ADVERTISEMENT

ಶಹಾಪುರ: ಬಸ್ ನಿಲ್ದಾಣ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 6:10 IST
Last Updated 16 ಅಕ್ಟೋಬರ್ 2012, 6:10 IST

ಶಹಾಪುರ: ಶಹಾಪುರ-ಸುರಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಬಸ್ ಡಿಪೋದ ಬಳಿ 3.99ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣ ನಾಳೆ (ಅ.17) ಸಂಜೆ 7ಗಂಟೆಗೆ ಸಾರಿಗೆ ಸಚಿವ ಆರ್. ಅಶೋಕ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ರಾಜುಗೌಡ ನಾಯಕ ಜ್ಯೋತಿ ಬೆಳಗಿಸಲಿದ್ದಾರೆ. ಸಭೆ ಅಧ್ಯಕ್ಷತೆಯನ್ನು ಶಾಸಕ ಶರಣಬಸಪ್ಪ ದರ್ಶನಾಪೂರವಹಿಸಲಿದ್ದಾರೆ ಎಂದು ಸಾರಿಗೆ ನಿಗಮದ ಮೂಲಗಳು ತಿಳಿಸಿವೆ.

2007 ನವಂಬರ 27ರಂದು ಬಸ್ ನಿಲ್ಧಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಮುಂದಿನ ಒಂದು ವರ್ಷದಲ್ಲಿ ಕಾಮಗಾರಿ ಮುಕ್ತಾಯಗೊಳ್ಳುವ ಗುರಿ ನೀಡಲಾಗಿತ್ತು. ತಾಂತ್ರಿಕ ತೊಂದರೆ ಹಾಗೂ ಗುತ್ತಿಗೆದಾರ ಆಮೇಗತಿಯ ಕಾಮಗಾರಿಯಿಂದ ನಾಲ್ಕು ವರ್ಷಗಳ ಕಾಲ ಕಟ್ಟಡ ನಿರ್ಮಾಣಕ್ಕೆ ಬೇಕಾಯಿತು.

ಒಟ್ಟು ನಾಲ್ಕು ಎಕರೆ ಪ್ರದೇಶ ಬಸ್ ನಿಲ್ದಾಣಕ್ಕಾಗಿ ಜಾಗ ಕಾಯ್ದಿರಿಸಲಾಗಿದೆ. ಸದ್ಯ 2750ಚದುರ ಮೀಟರದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ. ಏಕಕಾಲಕ್ಕೆ 36 ಬಸ್ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. 14 ಮಳಿಗೆ ಕೇಂದ್ರ ಹಾಗೂ 4 ಸಿಬ್ಬಂದಿ ಕೋಣೆ ನಿಲ್ದಾಣದ ಮುಂದುಗಡೆ ಸುಂದರವಾದ ತೋಟವನ್ನು ನಿರ್ಮಿಸಲಾಗಿದೆ ಎಂದು ಸಾರಿಗೆ ಎಂಜಿನಿಯರರೊಬ್ಬರು ತಿಳಿಸಿದ್ದಾರೆ.

ಅವಸರ: ಉದ್ಘಾಟನೆಗೆ ಸಜ್ಜುಗೊಳಿಸಲಾಗಿರುವ ಬಸ್ ನಿಲ್ದಾಣದ ಕಾಮಗಾರಿ ಇನ್ನೂ ಅಪೂರ್ಣವಾಗಿದೆ ಅರೆಬರೆಯಲ್ಲಿ ಉದ್ಘಾಟನೆಗೊಳಿಸುವುದು ಯಾವ ಉದ್ದೇಶಕ್ಕಾಗಿ ಎಂಬುವುದು ಅರ್ಥವಾಗುತ್ತಿಲ್ಲ. ಇನ್ನೂ ಶೌಚಾಲಯದ ಸೆಫ್‌ಟಿಕ್ ಟ್ಯಾಂಕ ಕಟ್ಟಿಲ್ಲ. ಅಲ್ಲದೆ ಕೋಣೆಗಳು ನಿರ್ಮಿಸಿಲ್ಲ. ಅಲ್ಲದೆ ಕಂಪೌಂಡ ಗೋಡೆ ಕುಂಟುತ್ತಾ ಸಾಗಿದೆ.

ಇನ್ನೂ ಕಾಮಗಾರಿ ಪೂರ್ಣಗೊಳ್ಳಬೇಕೆಂದರೆ 3-4 ತಿಂಗಳು ಬೇಕು ಆದರೆ ಸಚಿವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತರಾತುರಿಯಲ್ಲಿ ಕಟ್ಟಡ ಉದ್ಘಾಟನೆಗೆ ಮುಂದಾಗಿರುವುದು ಸರಿಯಲ್ಲವೆಂದು ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ಎಸ್.ಎಂ.ಸಾಗರ ತಿಳಿಸಿದ್ದಾರೆ.

ಅ.18ರಂದು ಸಚಿವ ಸಂಪುಟ ಸಭೆ ನಡೆಯುತ್ತಿರುವುದರಿಂದ ಸಚಿವರ ದಂಡು ಆಗಮಿಸುತ್ತಿದ್ದು ಅವಸರದಲ್ಲಿ ಕಟ್ಟಡ ಉದ್ಘಾಟನೆಗೆ ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ಉದ್ಘಾಟನೆ ದಿನಾಂಕ ನಿಗದಿಯಾಗಿತ್ತು. ಸಚಿವ ಸಂಪುಟ ಸಭೆ ಮುಂದೂಡಿದಾಗ ಅನಿವಾರ್ಯವಾಗಿ ನಿಲ್ದಾಣ ಉದ್ಘಾಟನೆಯನ್ನು ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT