ADVERTISEMENT

‘ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕ್ರಮ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:53 IST
Last Updated 18 ಜುಲೈ 2017, 5:53 IST

ಹುಣಸಗಿ: ಪಟ್ಟಣದಲ್ಲಿ ನಡೆಯುತ್ತಿರುವ ಕೆ-ಶಿಪ್ ದೇವಾಪುರ-ಮನಗೂಳಿ ರಾಜ್ಯ ಹೆದ್ದಾರಿಯ ಕಾಮಗಾರಿಯನ್ನು ಸೋಮವಾರ ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌಧರಿ ಅವರು ಪರಿಶೀಲಿಸಿದರು. ‘ಸದ್ಯ ನಡೆಯುತ್ತಿರುವ ಕಾಮಗಾರಿ ಟೆಂಡರ್ ಒಪ್ಪಂದದಂತೆ ನಡೆಯಲಿ ಇದಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಪಡಿಸಬಾರದು’ ಎಂದು ರೈತ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ರೈತ ಸಂಘದ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ ಮಾತನಾಡಿ, ‘ರಸ್ತೆ ವಿಸ್ತರಣೆ ಕಾಮಗಾರಿಯಿಂದ ವಾಹನ ದಟ್ಟಣೆ ಸಮಸ್ಯೆ ಹೆಚ್ಚಿದೆ. ಚತುಷ್ಪಥ ರಸ್ತೆ,  ವಾಹನಗಳ ನಿಲುಗಡೆ, ಸುಸಜ್ಜಿತ ಒಳಚರಂಡಿ ಸೇರಿದಂತೆ ಹಲವು ಅಂಶಗಳನ್ನು ಕಾಮಗಾರಿಯಲ್ಲಿ ಸೇರಿಸಿಲ್ಲ’ ಎಂದು ಹೇಳಿದರು.

‘ರಸ್ತೆ ನಿರ್ಮಾಣದಲ್ಲಿ ಪಕ್ಕದ ಗೂಡಂಗಡಿ ಹಾಗೂ ಹಲವು ಮಳಿಗೆಗಳಿಗೆ ಕೆ–ಶಿಪ್(ಕರ್ನಾಟಕ ರಾಜ್ಯ ಹೆದ್ದಾರಿ ನಿಗಮ) ಪರಿಹಾರ ಧನ ವಿತರಿಸಿದೆ. ಇಂತವುಗಳನ್ನಾದರೂ ತಕ್ಷಣ ತೆರವುಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ‘ವಿಶ್ವಬ್ಯಾಂಕ್ ಯೋಜನೆಯ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ ತಕ್ಷಣವೇ ಯಾವುದೇ ಮಾರ್ಪಾಡು ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಅನುಕೂಲ ಕಲ್ಪಿಸಲು ಹೊಸ ಅಂದಾಜು ಪತ್ರಿಕೆ ತಯಾರಿಸಿ ನನಗೆ ತಲುಪಿಸಬೇಕು’ ಎಂದು ಕೆ-ಶಿಪ್ ಕಾರ್ಯನಿರ್ವಾಹಕ ಎಂಜಿನಿಯರ್‌ ಕಮಾಲುದ್ದೀನ್ ಅವರಿಗೆ ಸೂಚಿಸಿದರು.

‘ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿಮುಂದುವರಿಸಿ’ ಎಂದು ಕೆ-ಶಿಪ್ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಕೆಶಿಪ್ ಎಇಇ ಹೇಮರಾಜ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ, ಅಮರಯ್ಯ ಮದ್ದಾನಿಮಠ, ರುದ್ರಣ್ಣ ಮೇಟಿ, ಮುದಕಪ್ಪ ದೇಸಾಯಿ, ಶರಣಮ್ಮ ಬೂದಿಹಾಳ, ವಾಲುನಾಯಕ ಕುಪ್ಪಿ, ಬಸವರಾಜ ಹಗರಟಗಿ, ಬಸವರಾಜ ಹಳ್ಳಿ ಇದ್ದರು. ಸುರಪುರ ತಹಶೀಲ್ದಾರ್ ಸುರೇಶ ಅಂಕಲಗಿ, ಹುಣಸಗಿ ವಿಶೇಷ ತಹಶೀಲ್ದಾರ್ ಸುರೇಶ ಚವಲ್ಕರ್, ಪಿಎಸ್ಐ ಸುನಿಲ ಮೂಲಿಮನಿ, ಜನಪ್ರತಿನಿಧಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.