ADVERTISEMENT

ವೈದ್ಯರ ಮುಷ್ಕರ: ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:55 IST
Last Updated 11 ಅಕ್ಟೋಬರ್ 2011, 8:55 IST

ಯಾದಗಿರಿ: ಶಹಾಪುರ ತಾಲ್ಲೂಕು ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಸೋಮವಾರ ಜಿಲ್ಲೆಯಾದ್ಯಂತ ವೈದ್ಯರು, ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು. ಔಷಧಿ ಅಂಗಡಿಗಳು, ಸರ್ಕಾರಿ, ಖಾಸಗಿ ವೈದ್ಯರು ಸೇವೆಯಿಂದ ದೂರ ಉಳಿದಿದ್ದರಿಂದ ರೋಗಿಗಳು ಪರದಾಡುವಂತಾಯಿತು.

ಶಹಾಪುರ ತಾಲ್ಲೂಕು ಆಸ್ಪತ್ರೆಯ ವೈದ್ಯ ಡಾ. ಅನೀಲಕುಮಾರ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದರಿಂದ ವೈದ್ಯರಿಗೆ ರಕ್ಷಣೆ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ವೈದ್ಯರು, ಸೋಮವಾರ ಪ್ರತಿಭಟನೆ ನಡೆಸಿದರು.

ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ರೂಪಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ವೈದ್ಯರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ವೈದ್ಯರ ಮೇಲೆ ಪದೇ ಪದೇ ಹಲ್ಲೆ ಆಗುತ್ತಿದೆ. ವೈದ್ಯರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳದ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ವೈದ್ಯರು ನೆಮ್ಮದಿಯಿಂದ ವೃತ್ತಿ ನಡೆಸುವುದು ಕಷ್ಟಕರವಾಗಿದೆ. ವೈದ್ಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ರೋಗಿಗಳ ಚಿಕಿತ್ಸೆ ಮಹತ್ವದ ಜವಾಬ್ದಾರಿ ಹೊಂದಿರುವ ವೈದ್ಯರ ಮೇಲೆ ಈ ರೀತಿ ಹಲ್ಲೆ ಮಾಡುವುದರಿಂದ ವೈದ್ಯರ ಮಾನಸಿಕ ಸ್ಥೈರ್ಯ ಕುಗ್ಗಲಿದೆ. ಇದರಿಂದ ವೃತ್ತಿ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಕೂಡಲೇ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಎಸ್ಪಿ ಡಿ. ರೂಪಾ ಮಾತನಾಡಿ, ವೈದ್ಯರ ಮೇಲೆ ಆಗಿರುವ ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗುವುದು. ವೈದ್ಯರಿಗೆ ಯಾವುದೇ ಆತಂಕ ಬೇಡ. ಅಗತ್ಯ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಡಾ. ಹೊನಗುಂಟಿ, ಡಾ. ಪ್ರಕಾಶ, ಡಾ. ಸಿದ್ದೇಶ ಜಾಕಾ, ಡಾ. ಸಿ.ಎಂ. ಪಾಟೀಲ, ಡಾ. ನಾಗರಾಜ ವಾರದ ನೇತೃತ್ವದಲ್ಲಿ ಶಹಾಪುರ, ಸುರಪುರ ತಾಲ್ಲೂಕುಗಳ ವೈದ್ಯರು ಮನವಿ ಸಲ್ಲಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.