ADVERTISEMENT

ಸಣ್ಣಕೆರೆಗೆ ಇಳಿಯದ ಬೋಟ್‌

ಯಾದಗಿರಿ: ಲುಂಬಿನಿ ಉದ್ಯಾನಕ್ಕೆ ಬೇಕಿದೆ ಇನ್ನೂ ಸೌಲಭ್ಯ

ಚಿದಂಬರ ಪ್ರಸಾದ್
Published 25 ಜನವರಿ 2016, 9:53 IST
Last Updated 25 ಜನವರಿ 2016, 9:53 IST
ಯಾದಗಿರಿಯ ಲುಂಬಿನಿ ಉದ್ಯಾನದ ಸುತ್ತಲಿನ ಸಣ್ಣ ಕೆರೆಯಲ್ಲಿ ಕಳೆ ಬೆಳೆದಿರುವುದು
ಯಾದಗಿರಿಯ ಲುಂಬಿನಿ ಉದ್ಯಾನದ ಸುತ್ತಲಿನ ಸಣ್ಣ ಕೆರೆಯಲ್ಲಿ ಕಳೆ ಬೆಳೆದಿರುವುದು   

ಯಾದಗಿರಿ: ಬಹುದಿನಗಳ ಬೇಡಿಕೆಯಾಗಿದ್ದ ಸುಂದರ ಲುಂಬಿನಿ ಉದ್ಯಾನ ಇದೀಗ ಸಾರ್ವಜನಿಕರಿಗೆ ಮುಕ್ತವಾಗಿದೆ. ನಗರದ ಮಧ್ಯದಲ್ಲಿರುವ ಸಣ್ಣ ಕೆರೆಯ ನಡುವೆ ದ್ವೀಪದಂತೆ ಈ ಉದ್ಯಾನ ನಿರ್ಮಾಣವಾಗಿದ್ದು, ಇದೀಗ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಆರಂಭವಾಗಿವೆ.

ನಗರದ ಮಧ್ಯದಲ್ಲಿರುವ ಈ ಉದ್ಯಾನ ಎಲ್ಲರನ್ನೂ ಸೆಳೆಯುತ್ತಿದೆ. ಆಕರ್ಷಕ ನೆಲಹಾಸು, ಹುಲ್ಲುಹಾಸು, ಪಾದಚಾರಿ ಮಾರ್ಗ, ಮಕ್ಕಳ ಆಟಿಕೆಗಳು, ಕುಳಿತುಕೊಳ್ಳಲು ಬೆಂಚ್‌ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಂದರ ಗಿಡಮರಗಳಿಂದ ಕಂಗೊಳಿಸುತ್ತಿರುವ ಉದ್ಯಾನದ ಉದ್ಘಾಟನೆಯೂ ಆಗಿದೆ.

ಕಲಬುರ್ಗಿಯ ಅಪ್ಪನ ಕೆರೆಯ ಮಾದರಿಯಲ್ಲಿ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಅಲ್ಲಿ ಅಳವಡಿಸಿರುವ ಬೋಟಿಂಗ್‌ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಎರಡು ಬೋಟ್‌ಗಳು ನಗರಕ್ಕೆ ಬಂದಿವೆ.

ಸಣ್ಣ ಕೆರೆಯ ಸುತ್ತಲೂ ಬೇಲಿಯನ್ನು ಅಳವಡಿಸಲಾಗುತ್ತಿದೆ. ಇದರ ಮಧ್ಯದಲ್ಲಿ ಉದ್ಯಾನವಿದ್ದು, ಸುತ್ತಲಿನ ಕೆರೆಯ ನೀರಿನಲ್ಲಿ ಬೋಟಿಂಗ್‌ ವ್ಯವಸ್ಥೆ ಮಾಡಲು ಯೋಜಿಸಲಾಗಿದೆ. ಆದರೆ, ಕೆರೆಯಲ್ಲಿ ಇನ್ನೂ ನೀರಿನ ಸಂಗ್ರಹ ಆಗುತ್ತಿಲ್ಲ. ಇರುವ ಅಲ್ಪಸ್ವಲ್ಪ ನೀರಿನಲ್ಲಿ ಹುಲ್ಲು, ಮತ್ತಿತರ ಗಿಡಗಳು ಬೆಳೆದಿವೆ.

ಇವುಗಳನ್ನು ತೆರವುಗೊಳಿಸಬೇಕಾಗಿದ್ದು, ನೀರೀನ ಪೂರೈಕೆಯನ್ನೂ ಮಾಡಬೇಕಾಗಿದೆ. ಈ ಬಾರಿ ಮಳೆ ಇಲ್ಲದೇ ಇರುವುದರಿಂದ ಸಣ್ಣ ಕೆರೆಯೂ
ಬತ್ತಿದ್ದು, ಫಿಲ್ಟರ್ ಬೆಡ್‌ನಿಂದ ಅಲ್ಪ ಪ್ರಮಾಣದ ನೀರು ಕೆರೆಗೆ ಹರಿದು ಬರುತ್ತಿದೆ.

ಹೊಸಳ್ಳಿ ಕ್ರಾಸ್‌ ಬಳಿ ಇರುವ ನೀರು ಶುದ್ಧಿಕರಣ  ಘಟಕದಿಂದ, ನೇರವಾಗಿ ಕೆರೆಗೆ ಪೈಪ್‌ಲೈನ್‌ ವ್ಯವಸ್ಥೆ ಮಾಡಿದ್ದು, ಶುದ್ಧೀಕರಣ ಘಟಕದಲ್ಲಿನ ಹೆಚ್ಚುವರಿ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಹೀಗಾಗಿ ಬೇಸಿಗೆಯಲ್ಲಿಯೂ ಕೆರೆಯಲ್ಲಿ ಬೋಟಿಂಗ್‌ ಮಾಡುವ ಯೋಜನೆಯನ್ನು ಅಧಿಕಾರಿಗಳು ಹಾಕಿಕೊಂಡಿದ್ದಾರೆ.

ಇದೀಗ ಉದ್ಯಾನದ ಉದ್ಘಾಟನೆ ಆಗಿ ಐದು ತಿಂಗಳು ಕಳೆದಿವೆ. ಅಲ್ಲದೇ ಎರಡು ಬೋಟ್‌ಗಳು ನಗರದ ಸಣ್ಣ ಕೆರೆಗೆ ಬಂದಿವೆ. ಆದರೆ, ನೀರಿನ ಕೊರತೆಯಿಂದಾಗಿ ಬೋಟಿಂಗ್‌ ವ್ಯವಸ್ಥೆ ಇನ್ನೂ ಆರಂಭವಾಗುತ್ತಿಲ್ಲ. ಆದಷ್ಟು ಶೀಘ್ರ ಬೋಟಿಂಗ್‌ ಆರಂಭವಾದಲ್ಲಿ, ಉದ್ಯಾನ ಇನ್ನಷ್ಟು ಆಕರ್ಷಕ ತಾಣವಾಗಲಿದೆ ಎನ್ನುತ್ತಾರೆ ನಗರದ ನಾಗರಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.