ಲಿ ಈ ಬಾರಿ ಕುರಿಗಳ ಹಾರಿಸುವಿಕೆಯನ್ನು ನಿಷೇಧಿಸಲಾಗಿದೆ. ಮೈಲಾಪುರದ ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎಲ್ಲವೂ ಸರಿಯಾಗಿದೆ:
ಬಿಜೆಪಿ ರಾಜ್ಯ ಘಟಕದಲ್ಲಿ ಇದೀಗ ಎಲ್ಲವೂ ಸರಿಯಾಗಿದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವು ಚಿಕ್ಕವರು. ದೊಡ್ಡವರ ವಿಷಯ ಮಾತನಾಡದಂತೆ ಹಿರಿಯರು ಸಲಹೆ ನೀಡಿದ್ದಾರೆ. ತಾವು ಸಚಿವ ಸಂಪುಟದ ಕಿರಿಯ ಸಚಿವರಾಗಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗುರನೀತ ತೇಜ್ ಮೆನನ್, ಜಿಲ್ಲಾ ಪಂಚಾಯಿತಿ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಭೋಸಲೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.