ADVERTISEMENT

ಸತತ ಮಳೆ: ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 10:20 IST
Last Updated 23 ಜುಲೈ 2012, 10:20 IST

ಸುರಪುರ: ಪಟ್ಟಣ ಮತ್ತು ಸುತ್ತ ಮುತ್ತಲೂ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದೆ. ಜೂನ್ ತಿಂಗಳು ಮಳೆಯಿಲ್ಲದೆ ಕಳಾಹೀನವಾಗಿದ್ದ ರೈತನ ಮೊಗದಲ್ಲಿ ಈಗ ವರುಣನ ಕೃಪೆಯಿಂದ ಕಳೆ ಕಟ್ಟಿದೆ. ರೈತನ ಮನೆಯ ಮೂಲೆಯಲ್ಲಿ ತೆಪ್ಪಗೆ ಬಿದ್ದಿದ್ದ ಕೃಷಿ ಉಪಕರಣಗಳು ಹೊರಗೆ ಬಂದಿವೆ. ಕೊಟ್ಟಿಗೆಯಲ್ಲಿ ಹಾಯಾಗಿದ್ದ ಎತ್ತುಗಳು ಕೃಷಿ ಕಾರ್ಯಕ್ಕೆ ಸಿದ್ಧವಾಗಿವೆ.

ಜೂನ್ ತಿಂಗಳಲ್ಲಿ ಬಂದ ಅಲ್ಪ ಸ್ವಲ್ಪ ಮಳೆಯನ್ನು ನಂಬಿಕೊಂಡು ಕೆಲ ರೈತರು ಭೂಮಿಯನ್ನು ಹಸನು ಮಾಡಿದ್ದರು. ಅದರೆ ಬಹುತೇಕ ರೈತರು ಗಗನದತ್ತ ಮುಖ ಮಾಡಿಕೊಂಡು ಕಾಲಕಳೆಯುತ್ತಿದ್ದರು. ಕೊನೆಗೂ ಜುಲೈ ತಿಂಗಳಲ್ಲಿ ಭರದ ಮಳೆ ಬರುತ್ತಿದ್ದು ಆತಂಕದಲ್ಲಿದ್ದ ರೈತ ಕೃಷಿ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದೆ.

ಮುಂಗಾರಿನಲ್ಲಿ ರೈತನ ಕೈಹಿಡಿಯುತ್ತಿದ್ದ ಹೆಸರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಆದರೂ ಈಗ ಸೂರ್ಯಕಾಂತಿ, ತೊಗರಿ, ಸಜ್ಜೆ, ಜೋಳ ಬಿತ್ತಬಹುದಾಗಿದೆ. ಈ ಬೀಜಗಳು ರಿಯಾಯತಿ ದರದಲ್ಲಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿವೆ. ರೈತರು ಕೃಷಿ ಪಾಸ್ ಬುಕ್ ಅಥವಾ ಪಹಣಿ ಮತ್ತು ಗುರುತಿನ ಪತ್ರ ತಂದು ಬೀಜ ಖರೀದಿಸಬಹುದೆಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿತ್ತನೆ ಗುರಿ: ಬತ್ತ, ಹೈಬ್ರಿಡ್ ಜೋಳ. ಮೆಕ್ಕೆ ಜೋಳ, ಸಜ್ಜೆ ಸೇರಿದಂತೆ ಇತರ ತೃಣ ಧಾನ್ಯಗಳ ಬಿತ್ತನೆ ಗುರಿ ನೀರಾವರಿ ಪ್ರದೇಶದಲ್ಲಿ 19,650 ಹೆಕ್ಟೇರ್‌ಗಳಲ್ಲಿ, ಖುಷ್ಕಿ ಪ್ರದೇಶದಲ್ಲಿ 1,510 ಹೆಕ್ಟೇರ್‌ಗಳಲ್ಲಿ ಹೊಂದಲಾಗಿದೆ.

ತೊಗರಿ, ಹೆಸರು, ಹುರುಳಿ, ಅಲಸಂದಿ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆ ಗುರಿ ನೀರಾವರಿ ಪ್ರದೇಶದಲ್ಲಿ 5300 ಹೆಕ್ಟೇರ್, ಖುಷ್ಕಿ ಪ್ರದೇಶದಲ್ಲಿ 23375 ಹೆಕ್ಟೇರ್‌ಗಳಲ್ಲಿ ಹೊಂದಲಾಗಿದೆ.

ಶೇಂಗಾ, ಎಳ್ಳು, ಸೂರ್ಯಕಾಂತಿ, ಔಡಲ, ಗುರೆಳ್ಳು, ಸಾಸುವೆ ಸೇರಿದಂತೆ ಎಣ್ಣೆಕಾಳು ಧಾನ್ಯಗಳ ಬಿತ್ತನೆ ಗುರಿ ನೀರಾವರಿ ಪ್ರದೇಶದಲ್ಲಿ 10,250 ಹೆಕ್ಟೇರ್, ಖುಷ್ಕಿ ಪ್ರದೇಶದಲ್ಲಿ 29,870 ಹೆಕ್ಟೇರ್‌ಗಳಲ್ಲಿ ಹೊಂದಲಾಗಿದೆ. ಹತ್ತಿ, ಕಬ್ಬು ಸೇರಿದಂತೆ ಇತರ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ನೀರಾವರಿ ಪ್ರದೇಶದಲ್ಲಿ 7 ಸಾವಿರ ಹೆಕ್ಟೇರ್, ಖುಷ್ಕಿ ಪ್ರದೇಶದಲ್ಲಿ 1,200 ಹೆಕ್ಟೇರ್‌ಗಳಲ್ಲಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಆದರೆ ಮಳೆ ಅಭಾವದಿಂದ ಈ ಗುರಿ ಶೇಕಡಾ 25 ರಷ್ಟು ಮುಟ್ಟಿಲ್ಲ. ಈಗ ಮಳೆ ಸುರಿಯುತ್ತಿದೆ. ಆದರೆ ಮಳೆ ಪ್ರಮಾಣ ಪಟ್ಟಣ ಪ್ರದೇಶದಲ್ಲಿ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಇದರಿಂದ ರೈತರ ಆತಂಕ ದೂರವಾಗಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಕೇಸರಸಿಂಗ್ ಹಜಾರೆ ಹೇಳುತ್ತಾರೆ.

ಮಳೆ ಪ್ರಮಾಣ: ವಾಡಿಕೆಯಂತೆ ಜುಲೈ ತಿಂಗಳವರೆಗೆ ಪ್ರತಿ ವಲಯದಲ್ಲಿ 300 ಮಿ.ಮೀ. ಗೂ ಅಧಿಕ ಮಳೆ ಬರಬೇಕಿತ್ತು. ಆದರೆ ಮಳೆ ಪ್ರಮಾಣ ಕಡಿಮೆಯಾಗಿದೆ. ಜುಲೈ ತಿಂಗಳವರೆಗೆ ವಲಯವಾರು ಬಂದ ಮಳೆ ಪ್ರಮಾಣ ಈ ರೀತಿ ಇದೆ. ಸುರಪುರ ವಲಯ 163.4 ಮಿ.ಮೀ., ಕೆಂಭಾವಿ 95.1 ಮಿ.ಮೀ., ಹುಣಸಗಿ 154.9.6 ಮಿ.ಮೀ., ಕಕ್ಕೇರಾ 121.9 ಮಿ.ಮೀ., ಕೊಡೇಕಲ್ 138 ಮಿ.ಮೀ., ನಾರಾಯಣಪುರ 149.2 ಮಿ.ಮೀ.. ವಾಡಿಕೆಯ ಅರ್ಧದಷ್ಟು ಮಳೆ ಬಂದಿಲ್ಲ. ಆದರೂ ರೈತ ಬಿತ್ತನೆ ಆರಂಭಿಸಿದ್ದಾನೆ.

ಕಾಲುವೆಗೆ ನೀರಿಲ್ಲ: ಇದುವರೆಗೂ ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸಿಲ್ಲ. ಇದರಿಂದ ನೀರಾವರಿ ಆಧಾರಿತ ಬಿತ್ತನೆ ಆರಂಭವಾಗಿಲ್ಲ. ಕಳೆದ ಬಾರಿಯ ಹಿಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸದಿದ್ದರಿಂದ ರೈತರ ಒಂದು ಬೆಳೆ ಕೈಗೆ ಬರಲಿಲ್ಲ. ಹಳ್ಳಕ್ಕೆ ಪಂಪಸೆಟ್ ಮಾಡಿದ ರೈತರು ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ.

`ಈಗ ಗೊಬ್ಬರ ಬೆಲೆ ಗಗನಕ್ಕೇರಿದೆ. ಜೊತೆಗೆ ಕೃಷಿ ಕಾರ್ಮಿಕರ ಕೂಲಿ ಹಣವೂ ಹೆಚ್ಚಾಗಿದೆ. ಕೃಷಿ ಉತ್ಪನ್ನಗಳಿಗೆ ಬೆಲೆ ಮಾತ್ರ ಇಲ್ಲ.  ನಮಗೆ ಕೃಷಿ ಬಿಟ್ಟು ಬೇರೆ  ಗೊತ್ತಿಲ್ಲ. ಲಾಭ ಆಗಲಿ ಹಾನಿ ಆಗಲಿ ಭೂಮಿ ತಾಯಿಯನ್ನೆ ನೆಚ್ಚಿಕೊಂಡಿದ್ದೇವೆ. ಸರ್ಕಾರ ನಮ್ಮ ನೆರವಿಗೆ ಬಂದರೆ ಒಳ್ಳೆಯದು~ ಎಂಬುದು ಕಾಮನಟಗಿಯ ರೈತ ನರಸಿಂಗರಾವ ಕುಲಕರ್ಣಿ ಅವರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.