ADVERTISEMENT

ರೈತರ ಪಾಲಿಗೆ ಮರೀಚಿಕೆಯಾದ `ಕಾಮಧೇನು'

ಪುನಶ್ಚೇತನವಾಗದ ದೋರನಳ್ಳಿ ಘಟಕ: ಆರಂಭವಾಗದ ಹೈನುಗಾರಿಕೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 10:02 IST
Last Updated 27 ಡಿಸೆಂಬರ್ 2012, 10:02 IST

ಯಾದಗಿರಿ: ಎರಡು ನದಿಗಳ ಬೀಡಾಗಿರುವ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದರೂ, ಇನ್ನೂ ಹೈನುಗಾರಿಕೆ ಎಂಬುದು ಮರಿಚಿಕೆಯಾಗಿಯೇ ಉಳಿದಿದೆ. ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಪೂರಕ ವಾತಾವರಣವಿದ್ದರೂ, ಹಾಲು ಒಕ್ಕೂಟ ಹಾಗೂ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಇದುವರೆಗೆ ಜಿಲ್ಲೆಯಲ್ಲಿ ಹೈನುಗಾರಿಕೆ ಆರಂಭವಾಗಿಲ್ಲ.

ನಾರಾಯಣಪುರ ಎಡದಂಡೆ ಕಾಲುವೆಯಿಂದ ಜಿಲ್ಲೆ ಬಹುತೇಕ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಸಿಕ್ಕಿದೆ. ಯಾದಗಿರಿ ತಾಲ್ಲೂಕಿನಲ್ಲಿ ಹಳ್ಳಿಗೊಂದು ಕೆರೆಗಳಿದ್ದು, ಜಮೀನಿಗೆ ನೀರುಣಿಸುತ್ತಿವೆ. ಕೇವಲ ಬತ್ತವನ್ನೇ ನಂಬಿ ಬದುಕುತ್ತಿರುವ ರೈತರಿಗೆ ಬೆಲೆ ಕುಸಿತ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಕೃಷಿ ಕೂಲಿಕಾರರು, ಸಣ್ಣ ರೈತರ ಪರಿಸ್ಥಿತಿಯಂತೂ ಇನ್ನಷ್ಟು ಗಂಭೀರವಾಗಿದೆ. ಕೃಷಿಗೆ ಪೂರಕವಾಗಿ ನಿಲ್ಲುವ ಹೈನುಗಾರಿಕೆ ಆರಂಭಿಸಬೇಕೆಂದರೆ ಅವಶ್ಯಕ ಸೌಲಭ್ಯಗಳೇ ಸಿಗುತ್ತಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಿದೆ.

ರೈತರ ಬವಣೆ ನೀಗಿಸಲು ಮುಂದಾಗಿದ್ದ ಗುಲ್ಬರ್ಗ-ಬೀದರ ಹಾಲು ಒಕ್ಕೂಟ, ಜಿಲ್ಲೆಯಲ್ಲಿ `ಕಾಮಧೇನು' ಯೋಜನೆ ಜಾರಿಗೊಳಿಸಲು ಸಿದ್ಧತೆ ಆರಂಭಿಸಿತ್ತು. ಸಣ್ಣ ರೈತರಿಗೆ, ಕೃಷಿ ಕೂಲಿಕಾರರಿಗೆ ಸಹಕಾರ ಬ್ಯಾಂಕಿನಿಂದ ಸಾಲ ನೀಡುವ ಮೂಲಕ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಒಕ್ಕೂಟ ಹೊಸ ಕಾರ್ಯಕ್ರಮವನ್ನು ಆರಂಭಿಸಿತು.

ಈ ಯೋಜನೆಯಡಿ ಹಾಲು ಒಕ್ಕೂಟದಿಂದ ಹೈನುಗಾರಿಕೆ ಆರಂಭಿಸುವ ರೈತರಿಗೆ ಸಾಲ ನೀಡಲಾಗುತ್ತದೆ. ಇದರಿಂದ ರೈತರು ಹಸು, ಎಮ್ಮೆಗಳನ್ನು ಖರೀದಿಸಿ ಹಾಲು ಉತ್ಪಾದನೆ ಮಾಡಬಹುದು. ಇದಕ್ಕಾಗಿ ಹಾಲು ಒಕ್ಕೂಟವು ಜಿಲ್ಲಾಡಳಿತ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಜೊತೆ ಚರ್ಚಿಸಿ, ಒಪ್ಪಂದ ಮಾಡಿಕೊಂಡಿದ್ದು, ರೈತರಿಗೆ ಅಗತ್ಯವಾದ ಆರ್ಥಿಕ ನೆರವನ್ನು ಜಿಲ್ಲಾ ಸಹಕಾರ ಬ್ಯಾಂಕ್ ನೀಡಲಿದೆ.

ಈಗಾಗಲೇ ಗುಲ್ಬರ್ಗ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಿ, ಯಶಸ್ವಿಯಾಗಿರುವ ಹಾಲು ಒಕ್ಕೂಟ, ಯಾದಗಿರಿ ಜಿಲ್ಲೆಯಲ್ಲೂ ಇದನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಗುಲ್ಬರ್ಗ ಜಿಲ್ಲೆಯಲ್ಲಿ ಬಡ ರೈತರಿಗೆ ಶೇ. 3 ರ ಬಡ್ಡಿದರದಲ್ಲಿ ರೂ. ಒಂದು ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ ಕೇವಲ 2 ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದ ಗುಲ್ಬರ್ಗ ಜಿಲ್ಲೆಯಲ್ಲಿ, ಇದೀಗ 20 ಸಾವಿರ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ.

ಇದೇ ಮಾದರಿಯಲ್ಲಿ ಯಾದಗಿರಿ ಜಿಲ್ಲೆಯಲ್ಲೂ ಸಾಲ ಸೌಲಭ್ಯ ಕಲ್ಪಿಸುವ ಯೋಜನೆ ಆರಂಭಿಸಲಾಗುತ್ತಿದ್ದು, ಈಗಾಗಲೇ ಹಾಲು ಒಕ್ಕೂಟದ ವತಿಯಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಜೊತೆ ಚರ್ಚಿಸಿದ್ದು, ರೂ. 4 ಕೋಟಿಯಷ್ಟು ಸಾಲ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ನೆನೆಗುದಿಗೆ ಬಿದ್ದ ಪುನಶ್ಚೇತನ:
ದೋರನಹಳ್ಳಿಯಲ್ಲಿರುವ ಹಾಲು ಶೀತಲೀಕರಣ ಘಟಕದ ಪುನಶ್ಚೇತನಕ್ಕಾಗಿ ರೂ.3.5 ಕೋಟಿ ಅವಶ್ಯಕತೆ ಇದೆ ಎಂಬ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಅನುಮೋದನೆ ನೀಡಿರುವ ಸರ್ಕಾರ ರೂ.1.6 ಕೋಟಿ ಮಂಜೂರು ಮಾಡಿದೆ. ಅದನ್ನು ವಿನಿಯೋಗಿಸಿ, ಹಾಲು ಶೀತಲೀಕರಣ ಘಟಕವನ್ನು ಪುನಶ್ಚೇತನ ಮಾಡುವ ಯೋಜನೆ ಹಾಲು ಒಕ್ಕೂಟದ್ದಾಗಿದೆ. 

ದೋರನಹಳ್ಳಿಯಲ್ಲಿ ಹಾಲು ಒಕ್ಕೂಟಕ್ಕೆ ಸೇರಿದ 160 ಜಾಗ ಇದ್ದು, ಅದರಲ್ಲಿ 80 ಎಕರೆ ಪ್ರದೇಶವನ್ನು ಬೀದರ್ ಪಶು ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ಅಲ್ಲಿ ಎಮ್ಮೆ ತಳಿ ಅಭಿವೃದ್ಧಿ ಕೇಂದ್ರವನ್ನು ತೆರೆಯಲಾಗುತ್ತಿದೆ. ಉಳಿದ 80 ಎಕರೆ ಪ್ರದೇಶದಲ್ಲಿ ಹಾಲು ಸಂಸ್ಕರಣೆ, ಶೀತಲೀಕರಣ ಘಟಕಗಳನ್ನು ಆರಂಭಿಸಲಾಗುವುದು. ಅಲ್ಲದೇ ಇದೇ ಸ್ಥಳದಲ್ಲಿ ಗೋ ಬ್ಯಾಂಕ್ ಕೂಡ ಸ್ಥಾಪಿಸುವುದಕ್ಕೂ ಚಿಂತನೆ ನಡೆದಿದೆ.

ಆದರೆ ಜಿಲ್ಲೆಯ ದೋರನಳ್ಳಿ ಹಾಲು ಶೀತಲೀಕರಣ ಘಟಕದ ಪುನಶ್ಚೇತನ ಹಾಗೂ ಹುಣಸಗಿಯಲ್ಲಿ ಕಿರು ಶಿಥಲೀಕರಣ ಘಟಕಗಳನ್ನು ಆರಂಭಿಸಲು ಸುಮಾರು ರೂ.21 ಲಕ್ಷ ಅನುದಾನದ ಅವಶ್ಯಕತೆ ಇದೆ. ಈ ಕುರಿತು ಹಾಲು ಒಕ್ಕೂಟವು ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದಿದ್ದು, ದೋರನಳ್ಳಿ ಶೀತಲೀಕರಣ ಘಟಕದ ಪುನಶ್ಚೇತನಕ್ಕಾಗಿ ರೂ.5.5 ಲಕ್ಷ ಅನುದಾನವನ್ನು ಬಿಆರ್‌ಜಿಎಫ್ ಅಡಿ ನೀಡುವಂತೆ ಮನವಿ ಮಾಡಿದೆ.

ಜಿಲ್ಲಾ ಉಸ್ತುವಾರಿ ಸಚಿವರೂ ಈ ಬಗ್ಗೆ ಸೂಚನೆ ನೀಡಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ತಿಳಿಸಿದ್ದಾರೆ. ಆದರೆ ಇದುವರೆಗೆ ಜಿಲ್ಲಾ ಪಂಚಾಯಿತಿಯಿಂದ ರೂ.5ಲಕ್ಷ ಅನುದಾನ ಬಿಡುಗಡೆ ಆಗದೇ ಇರುವುದರಿಂದ ದೋರನಳ್ಳಿ ಘಟಕದ ಪುನಶ್ಚೇತನ ಕಾರ್ಯ ಸ್ಥಗಿತಗೊಂಡಿದೆ. ಕೂಡಲೇ ಈ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಬಿಜೆಪಿ ರೈತ ಮೋರ್ಚಾ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ಒತ್ತಾಯಿಸುತ್ತಾರೆ.

ಇದರಿಂದ ಜಿಲ್ಲೆಯ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ. ಅಲ್ಲದೇ ಬೆಲೆ ಕುಸಿತ ಹಾಗೂ ನೀರಿನ ಅನಿಶ್ಚಿತತೆಯಿಂದಾಗಿ ದಿಕ್ಕು ತೋಚದಂತಾಗಿರುವ ರೈತರಿಗೆ ಸ್ವಲ್ಪವಾದರೂ ನೆಮ್ಮದಿ ನೀಡಿದಂತಾಗುತ್ತದೆ. ಕೂಡಲೇ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಬಿಆರ್‌ಜಿಎಫ್ ಅಡಿ ಅಥವಾ ಇನ್ನಾವುದಾದರೂ ಯೋಜನೆಯಡಿ ರೂ.5 ಲಕ್ಷ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.