ADVERTISEMENT

ಲಲಿತಾ ಅನಪೂರ ಬಿಜೆಪಿ ಸೇರ್ಪಡೆ

ಯಾದಗಿರಿ ಮತಕ್ಷೇತ್ರದಲ್ಲಿ ಮಹಿಳೆಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 12:37 IST
Last Updated 9 ಏಪ್ರಿಲ್ 2018, 12:37 IST
ನವದೆಹಲಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಬಿ.ಎಸ್.ಯಡಿಯೂರಪ್ಪ ಲಲಿತಾ ಅನಪೂರ ಅವರನ್ನು ಸ್ವಾಗತಿಸುವ ಮೂಲಕ ಬಿಜೆಪಿಗೆ ಬರಮಾಡಿಕೊಂಡರು
ನವದೆಹಲಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಬಿ.ಎಸ್.ಯಡಿಯೂರಪ್ಪ ಲಲಿತಾ ಅನಪೂರ ಅವರನ್ನು ಸ್ವಾಗತಿಸುವ ಮೂಲಕ ಬಿಜೆಪಿಗೆ ಬರಮಾಡಿಕೊಂಡರು   

ಯಾದಗಿರಿ: ಬಿಎಸ್‌ಆರ್ ಕಾಂಗ್ರೆಸ್‌ನ ನಾಯಕಿ, ಇಲ್ಲಿನ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಭಾನುವಾರ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.ಪಕ್ಷದ ಚಿಹ್ನ ಇರುವ ಶಲ್ಯ ಹಾಕುವ ಮೂಲಕ ಬಿ.ಎಸ್.ಯಡಿಯೂರಪ್ಪ ಲಲಿತಾ ಅನಪೂರ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು. ನಂತರ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು.

ಲಲಿತಾ ಅನಪೂರ ರಾಜಕೀಯ ಕುಟುಂಬ ಹಿನ್ನೆಲೆಯಿಂದ ಬಂದವರು. ತಂದೆ ಮೌಲಾಲಿ ಅನಪೂರ ಬಹುವರ್ಷ ಕಾಲ ಕಾಂಗ್ರೆಸ್‌ನಲ್ಲಿ ಇದ್ದವರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾದಗಿರಿ ಮತಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ನಿಂದ ನಿಂತು 12,900 ಮತ ಪಡೆದು ಅಚ್ಚರಿ ಮೂಡಿಸಿದ್ದರು. ಅಪ್ಪನ ಹಾದಿಯಲ್ಲಿ ಮಗಳು ಲಲಿತಾ ಅನಪೂರ ಸಾಗಿದ್ದು, 2008ರಲ್ಲಿ ಹಾಗೂ 2013ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಎರಡು ಬಾರಿ ಗೆದಿದ್ದಾರೆ. ಎರಡೂ ಅವಧಿಯಲ್ಲೂ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕಾರ್ಯಾನುಭವ ಹೊಂದಿದ್ದಾರೆ.

ಟಿಕೆಟ್ ಸಿಗುವ ಸಾಧ್ಯತೆ: ಲಲಿತಾ

ADVERTISEMENT

ಹೈದರಾಬಾದ್ ಕರ್ನಾಟಕ ಭಾಗದ ಮತಕ್ಷೇತ್ರಗಳಲ್ಲಿ ಬಿಜೆಪಿ ಮಹಿಳಾ ಕೋಟ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಯಾದಗಿರಿ ಮತಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಮಹಿಳೆಗೆ ಟಿಕೆಟ್‌ ನೀಡುವ ಕುರಿತು ಅಮಿತ್‌ ಶಾ ಹಾಗೂ ಬಿ.ಎಸ್.ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಕೋಲಿ ಸಮಾಜದ ಹಿಂದುಳಿದ ಮಹಿಳೆಯಾಗಿರುವ ಕಾರಣ ನನಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಅವರು ದೂರವಾಣಿಯಲ್ಲಿ ‘ಪ್ರಜಾವಾಣಿ’ ಮಾಹಿತಿ ನೀಡಿದರು.

ಲಲಿತಾ ಅನಪೂರ ಆವರು ಬಿಜೆಪಿ ಸೇರ್ಪಡೆಯಾಗಿರುವುದರಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿತರಲ್ಲಿ ತಳಮಳ ಶುರುವಾಗಿದೆ ಎನ್ನಲಾಗಿದೆ.ಹಲವು ಮತಕ್ಷೇತ್ರದಲ್ಲಿ ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಯಾದಗಿರಿಗೆ ಹಲವು ಬಾರಿ ಬಂದಿದ್ದರೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹಲವು ಮಂದಿ ಪ್ರಬಲ ಆಕಾಂಕ್ಷಿತರು ಇರುವುದರಿಂದ ಅಭ್ಯರ್ಥಿಗಳು ಯಾರು ಎಂಬುದು ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.ಈಗ ಲಲಿತಾ ಅನಪೂರ ಅವರ ಬಿಜೆಪಿ ಪ್ರವೇಶ ಕೂಡ ಹಲವು ನಾಯಕರಲ್ಲಿ ತಳಮಳ ಸೃಷ್ಟಿಸಿದೆ.

**

ಶ್ರೀರಾಮುಲು ನನ್ನ ರಾಜಕೀಯ ಮಾರ್ಗದರ್ಶಕರು. ಅವರು ನೀಡಿದ ಸಲಹೆಯಿಂದಾಗಿ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಅವರು ಟಿಕೆಟ್ ಕೊಡಿಸುತ್ತಾರೆ ಎಂಬ ಭರವಸೆ ನನಗಿದೆ – ಲಲಿತಾ ಅನಪೂರ, ಬಿಜೆಪಿ ನಾಯಕಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.